ಉಡುಪಿ: ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವ ಹಾಗೂ ಎರಡು ತಿಂಗಳಿ ನಿಂದ ಸಂಬಳ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯರು ಮುತ್ತಿಗೆ, ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಸಭಾತ್ಯಾಗ ಮಾಡಿದ ಘಟನೆ ಗುರುವಾರ ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಸಂಭವಿಸಿದೆ.
ನಗರಸಭೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರಿಗೆ ಸಂಬಳ ಕೊಡದೇ ಸತಾಯಿಸುತ್ತಿದ್ದಾರೆ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ಅದಕ್ಕೆ ಕೆಲ ಆಡಳಿತ ಪಕ್ಷದ ಸದಸ್ಯರು ಸಹ ಬೆಂಬಲ ವ್ಯಕ್ತಪಡಿಸಿದರು. ಅದ ಲ್ಲದೆ ಉಪಾಧ್ಯಕ್ಷೆ ಸಂಧ್ಯಾ ಅವರು ಪೀಠ ದಿಂದ ಕೆಳಕ್ಕಿಳಿದು ಮಾತನಾಡಿ ಕೆಲ ನೌಕರರನ್ನು ದಲಿತರೆನ್ನುವ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿರುವುದಾಗಿ ಆರೋಪಿಸಿದರು. ಇದೇ ವೇಳೆ ನಗರಸಭೆ ದಲಿತ ವಿರೋಧಿಯೇ ಎನ್ನುವುದಾಗಿ ಪ್ರಶ್ನಿಸಿದರು.
ಈ ವೇಳೆ ವಿಚಾರ ಸದಸ್ಯರ ಗದ್ದಲ ವಿಕೋಪಕ್ಕೆ ತಿರುಗಿದ್ದು, ವಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಮುತ್ತಿಗೆ ಹಾಕಿದರು. ಆ ಬಳಿಕ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸಭಾತ್ಯಾಗ ಮಾಡಿದರು. ಆ ಬಳಿಕ ವಿಪಕ್ಷ ನಾಯಕ ಡಾ| ಎಂ. ಆರ್. ಪೈ ನೇತೃತ್ವದಲ್ಲಿ ಸಂಧಾನ ಮಾತುಕತೆ ನಡೆದು ಸದನದಲ್ಲಿ ಸ್ಪಷ್ಟನೆ ನೀಡಿದ ಪೌರಾಯುಕ್ತ ಮಂಜುನಾಥಯ್ಯ ಸರಕಾರಿ ಆದೇಶದ ಪ್ರಕಾರ ನೀರು ಹಾಗೂ ಆಡಳಿತಾತ್ಮಕ ಎನ್ನುವ 2 ರೀತಿಯ ಹೊರಗುತ್ತಿಗೆ ನೇಮಕಾತಿ ಇದೆ. ನೀರಿನ ಹೊರಗುತ್ತಿಗೆಯಡಿ ಸರಕಾರದ ಸುತ್ತೋಲೆಯಂತೆ ನಾಲ್ವರನ್ನು ತೆಗೆದು ಹಾಕಿದ್ದು, ಅದರಲ್ಲಿ ಇಬ್ಬರನ್ನು ಬಜೆ ಡ್ಯಾಂನಲ್ಲಿ ಕೆಲಸಕ್ಕೆ ಕಳುಹಿಸಿದ್ದೆವು. ಆದರೆ ಅವರು ಹೋಗಿರಲಿಲ್ಲ ಎಂದರು.
ಅದೇ ರೀತಿ ಅದರನ್ವಯ ಆಡಳಿತಾತ್ಮಕ ಕಾರ್ಯನಿರ್ವಹಿಸುವ ಎಲ್ಲರನ್ನು ಜೂ. 30 ರೊಳಗೆ ತೆಗೆಯಬೇಕಾಗುತ್ತದೆ. ಇದರಿಂದ ನಗರಸಭೆಯ ಕಚೇರಿ ಕಾರ್ಯಕ್ಕೆ ತೊಡಕಾಗುತ್ತದೆ. ಅದಕ್ಕಾಗಿ ಡಿಸಿ ಅವರ ಬಳಿ ನಿಯೋಗದೊಂದಿಗೆ ತೆರಳಿ ಸರಕಾರಕ್ಕೆ ಮನವಿ ನೀಡುವ ಎಂದು ಪೌರಾಯುಕ್ತರು ತಿಳಿಸಿದರು.
ಚರ್ಚೆಯಲ್ಲಿ ಸದಸ್ಯರಾದ ಹೆರ್ಗ ದಿನಕರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ರಮೇಶ್ ಕಾಂಚನ್, ಜನಾರ್ದನ ಭಂಡಾರ್ಕರ್, ಶಶಿರಾಜ್ ಕುಂದರ್, ಪಿ. ಯುವರಾಜ, ವಸಂತಿ ಶೆಟ್ಟಿ, ಮಹೇಶ್ ಠಾಕೂರ್ ಮತ್ತಿರರು ಭಾಗವಹಿಸಿದರು.