Advertisement
2019ರ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬ್ರಿಟನ್ ಮೂಲದ ಕೇಂಬ್ರಿಜ್ ಅನಲಿಟಿಕಾ ಎನ್ನುವ ಸಂಸ್ಥೆಯ ಸಹಾಯ ಪಡೆಯುತ್ತಿದೆ ಮತ್ತು ಆ ಸಂಸ್ಥೆ ಕಾನೂನುಬಾಹಿರವಾಗಿ ಫೇಸ್‌ಬುಕ್‌ನಿಂದ ದತ್ತಾಂಶಗಳನ್ನು ಪಡೆದುಕೊಂಡಿದೆ ಎನ್ನುವುದಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ಆರೋಪ ಮಾಡಿದರು. ಚುನಾವಣೆಗಳನ್ನು ಗೆಲ್ಲಲು ರಾಜಕೀಯ ತಂತ್ರಗಾರಿಕೆ ಹೆಣೆಯಬಲ್ಲ ನುರಿತ ಚುನಾವಣಾ ತಜ್ಞರ, ಸಂಸ್ಥೆಗಳ ಸಹಾಯ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಸಂಸ್ಥೆಯ ಸಹಾಯವನ್ನು ಪಡೆದಿದ್ದರು ಎನ್ನಲಾಗುತ್ತಿದೆ. ನಾಯಕರ ವರ್ಚಸ್ಸಿಗೆ ಸಾಣೆ ಹಾಕುವಲ್ಲಿ, ವ್ಯಕ್ತಿತ್ವವನ್ನು ಪ್ರಭಾವಶಾಲಿಯಾಗಿಸುವಲ್ಲಿ ಮತ್ತು ನಿರ್ದಿಷ್ಟ ರಾಜಕೀಯ ಪಕ್ಷದತ್ತ ಮತದಾರರನ್ನು ಸೆಳೆಯುವಲ್ಲಿ ಇಂತಹ ಸಂಸ್ಥೆಗಳು, ತಜ್ಞರು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎನ್ನುವುದು ಬಹುತೇಕ ರಾಜಕೀಯ ಪಕ್ಷಗಳ ನಂಬಿಕೆಯಾಗಿದೆ. ಆದ್ದರಿಂದ ಇಂತಹ ನುರಿತ ಚುನಾವಣಾ ತಂತ್ರಗಾರರಿಗೆ, ಏಜೆನ್ಸಿಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚುತ್ತಿದೆ.
2014ರ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಅವರ “ಚಹಾ ಮಾರುವವ’ ಮೂದಲಿಕೆಯನ್ನೇ ರಾಷ್ಟ್ರದಾದ್ಯಂತ
“ಚಾಯ್ ಪೇ ಚರ್ಚಾ’ ಏರ್ಪಡಿಸಿ, “ವಿಕಾಸ ಪುರುಷ’ ಎಂದು ಬಿಂಬಿಸಿ ಬಿಜೆಪಿ ಪರವಾದ “ಹವಾ’ ಸೃಷ್ಟಿಸಿದ ಪ್ರಶಾಂತ್ ಕಿಶೋರ್ ಮುಂದೆ ಬಹು ಬೇಡಿಕೆಯ ಚುನಾವಣಾ ರಣನೀತಿ ತಜ್ಞರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಚುನಾವಣೆ ಎದುರಿಸಲು ನೆರವಾದರು. ಕಳೆದ ವರ್ಷದ ಉತ್ತರ ಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರೂ ಕೂಡಾ ಗೆಲುವಿಗಾಗಿ ಕಿಶೋರ್‌ಗೆ ಮೊರೆ ಹೋದರು. ರಾಜಕೀಯ ಪಕ್ಷಗಳ ಹೇಗಾದರೂ ಮಾಡಿ ಚುನಾವಣೆಯನ್ನು ಗೆಲ್ಲಲೇಬೇಕೆಂಬ ತವಕವೇ ಕೇಂಬ್ರಿಜ್ ಅನಾಲಿಟಿಕಾದಂತಹ ಹಲವಾರು ಏಜೆನ್ಸಿಗಳು