Advertisement
ಇವರು ಬಂದಿದ್ದನ್ನು ನೋಡಿದ ಕೆಲಸದವನೊಬ್ಬ ಓಡಿ ಬಂದ. “”ಒಂದು ವಾರದಲ್ಲೇ ಇದು ಎಂತಹ ಅವಸ್ಥೆ ಮಾಡಿದ್ರಾ” ಎಂದು ಹೆಗಡೆಯವರು ಅವನಿಗೆ ಬೈದರು. “”ಹೌದ್ರಾ ಸಾಯುಕೆ, ಆ ಸೀಪಿ ಬರಲೇ ಇಲ್ಲ! ನಾನೊಬ್ಬನೇ ಇಷ್ಟೊಂದು ದೊಡ್ಡ ತೋಟ, ಮನೆ ಎಂತ ನೋಡುದ್ರಾ!” ಎಂದು ಹೇಳಿದ. “”ಬಾಕಿಯವರೂ ಸರೀ ಬರರ್ಲಿಲಾÅ! ಸತ್ರು, ಅವ್ರು. ಬತ್ತೆ ಹೇಳಿದ್ರು ಎಲ್ಲಾ ಹೌದು. ಕಡೀಕೆ ನಾಪತ್ತೆ” ಎಂದೂ ಹೇಳಿದ. ಕೆಲಸದವರಿಗೆ ಮಲಗಲು ಹೊರಗಿನ ದೊಡ್ಡ ಹೊಳ್ಳಿ ಬಿಟ್ಟು ಕೊಟ್ಟು ಹೋದದ್ದು ಇತ್ತು. ಒಳಗಿನ ಭಾಗಕ್ಕೆ ಬೀಗ. ಇಷ್ಟೊಂದು ದಿನ ಮನೆಗೆ ಹೀಗೆ ಬೀಗ ಹಾಕಿದ್ದೇ ಇಲ್ಲ. ಕನಿಷ್ಟ ದಿನಾಲು ದೇವರ ಪೂಜೆ ಮಾಡಿಕೊಡಲೂ ಸುತ್ತಮುತ್ತಲೂ ಯಾರಿಗೂ ಪುರುಸೊತ್ತಿಲ್ಲ. ಪಾಪ ಅವರದೂ ತಪ್ಪಿಲ್ಲ. ಅವರ ಮನೆಗಳಲ್ಲೂ ಪ್ರಾಯದವರು ಯಾರೂ ಇಲ್ಲ. ಎಲ್ಲರೂ ಬೆಂಗಳೂರು. ಹೀಗಾಗಿ, ದೇವರನ್ನೂ ಕೂಡ ಅಕ್ಕಿಯಲ್ಲಿ ಮುಚ್ಚಿ ಟ್ಟು ಹೋಗಬೇಕಾಯಿತು.
Related Articles
Advertisement
ದಂಪತಿಗೆ ನಾಲ್ಕು ಮಕ್ಕಳು. ಎರಡು ಹೆಣ್ಣು ಎರಡು ಗಂಡು. ಒಬ್ಬ ಮಗನಾದರೂ ಕಲಿಯದೆ ಇಲ್ಲೇ ಇರಲಿ ಎಂದು ಇಬ್ಬರ ಮನಸ್ಸಿನಲ್ಲಿಯೂ ಇತ್ತು. ಆದರೆ, ಹಾಗಾಗಲೇ ಇಲ್ಲ. ಇಬ್ಬರೂ ಅತ್ಯುತ್ತಮ ಮಟ್ಟದಲ್ಲಿ ಕಲಿತು ಬಿಟ್ಟರು. ಒಬ್ಬ ಕ್ಯಾನ್ಸರ್‌ತಜ್ಞ, ಇನ್ನೊಬ್ಬ ಕಂಪ್ಯೂಟರ್‌ನಲ್ಲಿ ದೊಡ್ಡ ಹುದ್ದೆ. ಬೆಂಗಳೂರಿನಲ್ಲಿ. ಸಾಧಾರಣವಾಗಿ ತಿಂಗಳಿನಲ್ಲಿ ಒಂದೋ, ಎರಡೋ ಬಾರಿ ವಿದೇಶಗಳಿಗೆ ಅವರು ಹೋಗುತ್ತಿರುವುದು ಸಾಮಾನ್ಯ. ಯಾಕೆ ಅಡ್ಡಾಡುತ್ತಾರೋ ಏನೋ? ಹೆಣ್ಣುಮಕ್ಕಳ ಗಂಡಂದಿರೂ ಹಾಗೆ. ದೊಡ್ಡ ಸರಕಾರಿ ಹುದ್ದೆಗಳಲ್ಲಿದ್ದು ಈಗ ಬೆಂಗಳೂರಿನಲ್ಲಿ ಬಂಗಲೆಗಳನ್ನು ಕಟ್ಟಿಸಿ ಉಳಿದಿದ್ದಾರೆ. “ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ, ನಮಗೆ ನಾಲ್ಕು ಮಕ್ಕಳಿದ್ದರೂ ಕಡಿಮೆಯೇ ಆಗಿ ಹೋಯಿತು’ ಎಂದು ದಾಕ್ಷಣಕ್ಕ ಹೇಳಿದರೂ ಕೇಳದ ಅವರೆಲ್ಲರಿಗೂ ಒಬ್ಬೊಬ್ಬರೇ ಮಕ್ಕಳು. ಈಗ ಅವರೂ ಎಲ್ಲೆಲ್ಲೋ ಏನೋ ಕಲಿಯುತ್ತಿರುವವರು. ಮಕ್ಕಳು ಅಳಿಯಂದಿರು ಬಂದರೆ, ಬಂದಾಗ, ಅವರು ತರುವ ಕಾರುಗಳಿಗೆ ರಸ್ತೆಗಳೇ ಚಿಕ್ಕವಾಗಿ ಹೋಗುತ್ತವೆ. ಬಂದರೆಂದರೆ ಹೆಗಡೆಯವರ ಸಂಭ್ರಮಕ್ಕೆ ಮೇರೆ ಇಲ್ಲ. ಮಾವಿನ ಹಣ್ಣಿನ ರಸಾಯನ, ಕಾಯಿಸೊಳೆ ತೆಳ್ಳವು ಮಾಡಲೇ ಬೇಕು. ಹೊತ್ತು ಹೊತ್ತಿಗೆ ಬೇರೆ ಬೇರೆಯ ಅಡಿಗೆ ಆಗಬೇಕು. ಅವರು ಹೊರಟಾಗ ಅವರ ಕಾರುತುಂಬಿ ತುಳುಕುವಷ್ಟು ಬಾಳೆಗೊನೆ, ಉಳ್ಳಾಗಡ್ಡೆ ಪೊತ್ತೆ, ಮಾವು, ಹಲಸು, ತೆಂಗಿನಕಾಯಿ, ಗೇರುಬೀಜ ಕಳಿಸಲೇ ಬೇಕು. ಅವರೇ ಕೆಲವೊಮ್ಮೆ “ಬೇಡ’ ಎಂದು ಸೊಕ್ಕು ಮಾಡಿ ಇಳಿಸಿಹೋಗುವುದು. ಅವರಿಗೂ ಕಡಿಮೆ ಏನೂ ಇಲ್ಲ.
