Advertisement

ಭಾರೀ ಬಿರುಗಾಳಿ, ಸಿಡಿಲು ಸಹಿತ ಮಳೆ: ನಾಲ್ಕು ರಾಜ್ಯಗಳಲ್ಲಿ ಆತಂಕ

06:00 AM May 05, 2018 | |

ನವದೆಹಲಿ: ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಧೂಳು ಬಿರುಗಾಳಿ, ಮಳೆ, ಸಿಡಿಲಿನ ಅಬ್ಬರವು 124 ಮಂದಿಯನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಇದೀಗ ಮತ್ತೆ 4 ರಾಜ್ಯಗಳಲ್ಲಿ ಆತಂಕ ಮನೆಮಾಡಿದೆ. 48 ಗಂಟೆಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಶುಕ್ರವಾರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಕೇಂದ್ರ ಸರ್ಕಾರವೂ ಈ ಕುರಿತು ಮಾಹಿತಿ ನೀಡಿದ್ದು, ರಾಜಸ್ಥಾನದಲ್ಲಿ ವಿಶೇಷವಾಗಿ ಧೂಳು ಬಿರುಗಾಳಿ ಬೀಸಲಿದೆ ಎಂದಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರಾಗಳಲ್ಲಿಯೂ ಗುಡುಗು ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಕೇರಳದಲ್ಲಿ ಮಳೆ: ಇವೆಲ್ಲದರ ಜತೆಗೆ ಕೇರಳ, ತಮಿಳುನಾಡುಗಳಲ್ಲಿಯೂ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ ತಿಳಿಸಿದೆ. ಈ ನಡುವೆ, ಬುಧವಾರ ಹಾಗೂ ಗುರುವಾರದ ಧೂಳಿನ ಬಿರುಗಾಳಿಯಿಂದ ಮೃತಪಟ್ಟವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ  ಪಂಜಾಬ್‌ನಲ್ಲಿ 2, ತೆಲಂಗಾಣದಲ್ಲಿ 8, ಉತ್ತರಾಖಂಡದಲ್ಲಿ 6 ಮಂದಿ ಅಸುನೀಗಿದ್ದಾರೆ. 

ಹಾಳಾಗಿದ್ದ ವ್ಯವಸ್ಥೆ : ಧೂಳು ಬಿರುಗಾಳಿ ಬಗ್ಗೆ ಮುನ್ಸೂಚನೆ ನೀಡಬೇಕಾಗಿದ್ದ ಹವಾಮಾನ ಇಲಾಖೆಯ ವ್ಯವಸ್ಥೆ ಹಾಳಾಗಿತ್ತು. ಹೀಗಾಗಿ, ಈ ಬಗ್ಗೆ ಮುನ್ಸೂಚನೆ ನೀಡಲು ಸಾಧ್ಯವಾಗಿರಲಿಲ್ಲ.

ಯೋಗಿ ಪ್ರವಾಸ ಮೊಟಕು
ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಶುಕ್ರವಾರ ಲಕ್ನೋಗೆ ವಾಪಸಾಗಿ ದ್ದಾರೆ. ತಮ್ಮ ರಾಜ್ಯದಲ್ಲಿ 73 ಮಂದಿ ಧೂಳು ಬಿರುಗಾಳಿ ಯಿಂದ ಅಸುನೀಗಿದ್ದರೂ, ಸಿಎಂ ಮಾತ್ರ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದ  ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಗಿ ಹಿಂತಿರುಗಿದ್ದಾರೆ. ಶನಿವಾರ ಅವರು ಆಗ್ರಾ ಸೇರಿದಂತೆ ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಯೋಗಿ ಕರ್ನಾಟಕ ಪ್ರವಾಸದ ಬಗ್ಗೆ ಗುರುವಾರವಷ್ಟೇ ಸಿಎಂ ಸಿದ್ದರಾಮಯ್ಯ ಅವರೂ ಟೀಕಿಸಿ, ಟ್ವೀಟ್‌ ಮಾಡಿದ್ದರು. ಉತ್ತರಪ್ರದೇಶದ ರಾಜಕೀಯ ಪಕ್ಷಗಳಿಂದಲೂ ಟೀಕೆ ಕೇಳಿಬಂದಿತ್ತು.

Advertisement

ತಾಜ್‌ಮಹಲ್‌ಗೆ ಹಾನಿ
ಏ. 11 ಮತ್ತು ಬುಧವಾರದಂದು ಬೀಸಿದ ಧೂಳಿನ ಬಿರುಗಾಳಿ  ತಾಜ್‌ಮಹಲ್‌, ಫ‌ತೇಪುರಸಿಕ್ರಿಯ ಕೋಟೆ, ಐತಿಹಾಸಿಕ ಸ್ಥಳಗಳಿಗೆ ಹಾನಿ ಮಾಡಿದೆ. ತಾಜ್‌ಮಹಲ್‌ನ ರಾಯಲ್‌ ಗೇಟ್‌,  ಛತ್ರಿ ದಕ್ಷಿಣ ಭಾಗದ ಪ್ರವೇಶ ದ್ವಾರದ ಕಂಬಗಳಿಗೆ ಏ.11ರಂದು ಬೀಸಿದ್ದ ಗಾಳಿಯಿಂದ ಹಾನಿಯಾಗಿತ್ತು. ಈಗ, ಫ‌ತೇಪುರ ಸಿಕ್ರಿ ಕೋಟೆಯ ಪ್ರಮುಖ ಭಾಗಗಳಿಗೆ ಹಾನಿಯಾಗಿದೆ. ಭಾರತೀಯ ಪುರಾತತ್ವ ಇಲಾಖೆ ಶೀಘ್ರದಲ್ಲಿಯೇ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ.

ಕರ್ನಾಟಕದಲ್ಲಿರುವ ಸಿಎಂ ಯೋಗಿ ಕೂಡಲೇ ಉ.ಪ್ರದೇಶಕ್ಕೆ ಹಿಂತಿರುಗಬೇಕು.  ಜನ ನಿಮ್ಮನ್ನು ಆರಿಸಿದ್ದು ಅವರ ಕಷ್ಟಗಳಲ್ಲಿ ಸ್ಪಂದಿಸಬೇಕೆಂದೇ ವಿನಾ ಚುನಾವಣೆ ನಡೆಯುವ ರಾಜ್ಯದಲ್ಲಿ ರಾಜಕೀಯ ಮಾಡಲು ಅಲ್ಲ.  ಈಗ,  ಹಿಂತಿರುಗದಿದ್ದರೆ ಸಿಎಂ ಯೋಗಿ  ಕರ್ನಾಟಕದಲ್ಲೇ ಒಂದು ಮಠ ನಿರ್ಮಿಸಿ, ಅಲ್ಲೇ ಉಳಿಯಲಿ.
ಅಖೀಲೇಶ್‌ ಯಾದವ್‌ ಉತ್ತರ ಪ್ರದೇಶ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next