Advertisement

ಭರದಿಂದ ಸಾಗಿದ ಪುಸ್ತಕ-ಸಮವಸ್ತ್ರ ಸರಬರಾಜು

02:23 PM Jun 08, 2018 | |

ಸುರಪುರ: ಪ್ರತಿ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಸರಬರಾಜು ಮಾಡುವ ಪುಸ್ತಕ ವಿತರಣೆಯಲ್ಲಿ ಒಂದಿಲ್ಲ ಒಂದು ಸಮಸ್ಯೆ ಉಂಟಾಗಿ ವಿತರಣೆ ವಿಳಂಬ ಆಗುತ್ತಿತ್ತು. ಆದರೆ 2018-19ನೇ ಸಾಲಿನ ಪುಸ್ತಕ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲದೆ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯ ಭರದಿಂದ ಸಾಗಿದೆ.

Advertisement

1ರಿಂದ ಎಸ್‌ಎಸ್‌ಎಲ್‌ಸಿವರೆಗೆ ಇಲಾಖೆಯಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದರೆ, ಅನುದಾನ ರಹಿತ ಶಾಲೆಗಳಿಗೆ ಸಬ್ಸಿಡಿ ದರದಲ್ಲಿ ಪುಸ್ತಕ ವಿತರಿಸಲಾಗುತ್ತಿದೆ. ಪ್ರತಿ ವರ್ಷ ಕೆಲ ವಿಷಯಗಳ ಪುಸ್ತಕಗಳು ಸಕಾಲಕ್ಕೆ ಸರಬರಾಜು ಆಗದ ಕಾರಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದರು. ಈ ಬಾರಿ ಬೇಡಿಕೆಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ ವರೆಗಿನ ಎಲ್ಲ ವಿಷಯವಾರು ಪುಸ್ತಕಗಳು ಸಮರ್ಪಕವಾಗಿ ಸರಬರಾಜು ಆಗಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ನಿಟ್ಟುಸಿರು ಬಿಡುವಂತೆ ಆಗಿದೆ.

ಉರ್ದು ಮತ್ತು ಕನ್ನಡ ಮಾಧ್ಯಮ ಸೇರಿ ತಾಲೂಕಿಗೆ ಒಟ್ಟು 4,35,175 ಪುಸ್ತಕಗಳ ಬೇಡಿಕೆ ಇತ್ತು. ಈ ಪೈಕಿ 3,52,451 ಪುಸ್ತಕಗಳು ಸರಬರಾಜು ಆಗಿವೆ. 1ರಿಂದ ಎಸ್‌ಎಸ್‌ಎಲ್‌ಸಿ ವರೆಗಿನ ಉರ್ದು ಮಾಧ್ಯಮದ ಕೆಲ ವಿಷಯಗಳ ಪುಸ್ತಕಗಳು ಇನ್ನು ಬಂದಿಲ್ಲ. ಶೇ. 70ರಷ್ಟು ಪುಸ್ತಕಗಳ ಕೊರತೆ ಇದೆ. ಕನ್ನಡ ಮಾಧ್ಯಮ ಪುಸ್ತಕಗಳಿಗೆ ಯಾವುದೇ ಕೊರತೆ ಇಲ್ಲ.
 
ಖಾಸಗಿ ಶಾಲೆಗಳು ಒಟ್ಟು 10,3073 ಪುಸ್ತಕಗಳ ಬೇಡಿಕೆ ಸಲ್ಲಿಸಿದ್ದು, ಈ ಪೈಕಿ 90,1315 ಸರಬರಾಜು ಆಗಿವೆ. ಆಯಾ ಶಾಲೆಗಳ ಬೇಡಿಕೆಗಳಿಗೆ ಅನುಗುಣವಾಗಿ ಪುಸ್ತಕ ಸರಬರಾಜು ಮಾಡಲಾಗಿದೆ. ಈಗಾಗಲೇ 26 ಕ್ಲಸ್ಟರ್‌ಗಳಿಗೆ ವಿತರಿಸಲಾಗಿದ್ದು, ಕೇವಲ ಎರಡು ಕ್ಲಸ್ಟರ್‌ಗಳಿಗೆ ಮಾತ್ರ ವಿತರಣೆ ಬಾಕಿ ಇದೆ. ಇನ್ನೆರಡು ದಿನಗಳಲ್ಲಿ ಸರಬರಾಜು
ಮುಗಿಯಲಿದೆ ಎಂದು ಶಿಕ್ಷಣ ಸಂಯೋಜಕ ಸುಭಾಸ ತಿಳಿಸಿದ್ದಾರೆ. 

ಸಮವಸ್ತ್ರ ವಿತರಣೆ: 32,302 ಬಾಲಕರು. 31,086 ಬಾಲಕಿಯರು ಸೇರಿದಂತೆ ಒಟ್ಟು 63,388 ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಈಗ 1ರಿಂದ ಎಸ್‌ಎಸ್‌ಎಲ್‌ಸಿ ವರೆಗಿನ ಬಾಲಕರ ಸಮವಸ್ತ್ರ ಪೂರೈಕೆ ಆಗಿದ್ದು, ಆಯಾ ಶಾಲೆಗಳಲ್ಲಿ ವಿತರಣೆ ಕಾರ್ಯ ನಡೆದಿದೆ. 8, 9, 10ನೇ ತರಗತಿ ಬಾಲಕಿಯರ ಸಮವಸ್ತ್ರ ಇನ್ನು ಸರಬರಾಜು ಆಗಿಲ್ಲ ಎಂದು ತಿಳಿದು ಬಂದಿದೆ.

ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಪ್ರಸಕ್ತ ಸಾಲಿನಲ್ಲಿ ಶಾಲೆ ಆರಂಭಕ್ಕೂ ಮುನ್ನವೇ ಸಮರ್ಪಕವಾಗಿ ಪುಸ್ತಕ ಮತ್ತು ಸಮವಸ್ತ್ರ ಸರಬರಾಜು ಆಗಿರುವುದು ಸಂತಸ ತಂದಿದೆ. ಆಯಾ ಶಾಲೆಗಳ ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಎಲ್ಲ ಶಾಲೆಗಳಿಗೆ ಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಶಾಲೆಗೆ ಬರಲು ಕ್ರಮ ಕೈಗೊಳ್ಳಲಾಗುವುದು.  
 ನಾಗರತ್ನಾ ಓಲೇಕಾರ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next