ಈಗ ಹೆಗಡೆಯವರಿಗೆ ಎಪ್ಪತ್ತೇಳು ವರ್ಷ. ದಾಕ್ಷಣಕ್ಕನಿಗೂ ಎಪ್ಪತ್ತು ಆಗಿ ಹೋಯಿತು. ಈಗೀಗ ಅವರಿಗೆ ಚೂರು, ಚೂರಾಗಿ, ಅನಿಸಲಾರಂಭಿಸಿರುವುದೇನೆಂದರೆ, ಬೆಂಗಳೂರು ಮತ್ತು ಈ ಅಡಿಕೆ ತೋಟದ ಜಗತ್ತಿನ ನಡುವೆ ಎಲ್ಲೋ ಒಂದು ಆಳ ಕಂದರವೆದ್ದು ಬಿಟ್ಟಿದೆ. ಹೀಗೆ ಅನಿಸಿಕೆ ಆರಂಭವಾಗಿದ್ದಕ್ಕೆ ಕಾರಣ ಎಂದರೆ ಯಾಕೋ ಮಕ್ಕಳು ಸೊಸೆಯಂದಿರು, ಹೆಣ್ಣುಮಕ್ಕಳು ಮೊಮ್ಮಕ್ಕಳು ಇಲ್ಲಿ ಬರುವುದು ತುಂಬ ಕಡಿಮೆಯೇ. ಅವರಿಗೆ ಪುರುಸೊತ್ತೇ ಇರುವ ಹಾಗೆ ಕಾಣಿಸುವುದಿಲ್ಲ. ಹಾಗಂತ ಒಳ್ಳೆಯವರು ಅವರು. ಮಕ್ಕಳಿಗೆ ಈ ಜಾಗದ ಕುರಿತು ಪ್ರೀತಿ ಇದೆ. ತಮ್ಮಿಬ್ಬರನ್ನೂ ಕೂಡ ತುಂಬ ಗೌರವಾದರಗಳಿಂದ ನೋಡಿಕೊಳ್ಳು ತ್ತಾರೆ. “ಜೀಪು ಮಾರಿ ಕಾರು ತೆಗೆದುಕೊಳ್ಳಿ, ಹಣ ನಾವು ಕೊಡುತ್ತೇವೆ’ ಎನ್ನುತ್ತಾರೆ. “ತೋಟದ ಕೆಲಸ ಆದಷ್ಟೆ ಮಾಡಿಸಿ. ಸಾಕು. ಮುಖ್ಯ ನೀವು ಸುಖದಿಂದಿರಿ’ ಎನ್ನುತ್ತಾರೆ. ಫೋನಿನಲ್ಲಿ ದಿನಾಲೂ ಮಾತನಾಡುತ್ತಾರೆ. “ನಿಮ್ಮ ಬೆಂಗಳೂರಿಗಿಂತ ಇಲ್ಲಿ ಏನು ಕಡಿಮೆಯಿದೆ? ಒಬ್ಬರಾದರೂ ಇಲ್ಲಿಗೆ ಬನ್ನಿ’ ಎಂದು ಹೇಳಿದರೆ ಯಾಕೋ ಅವರು ಅಸಹಾಯಕರಂತೆ ಕಾಣುತ್ತಾರೆ. “ನಾವು ಬಂದಾಂಗೆ ಆತು’ ಎಂದು ಹೇಳಿ ನಗುತ್ತಾರೆ.
“ಮುಂದೆ ತೋಟ ಏನು ಮಾಡುವುದು?’ ಎಂದು ಕೇಳಿ ಅವರಿಗೆ ಬೇಸರ ಮಾಡಲು ಹೆಗಡೆಯವರಿಗಿಷ್ಟವಿಲ್ಲ. “ನೀವೇ ಬನ್ನಿ, ತೋಟದ ಸುದ್ದಿ ಆಮೇಲೆ ನೋಡೋಣ’ ಎಂದು ಅವರು ಹೇಳುವುದು. ಈ ತೋಟ ಹಾಳು ಕೆಡವಲು ತಮ್ಮ ಬಳಿ ಸಾಧ್ಯವೇ? ಅಥವಾ ಮಾರಲು, ತನ್ನ ಜೀವನ ಕಾಲದಲ್ಲಿ ಸಾಧ್ಯವೇ? ತಮ್ಮಿಬ್ಬರದೂ ಜೀವ ಇರುವುದು ಇಲ್ಲಿ. ಈ ತೋಟವೇ ಅವರಿಗೊಂದು ಬದುಕು ಕಟ್ಟಿಕೊಟ್ಟಿದ್ದು. ಇದನ್ನು ಮಾರಿದರೆ ತಗೆದುಕೊಳ್ಳುವವರಾದರೂ ಯಾರು? ಹೆಗಡೆಯವರಿಗೆ ಇನ್ನೂ ಅರ್ಥವಾಗದ ವಿಷಯವೆಂದರೆ, ಅವರು ಇಲ್ಲಿಗೆ ಏಕೆ ಬರುವುದಿಲ್ಲ. ಅವರಿಗೆ ಬೆಂಗಳೂರು, ಅಮೆರಿಕವೇ ಯಾಕೆ ಪ್ರೀತಿ. ಇಲ್ಲಿ ಇರದಿರುವಂತಹದು ಅಲ್ಲಿ ಏನಿದೆ? ಇಂತಹ ಎಮ್ಮೆ, ನಾಯಿ, ಹಣ್ಣು ಹಂಪಲ, ಹಸಿರು ಸಮೃದ್ದಿ ಅಲ್ಲಿ ಎಲ್ಲಿ ಸಿಗುತ್ತದೆ?
