ಪುಣೆ: ಮಹಾರಾಷ್ಟ್ರದಲ್ಲಿ ಹತ್ತಕ್ಕೂ ಅಧಿಕ ಸಚಿವರು ಹಾಗೂ 20 ಶಾಸಕರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದಾಗಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ(ಜನವರಿ 01) ತಿಳಿಸಿದ್ದಾರೆ.
ಇದನ್ನೂ ಓದಿ:ಕಿಡಿಗೇಡಿಗಳಿಂದ ಸರ್ಕಾರಿ ಶಾಲೆಯಲ್ಲೇ ಎಣ್ಣೆ ಪಾರ್ಟಿ, ದಾಖಲಾತಿಗಳು ಚೆಲ್ಲಾಪಿಲ್ಲಿ
ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ನಿರ್ಬಂಧಗಳನ್ನ ಜಾರಿಗೊಳಿಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ 24ಗಂಟೆಗಳ ಅವಧಿಯಲ್ಲಿ 8,067 ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ನಾವು ಇತ್ತೀಚೆಗೆ ವಿಧಾನಸಭೆ ಕಲಾಪವನ್ನು ಕೂಡಾ ಕಡಿತ ಮಾಡಿದ್ದೇವೆ. ಈವರೆಗೆ ರಾಜ್ಯದ ಹತ್ತಕ್ಕೂ ಅಧಿಕ ಸಚಿವರುಗಳು ಹಾಗೂ 20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿಸಿದರು.
ಪ್ರತಿಯೊಬ್ಬರಿಗೂ ಹೊಸ ವರ್ಷಾಚರಣೆ ಸಂಭ್ರಮ ಮಾಡಬೇಕು, ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಛೆ ಇದೆ. ಆದರೆ ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಕ್ಷಿಪ್ರವಾಗಿ ಹರಡುತ್ತಿದೆ ಎಂಬ ಎಚ್ಚರಿಕೆ ಇರಲಿ ಎಂದು ಹೇಳಿದರು.
ಒಮಿಕ್ರಾನ್, ಕೋವಿಡ್ ಬಗ್ಗೆ ಎಚ್ಚರದಿಂದ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿಯೂ ಮುಂಬಯಿ ಮತ್ತು ಪುಣೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಪವಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆ ಇದೆ ಎಂದ ಪವಾರ್, ಒಂದು ವೇಳೆ ಕಠಿಣ ನಿರ್ಬಂಧ ಜಾರಿಗೊಳಿಸಬಾರದು ಎಂಬ ಇಚ್ಚೆ ಇದ್ದರೆ, ಜನರು ಕೋವಿಡ್ ನಿರ್ಬಂಧವನ್ನು ಪಾಲಿಸಲೇಬೇಕು ಎಂದು ಹೇಳಿದರು.