ಮೊಳಕಾಲ್ಮೂರು: ತಾಲೂಕಿನಲ್ಲಿ ಭೀಕರ ಬರದಿಂದ ಸಂಪೂರ್ಣ ಬೆಳೆಹಾನಿಯಾಗಿದೆ. ಕೇಂದ್ರ ಬರ ಅಧ್ಯಯನ ತಂಡ ರಾತ್ರಿ 8 ಗಂಟೆಗೆ ಅವೈಜ್ಞಾನಿಕವಾಗಿ ಬೆಳೆ ಹಾನಿ ವೀಕ್ಷಣೆ ಮಾಡಿ ತಾಲೂಕಿನ ರೈತರನ್ನು ಅವಮಾನ ಮಾಡಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಈಗಾಗಲೇ ಮುಂಗಾರು ಮತ್ತು ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗಿ ಕೋಟ್ಯಂತರ ರೂ. ಬೆಳೆ ನಷ್ಟ ಸಂಭವಿಸಿದೆ. ಆದರೆ ಕೇಂದ್ರ ಬರ ಅಧ್ಯಯನ ತಂಡ ನಿಗದಿ ಪಡಿಸಿದ ಸಮಯಕ್ಕೆ ಆಗಮಿಸದೆ ರಾತ್ರಿ 8 ಗಂಟೆ ವೇಳೆಗೆ ಆಗಮಿಸಿದೆ. ಈ ಭಾಗದ ರೈತರ ಸಂಕಷ್ಟವನ್ನು ಅರಿಯದೆ ಬೇಕಾಬಿಟ್ಟಿಯಾಗಿ ಅಧ್ಯಯನ ಮಾಡಲಾಗಿದೆ. ಆದ್ದರಿಂದ ಬೆಳೆ ನಷ್ಟ ಅಧ್ಯಯನಕ್ಕೆ ಮತ್ತೂಮ್ಮೆ ಕೇಂದ್ರ ತಂಡವನ್ನು ಕಳುಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಳೆ ವಿಮಾ ಕಂಪನಿಗಳಿಗೆ ಸುಳ್ಳು ವರದಿ ನೀಡಿ ರೈತರಿಗೆ ಬೆಳೆ ನಷ್ಟ ಪರಿಹಾರ ಮತ್ತು ಫಸಲ್ ಭಿಮಾ ಯೋಜನೆಯ ವಿಮಾ ಹಣವನ್ನು ಸರಿಯಾಗಿ ನೀಡದೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಂಚಿಸಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ದಿನಕ್ಕೊಂದು ಕುಂಟು ನೆಪ ಮುಂದಿಡುತ್ತಿದೆ. ಬ್ಯಾಂಕ್ ನೋಟಿಸ್‌ಗೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಭದ್ರಾ ಮೇಲ್ದಂಡೆ ಯೋಜನೆ ವಿಳಂಬವಾಗುತ್ತಿದೆ ಎಂದು ದೂರಿದರು.
ಬರ ಇರುವುದರಿಂದ ಗ್ರಾಮ ಪಂಚಾಯತ್‌ಗೆ ಒಂದರಂತೆ ಗೋಶಾಲೆ ತೆರೆದು ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಕೊಳವೆಬಾವಿಗಳು ಬತ್ತಿ ಹೋಗಿದ್ದರಿಂದ ಅಡಿಕೆ, ಮಾವು, ದಾಳಿಂಬೆ ಗಿಡಗಳು ಒಣಗಿಹೋಗಿವೆ. ಅದಕ್ಕೆ 25 ಸಾವಿರ ರೂ.ಪರಿಹಾರ ನೀಡಬೇಕು. ತಾಲೂಕು ಕೇಂದ್ರ ಮೊಳಕಾಲ್ಮೂರು ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಬಿ. ಶ್ರೀರಾಮುಲು, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಸದಸ್ಯ ಡಾ| ಬಿ. ಯೋಗೇಶ್ ಬಾಬು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ರಾಜಣ್ಣ, ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ಕಾರ್ಯದರ್ಶಿ ಕೆ. ಚಂದ್ರಣ್ಣ ,
ರವಿಕುಮಾರ್, ಕನಕ ಶಿವಮೂರ್ತಿ, ಡಿ.ಬಿ. ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.