ಇಲ್ಲಿ ಕಡಿಮೆ ಇರುವುದಾದರೂ ಏನು? ದಾಕ್ಷಣಕ್ಕೆ ಒಂದು ಗ್ಲಾಸು ತುಂಬ ಕಾಸಿದ ಎಮ್ಮೆ ಹಾಲು ಮುಂದೆ ತಂದಿಟ್ಟು, ಮಿಟುಗನ ಬಾಳೆಹಣ್ಣು ಮುಂದೆ ತಂದಿಟ್ಟರೂ ಅವರಿಗೆ ತಿಳಿಯಲೇ ಇಲ್ಲ. ಆದರೂ ಮಕ್ಕಳಿಗೆ ಬೇಸರ ಮಾಡುವುದು ಬೇಡ. ತೋಟ ಮತ್ತು ಮನೆ ಹೇಗಾಗುತ್ತದೆಯೋ ಹಾಗಾಗುತ್ತದೆ. ಈ ವಿಷಯವನ್ನು ಗಂಡ ಹೆಂಡತಿ ಬಹಳ ಬಾರಿ ಚರ್ಚಿಸಿದ್ದೂ ಆಗಿದೆ. ಇಂದು ರಾತ್ರಿ ಮಗ ತಿಮ್ಮಣ್ಣನ ಫೋನ್ ಬಂದಾಗ ಅವನಿಗೆ ಹೇಳಿ ಬಿಡಬೇಕು. ಈಗ ಫೋನ್ ಸರಿ ಇಲ್ಲ. ಅಲ್ಲದೆ ಈಗ ಹೇಳುವುದು ಬೇಡ.
ತೋಟದ ವಿಷಯ ತಲೆ ಕೆಡಿಸಿಕೊಳ್ಳಬೇಡಿ! ಗಟ್ಟಿ ಇದ್ದಷ್ಟು ದಿನ ನಾವು ಇಲ್ಲಿ ಇರುವುದು. ಮುಂದೆ ನೀವು ಹೇಗೆ ಹೇಳುತ್ತಿರೋ ಹಾಗೆ! ಈಗ ಹಾಲು ಕುಡಿಯುತ್ತ ವಿಷಯ ಹೆಂಡತಿಗೂ ಹೇಳಿದರು. ಇಬ್ಬರದೂ ಒಂದೇ ಅಭಿಪ್ರಾಯ. ಮಕ್ಕಳಿಗೆ ಬೇಸರ ಮಾಡುವ ಆಸಕ್ತಿ ಇಲ್ಲ.
ಬೆಂಗಳೂರಿನಲ್ಲಿದ್ದರೂ ಮಗ ತಿಮ್ಮಣ್ಣನಿಗೆ ಮತ್ತು ಗಣೇಶನಿಗೆ ಇಲ್ಲಿಯದೇ ಚಿಂತೆ. ಅವರಿಗೂ ಗೊತ್ತು. ಅವರ ಬೇರುಗಳು ಇರುವುದು ಇಲ್ಲಿ, ನೀಲಕೋಡಿನಲ್ಲಿಯೇ. ಯಕ್ಷಗಾನ ಕುಣಿಯುತ್ತ, ಎಲೆ ಕೊಯ್ಯುತ್ತ, ಕೆಲಸದವರೊಂದಿಗೆ ಗೊಬ್ಬರ ಹೊರುತ್ತ, ನೀರು ಬಾರಿ ಮಾಡುತ್ತ ಬೆಳೆದವರು ಅವರು. ಬಹುಶಃ ಕಲಿಯುವಾಗ ಅವರಿಗೆ ಅಂದಾಜು ಇರಲಿಲ್ಲ. ಜೀವನ ಈ ರೀತಿಯ ತಿರುವು ಪಡೆದುಕೊಳ್ಳಬಹುದು ಎನ್ನುವದು. ಮೊದಲು ಅವರ ಗುರಿ ಇದ್ದಿದ್ದು ಹೈಸ್ಕೂಲು ಮಾಸ್ತರಾಗಿ, ಒಂದು ಮಾಸ್ತರಣಿಯನ್ನು ಮದುವೆ ಮಾಡಿಕೊಂಡು ತೋಟ ಕೂಡ ನೋಡಿಕೊಳ್ಳುತ್ತ ಇಲ್ಲೇ ಇರುವುದು. ಆದರೆ, ಕಲಿಕೆಯ ಮೆಟ್ಟಿಲುಗಳು ಅವರಿಗೆ ಸುಲಭವಾಗಿ ಸಿಕ್ಕಿ ಬಿಟ್ಟವು. ತಿಮ್ಮಣ್ಣ ಡಾಕ್ಟರ್‌ನಾಗಿ ಹೋದ, ಗಣೇಶ ಕಂಪ್ಯೂಟರ್ ಕ್ಷೇತ್ರಕ್ಕೆ ತಿರುಗಿದ. ಈಗ ಇಬ್ಬರೂ ದೊಡ್ಡ ನೌಕರಿಗಳಲ್ಲಿ. ಕೋಟಿಗಟ್ಟಲೆ ದುಡಿತ. ಅಡಿಕೆ ತೋಟವೆಂದರೆ ತುಂಬ ಪ್ರೀತಿಯೇನೋ ನಿಜ. ಅಡಿಕೆ ಸುಳಿ ಬಿಡುವುದನ್ನ ನೋಡುವುದೊಂದು ಹಬ್ಬ. ಆದರೆ, ಇಷ್ಟು ದೊಡ್ಡ ಹಣ ಅಡಿಕೆ ತೋಟದಲ್ಲಿ ಎಲ್ಲಿ ಸಿಗುತ್ತದೆ. ಊರಲ್ಲಿ ರಾಜನ ಹಾಗೆ ಇರಬಹುದು. ಆದರೆ, ಈ ಹಣ ಸಿಗುತ್ತದೆಯೇ? ಜಾಗತಿಕ ಅವಕಾಶಗಳು ಸಿಗುತ್ತವೆಯೇ. ಹಾಗೆಂದು ಯಕ್ಷಗಾನವಿರುವುದು ಅಲ್ಲಿ. ಅರ್ಥಗಾರಿಕೆ ಕೇಳಸಿಗುವುದು ಅಲ್ಲಿ. ಪಗಾರಿಗಾಗಿ ಇಲ್ಲಿರಬೇಕು. ಒಂದು ರೀತಿಯಲ್ಲಿ ನಾಚಿಕೆಗೇಡು. ಜೀತದಾಳಿನ ಹಾಗೆ. ಎಲ್ಲೋ ಕೇಳಿದ್ದ ಪುರಂದರದಾಸರ ಹಾಡು- “ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ’ ನೆನಪಿಗೆ ಬಂತು. ನೊರಜು ಕಚ್ಚಿದರೇನಾಯಿತು. ಇಲ್ಲೇ ಉಳಿದರೆ ಚರಿತ್ರೆಯೇ ನಾಶವಾಗಿ ಹೋಗುತ್ತದೆ. ಅಪ್ಪೆ ಮಿಡಿಯನ್ನು ಕೊಯ್ಯುವವರೇ ಇರುವುದಿಲ್ಲ. ಏನೇ ಆಗಲಿ, ಊರಿಗೇ ಹೋಗುವುದು ಶೀಘ್ರದಲ್ಲಿಯೇ. ಅಪ್ಪನಿಗೆ ಹೇಳಿಯೇ ಬಿಡೋಣ!
ತಿಮ್ಮಣ್ಣ ಊರಿಗೆ ಫೋನ್ ಹಚ್ಚಿದ. ರಿಂಗ್ ಹೊಡೆಯಿತು. ಯಾರೋ “ಹಲೋ ಹಲೋ’ ಎನ್ನುವ ಅಸ್ಪಷ್ಟ ಸ್ವರ. ಕರಕರಕರಕರ ಎನ್ನುವ ಕರ್ಕಶ ಸ್ವರ. ಮತ್ತೆ ಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂಬ ಸಂದೇಶ.
– ಆರ್. ಜಿ. ಹೆಗಡೆ