ವಿಜಯಪುರ: ಸರ್ಕಾರಿ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಜಿಪಂ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಜಿಲ್ಲೆಯ ಐದು ತಾಲೂಕಿನ ಹೊರ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ “ಡಿ’ ಗ್ರೂಪ್ ನೌಕರರ ವೇತನ ಬಾಕಿ ಇದ್ದು, ಈ ಮೂರು ಇಲಾಖೆಯಲ್ಲಿ ಕೆಲವೊಂದು ಇಲಾಖೆಯಲ್ಲಿ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬಾಕಿ ವೇತನ ನೀಡಿಲ್ಲ. ಇದರಿಂದ ಈ ಎಲ್ಲ ನೌಕರರು ತಮ್ಮ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದೆ. ಅದೇ ರೀತಿ ನೌಕರರಿಗೆ ನ್ಯಾಯಯುತವಾಗಿ ಸಂದಬೇಕಾದ ಪಿಎಫ್ ಹಣವೂ ಸರಿಯಾಗಿ ಜಮಾವಣೆಯಾಗಿಲ್ಲ ಎಂದು ದೂರಿದರು. ಸಂಘದ ಜಿಲ್ಲಾದ್ಯಕ್ಷ ಹುಲಗಪ್ಪ ಚಲವಾದಿ
ಮಾತನಾಡಿ, ಬಾಕಿ ವೇತನ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ನಾವೆಲ್ಲರೂ ತೀವ್ರ ತೊಂದರೆ ಎದುರಿಸುತ್ತಿದ್ದೇವೆ. ಹೊರಗುತ್ತಿಗೆ ಪದ್ದತಿ ರದ್ದುಪಡಿಸಿ ಇಲಾಖೆಗಳಿಂದ ನೇರವಾಗಿ ವೇತನ ನೀಡುವ ವ್ಯವಸ್ಥೆಯಾದರೆ ಮಾತ್ರ ಹೊರಗುತ್ತಿಗೆ ನೌಕರರ ಸಮಸ್ಯೆ ದೂರವಾಗುತ್ತದೆ. ಈ
ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅದೇ ತೆರನಾಗಿ ಎಲ್ಲ ಅಗತ್ಯ ವಸ್ತುಗಳ ದುಬಾರಿ ಆಗಿರುವುರಿಂದ ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಸಂಬಳ 25 ಸಾವಿರ ರೂ.ಕ್ಕೆ ನಿಗದಿಪಡಿಸಬೇಕು. ಮುಖ್ಯಮಂತ್ರಿಗಳು ಘೋಷಣೆ ಮಾಡಿದಂತೆ ಹೊರಗುತ್ತಿಗೆ ನೌಕರರಿಗೆ ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ವೇತನ ನೀಡಬೇಕು. 2020 ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬಾಕಿ ಉಳಿದಿರುವ ವೇತನ ನೀಡಬೇಕು. ಯಾವುದೇ ಇಲಾಖೆಯಲ್ಲಿ ಕಾಯಂ ನೌಕರರು ನಿವೃತ್ತಿ ಹೊಂದಿದ ಸ್ಥಳಕ್ಕೆ ಈಗಿರುವ ಹೊರಗುತ್ತಿಗೆ ನೌಕರರನ್ನು ನೇಮಕಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಲಕ್ಷ್ಮಣ ಹಂದ್ರಾಳ, ರಮೇಶ ಆಸಂಗಿ, ಪ್ರದೀಪ ದಳವಾಯಿ, ರಾಜೇಶ ದೇಶಪಾಂಡೆ, ಆನಂದ ಹಾದಿಮನಿ, ಪವಾಡೆಪ್ಪ ಚಲವಾದಿ, ಕಾಶೀಮ ಆಲದಾಳ, ಲಕ್ಷ್ಮಣ ಮಸಳಿ, ಯಮನಪ್ಪ ಬಜಂತ್ರಿ, ಮಲ್ಲಿಕಾರ್ಜುನ ಚಲವಾದಿ, ಶಿವಾನಂದ ಮೇಲಿನಕೇರಿ, ದಾನಮ್ಮ ಹೂಗಾರ, ನೂರಜಾನ ಎಲಗಾರ, ಗೌರಕ್ಕ ಬೀಳೂರ, ಶಾಂತಾ ಕ್ವಾಟಿ, ಬೋರಮ್ಮ ಎಲ್.ಜಿ., ಬೇಬಿ ಹೊಸಮನಿ, ಲಕ್ಷಿ ¾à ಮಂಗಸೂಳಿ ಪಾಲ್ಗೊಂಡಿದ್ದರು.
ಧರಣಿ ಸ್ಥಳಕ್ಕೆ ಜಿಪಂ ಅಧ್ಯಕ್ಷೆ-ಸಿಇಒ ಭೇಟಿ : ಧರಣಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಭೇಟಿ ನೀಡಿ ಮನವಿ ಸ್ವೀಕರಿಸಿ ಅಹವಾಲು ಆಲಿಸಿದರು. ಹೊರಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಸಿಇಒ ಗೋವಿಂದ ರೆಡ್ಡಿಯೂ ಮನವಿ ಸ್ವೀಕರಿಸಿ, ಹೊರಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.