Advertisement

100 ಪೊಲೀಸರ ಸಸ್ಪೆಂಡ್‌, ಖಾಕಿ ಮೇಲೆ ಸಿಎಂ ಕಣ್ಣು

01:11 PM Mar 24, 2017 | Karthik A |

ಲಕ್ನೋ: ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್‌ ‘ನಾಯಕ್‌’ ಸಿನಿಮಾದ ಹೀರೋ ಮಾದರಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ! ಕಾನೂನು ವ್ಯವಸ್ಥೆ ಮೇಲೆ ಕಣ್ಣಿಟ್ಟಿರುವ ಯೋಗಿ ಆದಿತ್ಯನಾಥ್‌, ಅಧಿಕಾರಕ್ಕೆ ಬಂದ ಬಳಿಕ 100 ಪೊಲೀಸರನ್ನು ಅಮಾನತು ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇನ್ಸ್‌ಪೆಕ್ಟರ್‌, ಕಾನ್‌ಸ್ಟೆಬಲ್‌ಗ‌ಳು ಸೇರಿದ್ದಾರೆ. ಗಾಜಿಯಾಬಾದ್‌, ಮೀರತ್‌, ನೋಯ್ಡಾದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದು, ನಿಯಂತ್ರಿಸಲು ವಿಫ‌ಲರಾದವರಿಗೆ ಈ ಶಾಸ್ತಿ ಪ್ರಾಪ್ತಿಯಾಗಿದೆ. ಡಿಜಿಪಿ ಜಾವೇದ್‌ ಅಹ್ಮದ್‌ ಕೆಲವು ದಿನಗಳಿಂದ ಕರ್ತವ್ಯ ಲೋಪ ಎಸಗುತ್ತಿರುವವರನ್ನು ಪಟ್ಟಿ ಮಾಡಿ ಈ ಕ್ರಮ ಕೈಗೊಂಡಿದ್ದಾರೆ.

Advertisement

ಠಾಣೆಗೆ ದಿಢೀರ್‌ ಭೇಟಿ: ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿಎಂ ಕಾನೂನು ಸುವ್ಯವಸ್ಥೆಯ ಪರಿಶೀಲನೆಗೆ ಮುಂದಾಗಿದ್ದು, ಹಜರತ್‌ಗಂಜ್‌ ಪೊಲೀಸ್‌ ಠಾಣೆಗೆ ದಿಢೀರನೆ ಭೇಟಿ ನೀಡಿ ಅಚ್ಚರಿ ಹುಟ್ಟಿಸಿದರು. ಬೆಳಗ್ಗೆ ಅಧಿಕಾರಿಗಳು ಠಾಣೆ ತಲುಪುವ ಹೊತ್ತಿಗೆ ಅಲ್ಲಿ ಸಿಎಂ ಇದ್ದರು! 

ಕಾನೂನು ಹೋರಾಟ?: ಅಕ್ರಮ ಕಸಾಯಿಖಾನೆಗಳ ಬಾಗಿಲು ಮುಚ್ಚಲು ಮುಂದಾಗಿರುವ ಉ.ಪ್ರ. ಸರಕಾರದ ವಿರುದ್ಧ ಅಖೀಲ ಭಾರತ ಮಾಂಸ ರಫ್ತುಗಾರರ ಅಸೋಸಿಯೇಶನ್‌ ಕಾನೂನು ಹೋರಾಟ ನಡೆಸಲು ಚಿಂತಿಸಿದೆ. ‘ದೇಶದ ಒಟ್ಟಾರೆ ಮಾಂಸದ ರಫ್ತಿನಲ್ಲಿ ಉ.ಪ್ರ.ದ ಪಾಲು ಶೇ.50ರಷ್ಟಿದ್ದು, 25 ಲಕ್ಷ ಜನ ನೇರ ಮತ್ತು ಪರೋಕ್ಷವಾಗಿ ಈ ಉದ್ದಿಮೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯಕ್ಕೇ ನಷ್ಟ’ ಎಂದು ಹೇಳಿದೆ.

ಕಸ ಗುಡಿಸಿದ ಸಚಿವ!


ಯೋಗಿ ಸರಕಾರದ ‘ಸ್ವಚ್ಛ ಭಾರತ್‌’ ಕಚೇರಿಯಿಂದಲೇ ಶುರುವಾಗಿದೆ!  ಪರಿಸರ ಮತ್ತು ಭೂ ಅಭಿವೃದ್ಧಿ ಸಚಿವ ಉಪೇಂದ್ರ ತಿವಾರಿ ವಿಧಾನಸೌಧದಲ್ಲಿನ ಕೊಠಡಿಯಲ್ಲಿ ಕಸಕಡ್ಡಿಗಳು ಇದ್ದಿದ್ದರಿಂದ ಕೋಪಗೊಂಡು ಅಧಿಕಾರಿಗಳು, ಸಿಬಂದಿಗಳ ಎದುರಿನಲ್ಲೇ ಕಸಬರಿಗೆ ಹಿಡಿದು ಕೊಠಡಿ, ಸುತ್ತಮುತ್ತಲ ಸ್ಥಳಗಳನ್ನು ಗುಡಿಸಿದ್ದಾರೆ. ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ  ವೈರಲ್‌ ಆಗಿದೆ.

ಟುಂಡೇ ಕಬಾಬಿಗೆ ಚಿಕನ್‌ ಬಂತು!
ಟುಂಡೇ ಕಬಾಬಿ! ಲಕ್ನೋದಲ್ಲಿನ 100 ವರ್ಷ ಹಳೆಯದಾದ ನಾನ್‌ವೆಜ್‌ ಹೊಟೇಲ್‌. ಬಫೇಲೋ ಕಬಾಬ್‌ಗೆ ಜನಪ್ರಿಯವಾಗಿರುವ ಈ ಹೊಟೇಲ್‌ಗ‌ೂ ಅಕ್ರಮ ಕಸಾಯಿಖಾನೆ ನಿಷೇಧದ ಬಿಸಿ ತಟ್ಟಿದೆ! ಹೊಟೇಲ್‌ ಆರಂಭದಿಂದ ಇಲ್ಲಿ ಯಾವತ್ತೂ ಬೇರೆ ಮಾಂಸದ ಖಾದ್ಯಗಳನ್ನು ಸಿದ್ಧ ಮಾಡಿರಲಿಲ್ಲ. ಆದರೆ, ಗುರುವಾರ ಇಲ್ಲಿ ‘ಮಟನ್‌ ಮತ್ತು ಚಿಕನ್‌ ಕಬಾಬ್‌ ಲಭ್ಯವಿದೆ’ ಎಂಬ ಫ‌ಲಕವನ್ನು ನೇತುಹಾಕಲಾಗಿತ್ತು. ಈ ಕಾರಣದಿಂದಾಗಿಯೇ ಮಧ್ಯಾಹ್ನದ ಹೊತ್ತಿನಲ್ಲೂ 15-20 ಕುರ್ಚಿಗಳು ಖಾಲಿ ಇದ್ದವು!

Advertisement
Advertisement

Udayavani is now on Telegram. Click here to join our channel and stay updated with the latest news.

Next