ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನ 1,300ಕ್ಕೂ ಅಧಿಕ ಅರ್ಜಿಗಳು ಸ್ವೀಕಾರಗೊಂಡಿವೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂ.12ರಿಂದ ಆರಂಭವಾಗಿದೆ.
ಆನ್‌ಲೈನ್ ಮೂಲಕ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಪ್ರಾಥಮಿಕ ಶಾಲೆಗೆ 850 ಹಾಗೂ ಪ್ರೌಢಶಾಲಾ ವಿಭಾಗದಿಂದ 450ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದರಿಂದ ಕ್ಷಣಕ್ಷಣಕ್ಕೂ ಅಂಕಿ-ಅಂಶ ಬದಲಾಗುತ್ತಿರುತ್ತದೆ. ಅಭ್ಯರ್ಥಿಗಳು ಯಾವ ಸಂದರ್ಭದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.
ಬುಧವಾರ ರಾತ್ರಿ 8ರ ಸುಮಾರಿಗೆ ಪ್ರಾಥಮಿಕ ಶಾಲಾ ವಿಭಾಗದ ಘಟಕದ ಒಳಗೆ ವರ್ಗಾವಣೆ ಕೋರಿ 640, ವಿಭಾಗ ಹಾಗೂ ಘಟಕದಿಂದ ಹೊರಗೆ ವರ್ಗಾವಣೆ ಕೋರಿ 100, ವಿಭಾಗದ ಒಳಗೆ ಘಟಕದ ಹೊರಗೆ ವರ್ಗಾವಣೆ ಕೋರಿ 75 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರೌಢಶಾಲಾ ವಿಭಾಗದಿಂದ ಘಟಕದ ಒಳಗೆ 370, ವಿಭಾಗ ಹಾಗೂ ಘಟಕದಿಂದ ಹೊರಗೆ 50 ಮತ್ತು ವಿಭಾಗದ ಒಳಗೆ ಘಟಕದ ಹೊರಗೆ ವರ್ಗಾವಣೆ ಕೋರಿ 35 ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಹಿಂದೆಯೇ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದ ಶಿಕ್ಷಕರಿಗೆ ತಮ್ಮ ಅರ್ಜಿಯಲ್ಲಿ ಕೆಲವು ತಿದ್ದುಪಡಿ ಮಾಡಿ, ಪ್ರಸ್ತುತ ಕಾರ್ಯಭಾರಕ್ಕೆ ಸಂಬಂಧಿಸಿದಂತೆ ಹೊಸ ವಿಷಯಗಳ ಅಪ್‌ಡೇಟ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅರ್ಜಿ ಸ್ವೀಕೃತಿಯ ನಂತರ ಪ್ರಕ್ರಿಯೆಗಳು ಹೊಸ ಅರ್ಜಿ ಮತ್ತು ಈಗಾಗಲೇ ಬಂದಿರುವ ಅರ್ಜಿಗಳ ಜತೆಯಲ್ಲೇ ನಡೆಯಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಸಮಸ್ಯೆಯಾಗಿತ್ತು: ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಬುಧವಾರ ಬೆಳಗ್ಗೆ ಪ್ರಯತ್ನಿಸಿದ್ದ ಶಿಕ್ಷಕರಿಗೆ ನಿರಾಸೆಯಾಗಿತ್ತು. ತಾಂತ್ರಿಕ ದೋಷದಿಂದಾಗಿ ಕೆಲ ಗಂಟೆಗಳ ಕಾಲ ಅರ್ಜಿ ಸ್ವೀಕಾರ ಸಮರ್ಪಕವಾಗಿ ಆಗಿರಲಿಲ್ಲ. ತಾಂತ್ರಿಕ ಸಮಸ್ಯೆ ಕುರಿತು ಶಿಕ್ಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಸಮಸ್ಯೆ ಬಗೆಹರಿದಿದೆ. ಮಧ್ಯಾಹ್ನದ ನಂತರ ಸರಾಗವಾಗಿ ಅರ್ಜಿ ಸ್ವೀಕಾರವಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ವರ್‌ಗಳನ್ನು ಕ್ಷಣಕ್ಷಣಕ್ಕೂ ಮಾನಿಟರ್ ಮಾಡುತ್ತಿದ್ದೇವೆ. ಹಳೇ ಅರ್ಜಿಗಳನ್ನು ಪರಿಶೀಲಿಸುವ ಕಾರ್ಯದ ಜತೆಗೆ ಹೊಸ ಅರ್ಜಿ ಸ್ವೀಕಾರ ನಡೆಯುತ್ತಿದೆ. ಯಾವುದೇ ತಾಂತ್ರಿಕ ದೋಷ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಮೊದಲ ದಿನ 1,300ಕ್ಕೂ ಅಧಿಕ ಅರ್ಜಿಗಳು ಬಂದಿವೆ.
-ಡಾ.ಪಿ.ಸಿ.ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