ಮಂಗಳೂರು: ಸಹಕಾರಿ ರಂಗದಲ್ಲಿ ಡಾ|ಎಂ.ಎನ್ ರಾಜೇಂದ್ರ ಕುಮಾರ್ ಅವರು ಮಾಡಿರುವ ಅದ್ವಿತೀಯ ಸಾಧನೆಯನ್ನು ಗುರುತಿಸಿ ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟೇಡಿಸ್ ಸಂಸ್ಥೆ ಮಂಗಳವಾರದಂದು ಮಲೇಶ್ಯದ ಕೌಲಾಲಂಪುರದಲ್ಲಿ ನಡೆದ ಇಂಡೋ-ಮಲೇಶ್ಯ ಎಕನಾಮಿಕ್ಸ್ ಕೋ-ಆಪರೇಷನ್ ಸೆಮಿನಾರ್‌ನಲ್ಲಿ ಔಟ್ ಸ್ಟ್ಯಾಂಡಿಂಗ್ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್-2019 ಪ್ರಶಸ್ತಿ ನೀಡಿ ಗೌರವಿಸಿದೆ. ಮಲೇಶ್ಯ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಮುಹಮ್ಮದ್ ಭಕ್ತಾರ್ ಬಿನ್ ವಾನ್ ಚಿಕ್ ಅವರು ಪ್ರಶಸ್ತಿ ವಿತರಿಸಿದರು.
ಸಹಕಾರಿ ರಂಗದ ಆಡಳಿತದ ಜವಾಬ್ದಾರಿಯನ್ನು ವಹಿಸಿ ಹಲವು ಸಂಸ್ಥೆಗಳ ಬೆಳವಣಿಗೆಗೆ ಅವರು ಕಾರಣಕರ್ತರಾಗಿದ್ದಾರೆ. ಇವರ ಆಡಳಿತ ವೈಖರಿಯಿಂದಲೇ ಜಿಲ್ಲಾ ಮಟ್ಟದ ಎಸ್‌ಸಿಡಿಸಿಸಿ ಬ್ಯಾಂಕ್ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ಕಳೆದ 25 ವರ್ಷಗಳಿಂದ ಮುನ್ನಡೆಸುತ್ತಿರುವ ಡಾ| ಎಂ.ಎನ್. ಆರ್. ಹಲವಾರು ವಿನೂತನ ಯೋಜನೆಗಳ ಮೂಲಕ ಈ ಬ್ಯಾಂಕನ್ನು ಜನಸ್ನೇಹಿ ಬ್ಯಾಂಕನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದ ಕಾರ್ಯನಿರ್ವಹಣೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಅವರಿಗೆ ಈಗಾಗಲೇ ಮಹಾತ್ಮಾ ಗಾಂಧಿ ಸಮ್ಮಾನ್, ಸಹಕಾರ ರತ್ನ ಸಹಿತ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರ ಕಾರ್ಯ ಸಾಧನೆಗೆ ಲಭಿಸಿವೆ.
ಈ ಸಮಾರಂಭದಲ್ಲಿ ಮಲೇಶ್ಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಚಿವರಾದ ದಾತೋ ಸೆರಿ ಮೊಹಮ್ಮದ್ ರೆಜುವಾನ್ ಮದ್ ಯೂಸಫ್, ಹೈ ಕಮೀಷನ್ ಆಫ್ ಇಂಡಿಯಾ ಮಲೇಶ್ಯದ ಹೈ ಕಮಿಷನರ್ ಮಿೃದುಲ್ ಕುಮಾರ್, ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟೇಡಿಸ್ ಇದರ ಮಾಜಿ ಅಧ್ಯಕ್ಷ ಯೋಗೇಂದ್ರ ಪ್ರಸಾದ್, ಗುಜರಾತ್ ಸ್ಟೇಟ್ ಫರ್ಟಿಲೈಸರ್ ಕೆಮಿಕಲ್ಸ್ ಲಿ. ಇದರ ಮಾಜಿ ಅಧ್ಯಕ್ಷ ಡಾ| ಎಸ್.ಕೆ.ನಂದಾ, ಸುದರ್ಶನ್ ವಲ್ಡ್ರ್ಇದರ ಅಧ್ಯಕ್ಷ ಡಾ| ಬಿ. ಕೆ. ಸುದರ್ಶನ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ಸಂಗೀತಾ ಸಿಂಗ್ ಉಪಸ್ಥಿತರಿದ್ದರು.