ಸತ್ಯವನ್ನು ಮರೆಮಾಚಿ ಮತದಾರರನ್ನು ತಪ್ಪುದಾರಿಗೆಳೆದು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಸಹಾಯ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮೂಲ ಆಶಯವಾದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಯ ಸಿದ್ಧಾಂತಕ್ಕೆ ಸೀಮಿತವಾಗಿಯಾದರೂ ಹಾನಿ ಮಾಡುತ್ತಿಲ್ಲವೇ? ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತಿರುವ ಕುರಿತು ಹಲವಾರು ವರ್ಷಗಳಿಂದ ಕೇಳುತ್ತಲೇ ಇದ್ದೇವೆ. ಆದರೆ ಎಲ್ಲಾ ಮತದಾರರನ್ನು ಹಣದ ಬಲದಿಂದ ಖರೀದಿಸಲಾಗದೆನ್ನುವುದನ್ನು ಮನಗಂಡ ರಾಜಕೀಯ ಪಕ್ಷಗಳು ವಿವಿಧ ಅಡ್ಡ ದಾರಿ
ಗಳನ್ನು ಕಂಡು ಹುಡುಕುತ್ತಿವೆ. ಎಲ್ಲಕ್ಕೂ ದೂರದೃಷ್ಟಿಯ ಯೋಜನೆಗಳಿಲ್ಲದ, ಸ್ವಾರ್ಥ ಚಿಂತನೆಯ ನಾಯಕತ್ವವೇ ಕಾರಣ ಎನ್ನಬಹುದು. ಒಳ್ಳೆಯ ವಸ್ತುಗಳಿಗೆ ಪ್ರಚಾರದ ಅಗತ್ಯವಿಲ್ಲವೆನ್ನುವ ಮಹತ್ಮಾ ಗಾಂಧೀಜಿಯವರ ನುಡಿ ರಾಜಕೀಯಕ್ಕೂ ಅನ್ವಯಿ ಸುತ್ತದೆ. ಇಂದಿನ ರಾಜಕೀಯ ವಾತಾವರಣದಲ್ಲಿ ಸರಳ, ಜನಪರ ಚಿಂತನೆಯ, ಪ್ರಾಮಾಣಿಕ ರಾಜಕಾರಣಿಗಳು ತೀರಾ ಅಪರೂಪ. ಎಲ್ಲ ರಾಜಕಾರಣಿಗಳಿಗೂ ಚುನಾವಣೆಯ ಸಮಯದಲ್ಲೇ ಮತದಾರರ ನೆನಪಾಗುವುದು. ಐದು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡದಿರುವಾಗ ಜನರೆದುರು ಹೋಗುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ. ಆಗ ಚುನಾವಣಾ ರಣತಂತ್ರ ಹೆಣೆಯುವ ಏಜೆನ್ಸಿಗಳು ಸಹಾಯಕ್ಕೆ ಧಾವಿಸುತ್ತವೆ.
Related Articles
ಚುನಾವಣೆ ಗೆಲ್ಲಿಸಿ ಕೊಡುವ ಭರವಸೆ ನೀಡುವ ಏಜೆನ್ಸಿಗಳು ರಾಜಕೀಯ ಪಕ್ಷಗಳಿಂದ ಅಪಾರ ಹಣ ವಸೂಲಿ ಮಾಡುತ್ತವೆ ಎನ್ನುವುದು ರಹಸ್ಯವೇನಲ್ಲ. “ಪ್ಯಾರ್ ಔರ್ ಜಂಗ್ ಮೇ ಸಬ್ ಜಾಯಜ…’ (ಯುದ್ಧ ಮತ್ತು ಪ್ರೀತಿಲ್ಲಿ ಎಲ್ಲವೂ ಸರಿ) ಎನ್ನುವಂತೆ ಚುನಾವಣಾ ಕಣ ಕೂಡಾ ಒಂದು ರೀತಿಯಲ್ಲಿ ರಣರಂಗವೇ ಆದ್ದರಿಂದ ಅಲ್ಲಿ ಎಲ್ಲವೂ ಸರಿಯೇ ಎನ್ನುವ ಧೋರಣೆ ರಾಜಕೀಯ ಪಕ್ಷಗಳಲ್ಲಿ ಬೆಳೆಯುತ್ತಿದೆ. ಅದಕ್ಕಾಗಿ ಹೊರಗುತ್ತಿಗೆ ಪಡೆದ ಏಜೆನ್ಸಿಗಳು ಚುನಾವಣೆಗಿಂತ ಮೊದಲು ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಅರಾಜಕತೆ ಸೃಷ್ಟಿಸಬಹುದು ಅಥವಾ “ಅಸಹಿಷ್ಣುತೆ’ ಹೆಚ್ಚುತ್ತಿದೆ ಎನ್ನುವ ಗದ್ದಲ ಎಬ್ಬಿಸಬಹುದು. ದೇಶದ ಯಾವುದೋ ಒಂದೆಡೆ ನಡೆದ ಒಂದು ಚಿಕ್ಕ ಘಟನೆಯನ್ನು ತೆಗೆದುಕೊಂಡು ಒಂದು ನಿರ್ದಿಷ್ಟ ಸಮೂಹದ ವಿರುದ್ಧ ದಬ್ಟಾಳಿಕೆ ನಡೆಸಲಾಗುತ್ತಿದೆ ಎನ್ನುವ (ಅಪ) ಪ್ರಚಾರ ಮಾಡಬಹುದು. ಒಂದಷ್ಟು ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಬುದ್ಧಿ ಜೀವಿಗಳಿಗೆ ಆಮಿಷ ತೋರಿಸಿ ಒಂದು ನಿರ್ದಿಷ್ಟ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ಕುಮ್ಮಕ್ಕು ನೀಡಬಹುದು. ಗಣ್ಯರಿಗೆ ನಗದಿನ ಜತೆ ಪ್ರಶಸ್ತಿ, ನಗರದಲ್ಲಿ ಸೈಟ್, ಪದವಿಯ ಆಸೆ- ಆಮಿಷ ಒಡ್ಡಬಹುದು. ಬುದ್ಧಿವಂತ ಮತದಾರರನ್ನು ಮೂರ್ಖರನ್ನಾಗಿಸಲು ಹೊರಗುತ್ತಿಗೆ ಪಡೆದ ಏಜೆನ್ಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲೇಖನಗಳು, ಸಮೀಕ್ಷೆಗಳು, ಚಿತ್ರಗಳು, ಸಂದೇಶಗಳು, ಸ್ಲೋಗನ್‌ಗಳನ್ನು ಕಳುಹಿಸಿ ಅವರ ಅಭಿಪ್ರಾಯವನ್ನು ಪ್ರಭಾವಿತ ಗೊಳಿಸಬಹುದು. ಧರ್ಮ, ಭಾಷೆ, ಜಾತಿ ಆಧಾರದಲ್ಲಿ ಜನರನ್ನು ಒಡೆಯುವ ಪಕ್ಷಪಾತಪೂರ್ಣ ವರದಿಗಳನ್ನು ಉಣಬಡಿಸಿ ಜನಭಾವನೆಯನ್ನು ಉದ್ರೇಕಿಸಿ ಒಂದು ನಿರ್ದಿಷ್ಟ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಮಾಡಬಹುದು. ಕುರಿಯನ್ನು ಹೊತ್ತೂಯ್ಯುವವನ ಮುಂದೆ ಮೋಸಗಾರರು ಅಡಿಗಡಿಗೆ ಮುಂದೆ ಬಂದು ಕತ್ತೆಯೇಕೆ ಒಯ್ಯುತ್ತಿರುವೆ ಎಂದು ಹೇಳಿದಾಗ ಆತ ಮೂರ್ಖನಾದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದ ಪ್ರಚಾರದಲ್ಲಿ ಸರಿ ಯಾವುದು ತಪ್ಪು ಯಾವುದು ಎಂದರಿಯದೆ ಮತದಾರ ಕಕ್ಕಾಬಿಕ್ಕಿ ಯಾಗುತ್ತಾನೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳಿಂದ ಹಣ ಪಡೆದ ಏಜೆನ್ಸಿಗಳು ತಮ್ಮ ಚಾಣಕ್ಯ ತಂತ್ರಗಳಿಂದ ಹುಸಿ ಜನಾಭಿಪ್ರಾಯ ರೂಪಿಸಿ ಚುನಾವಣೆಯ ಪಾವಿತ್ರ್ಯವನ್ನು ನಾಶ ಮಾಡುತ್ತಿರುವುದು ಖಂಡಿತವಾಗಿಯೂ ಪ್ರಜಾಪ್ರಭುತ್ವಕ್ಕೆ ಗಂಡಾಂತರವೇ ಸರಿ.
