Advertisement

ಹಿಂದೂ ಸಾಗರದಲ್ಲಿ 120 ಯುದ್ಧನೌಕೆ‌ ನಿಯೋಜನೆ: ಜ|ರಾವತ್‌

12:38 AM Dec 12, 2020 | mahesh |

ಹೊಸದಿಲ್ಲಿ: ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಜಗತ್ತಿನ 120ಕ್ಕೂ ಅಧಿಕ ಯುದ್ಧನೌಕೆಗಳು ನಿಯೋಜನೆಗೊಂಡಿವೆ. ಪ್ರಮುಖ ದೇಶಗಳು ಇಲ್ಲಿನ ಆಯಕಟ್ಟಿನ ನೆಲೆಗಳ ಮೇಲೆ ಹಿಡಿತ ಸಾಧಿಸುವ ಸ್ಪರ್ಧೆಗಿಳಿದಿವೆ ಎಂದು ರಕ್ಷಣ ಸಿಬಂದಿ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ನಡೆದ “ಜಾಗತಿಕ ಭದ್ರತಾ ಶೃಂಗಸಭೆ’ಯ ವೆಬಿನಾರ್‌ನಲ್ಲಿ ಅವರು, ಈ ಸ್ಫೋಟಕ ಸಂಗತಿ ತಿಳಿಸಿದ್ದಾರೆ. “ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಭಾಗವಾಗಿ ಹಲವು ರಾಷ್ಟ್ರಗಳ 120ಕ್ಕೂ ಅಧಿಕ ಯುದ್ಧನೌಕೆಗಳು ನಿಯೋಜನೆಗೊಂಡಿವೆ. ಆದರೂ ಇದು ವರೆಗೂ ಈ ಪ್ರದೇಶ ಶಾಂತಿ ಕಾಯ್ದುಕೊಂಡು ಬಂದಿದೆ’ ಎಂದು ವಿಶ್ಲೇಷಿಸಿದರು.

ಭಾರತಕ್ಕೆ ಸವಾಲು
“ಇಲ್ಲಿನ ಆಯಕಟ್ಟಿನ ಸ್ಥಳಗಳಿಗಾಗಿ ನಡೆಯುತ್ತಿರುವ ಸ್ಪರ್ಧೆಗೆ ಭಾರತವೂ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸಾಗರಸೀಮೆಯ ಸ್ಪರ್ಧೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಇಲ್ಲಿ ನಾವು ಪ್ರಾದೇಶಿಕ ಶಕ್ತಿಯಾಗಿ ಬೆಳೆಯುವ ಸವಾಲನ್ನೂ ಹೊಂದಿದ್ದೇವೆ. ನಮ್ಮ ಭದ್ರತಾ ಪಡೆಗಳ ಬಲ ಹೆಚ್ಚಿಸುವಂಥ ದೀರ್ಘ‌ಕಾಲದ ರಚನಾತ್ಮಕ ಕಾರ್ಯ ತಂತ್ರಗಳ ಅಳವಡಿಕೆಯ ಆವಶ್ಯಕತೆ ಬಹಳ ಇದೆ’ ಎಂದು ಅಭಿಪ್ರಾಯಪಟ್ಟರು.

“ಸದೃಢ ಭಾರತ ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ಶಾಂತಿ ಮತ್ತು ಸುಸ್ಥಿರ ಭದ್ರತೆಯ ಪರಿಸರ ನಿರ್ಮಾಣದ ಅನಿವಾರ್ಯತೆಯೂ ನಮ್ಮ ಎದುರಿದೆ. ಕಠಿನ ನೆರೆಹೊರೆಯ ರಾಷ್ಟ್ರಗಳೊಂದಿಗೆ ನಾವಿದ್ದರೂ ಇದನ್ನು ನಾವು ಸಾಧಿಸಬೇಕಾಗುತ್ತದೆ’ ಎಂದು ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next