Advertisement
ಪಕ್ಷಗಳ ಮೆಲೆ ಪ್ರತಿಯೋರ್ವ ಮತದಾರರೂ ತಮ್ಮ ತೀಕ್ಷ್ಣ ದೃಷ್ಟಿ ಇರಿಸಬೇಕಾಗಿದೆ. Eternal vigilence is the price of democracy ಅರ್ಥಾತ್ ನಿರಂತರ ಜಾಗೃತಿಯೇ ಪ್ರಜಾ ಪ್ರಭುತ್ವದ ಮೌಲ್ಯ ಎನ್ನುವ ಉಕ್ತಿಯಂತೆ ತಮ್ಮ ವೈಯ್ಯಕ್ತಿಕ ಲಾಭ ನಷ್ಟದ ಚಿಂತನೆಯನ್ನು ಬದಿಗಿಟ್ಟು ಸರಕಾರ ಮತ್ತು ವಿಪಕ್ಷಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎನ್ನುವುದರ ಕುರಿತು ವಿಶ್ಲೇಷಣೆ ಮಾಡಬೇಕಿದೆ. ಸರಕಾರಗಳು ಮಾಡುವ ದೂರದರ್ಶಿತ್ವವಿಲ್ಲದ ಯೋಜನೆಗಳು, ಪಕ್ವತೆಯಿಲ್ಲದ ನಿರ್ಧಾ ರಗಳು, ದೇಶ ಹಿತದ ಅವಗಣನೆ, ವಿರೋಧಕ್ಕಾಗಿ ವಿರೋಧ ಮಾಡುವ ಪ್ರವೃತ್ತಿ, ಸದನದಲ್ಲಿ ತೋರುವ ಹೊಣೆಗೇಡಿತನ, ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಕೊಡುವ ಕುರಿತು ಜಾಗರೂಕರಾಗಿರಬೇಕು. ಜನರಲ್ಲಿ ರಾಜಕೀಯ ಸಾಮಾನ್ಯ ಜ್ಞಾನ ವೃದ್ಧಿಸಿದರೆ ಕೊಂಚ ಮಟ್ಟಿಗೆ ಇಂತಹ ದುಷ್ಟ ತಂತ್ರಗಳ ಪ್ರಭಾವ ಕಡಿಮೆ ಯಾಗಬಹುದು. ನಾಲ್ಕೂವರೆ ವರ್ಷ ಸ್ವಾರ್ಥ ಸಾಧನೆಯಲ್ಲೇ ಕಾಲಹರಣ ಮಾಡಿ ಚುನಾವಣೆಯ ಸಮಯದಲ್ಲಿ ಪ್ರಚಾರ ತಂತ್ರಗಳ ರಾಜಕೀಯ ಗಿಮಿಕ್ ನಡೆಸುವ ರಾಜಕೀಯ ಪಕ್ಷಗಳ ಧೋರಣೆ ಬದಲಾಗುವಂತೆ ಅವುಗಳ ಮೇಲೆ ಒತ್ತಡ ಹೇರಬೇಕಾಗಿದೆ. ಚುನಾವಣೆಗಳ ಮೊದಲು ಎಕ್ಸಿಟ್ ಪೋಲ್‌ಗಳನ್ನು ಬಿತ್ತರ ಮಾಡಿದರೆ ಮತದಾರರು ಪ್ರಭಾವ ಕ್ಕೊಳಗಾಗುತ್ತಾರೆ ಎಂದು ನಿಷೇಧಿಸಲಾಗುತ್ತದೆ. ಹೀಗಿರುವಾಗ ಜನತೆಗೆ ಸುಳ್ಳು ಸಂದೇಶ ನೀಡುವ, ಜನರ ಖಾಸಗಿ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಏಜೆನ್ಸಿಗಳಿಗೆ ತಮ್ಮ ಪ್ರಚಾರದ ಜವಾಬ್ದಾರಿ ನೀಡುವ ರಾಜಕೀಯ ಪಕ್ಷಗಳ ಕ್ರಮ ಹಲವಾರು ನೈತಿಕ ಸವಾಲುಗಳನ್ನು ಹುಟ್ಟುಹಾಕುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಕುರಿತು ಪ್ರಬುದ್ಧ ಮತದಾರ ಜಾಗರೂಕನಾಗಬೇಕಾಗಿದೆ. ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬರುವ ಎಲ್ಲಾ ಮಾಹಿತಿಯನ್ನು ನಂಬದೇ ಸ್ವಯಂ ವಿಶ್ಲೇಷಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಜಾಗೃತ ಮತದಾರನ ಕರ್ತವ್ಯ. ಸತ್ಯವನ್ನು ಮುಚ್ಚಿಡಲಾಗದು. ಕೃತ್ರಿಮ ಜಾಹೀರಾತಿನಿಂದ ಕೊಂಚ ಸಮಯ ಜನರನ್ನು ಮೂರ್ಖ ರಾಗಿಸಬಹುದು. ಎಲ್ಲರನ್ನೂ ಎಲ್ಲ ಕಾಲಕ್ಕೆ ಮೂರ್ಖರಾಗಿಸುವುದು ಅಸಂಭವ ಎನ್ನುವ ಮಾತು ಸಾರ್ವಕಾಲಿಕ ಸತ್ಯ.
ಸಚ್ಚಾಯಿ ಚುಪ್ ನಹೀ ಸಕ್ತಿ, ಬನಾವಟ್ ಕಿ ಅಸೂಲೂ ಸೆಖುಶಬೂ ಆ ನಹೀ ಸಕ್ತೀ, ಕಭೀ ಕಾಗಜ್ ಕೆ ಫೂಲೋಂ ಸೆ. ಬೈಂದೂರು ಚಂದ್ರಶೇಖರ ನಾವಡ