Advertisement

ಟಿಪ್ಪು ಜಯಂತಿ ರದ್ದತಿಗೆ ಆಕ್ರೋಶ

01:11 PM Aug 04, 2019 | Suhan S |

ಸಾಗರ: ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿರುವುದನ್ನು ಖಂಡಿಸಿ ಮತ್ತು ರದ್ದು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಸಾಗರ ನಗರದ ಟಿಪ್ಪು ಸಹಾರ ಯುವಜನ ಸಂಘ ಶನಿವಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

Advertisement

ಪ್ರತಿಭಟನಕಾರರನ್ನುದ್ದೇಶಿಸಿ ದಲಿತ ಪ್ರಮುಖ ಪರಮೇಶ್ವರ ದೂಗೂರು ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ದ್ವೇಷ ರಾಜಕಾರಣದ ಭಾಗವಾಗಿಯೇ ಟಿಪ್ಪು ಜಯಂತಿಯನ್ನು ರದ್ದುಪಡಿಸಲಾಗಿದೆ. ಇದು ಅಕ್ಷ್ಯಮ್ಯ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಟಿಪ್ಪು ಜಯಂತಿ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ನೀಡಿದ ಗೌರವವಾಗಿತ್ತು. ನಂತರ ಸಮ್ಮಿಶ್ರ ಸರ್ಕಾರ ಕೂಡ ಅದನ್ನು ಮುಂದುವರಿಸಿಕೊಂಡು ಬಂದಿದ್ದರೂ, ಬಿ.ಎಸ್‌. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಕ್ಷಣವೇ ಟಿಪ್ಪು ಜಯಂತಿ ರದ್ದು ಮಾಡುವುದಕ್ಕೆ ಮುಂದಾಗಿರುವುದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ಆರೋಪಿಸಿದರು.

ಟಿಪ್ಪು ಸಹಾರದ ಅಧ್ಯಕ್ಷ ಸೈಯದ್‌ ಜಮೀಲ್ ಮಾತನಾಡಿ, ಜಾತ್ಯಾತೀತ ವ್ಯಕ್ತಿಯಾಗಿ ಆಡಳಿತ ಮಾಡಿದ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸ್ವತ: ಮಕ್ಕಳನ್ನು ಒತ್ತೆ ಇಟ್ಟು ಈ ನೆಲಕ್ಕಾಗಿ ತ್ಯಾಗ ಮಾಡಿರುವ ಇತಿಹಾಸ ನಮ್ಮ ಕಣ್ಣ ಮುಂದೆ ಇರುವಾಗ ಆತ ಮುಸ್ಲಿಂ ರಾಜ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಹಿಂದಿನ ಸರ್ಕಾರ ಆಚರಣೆಗೆ ತಂದಿದ್ದ ಟಿಪ್ಪು ಜಯಂತಿ ರದ್ದುಪಡಿಸಿರುವುದು ಖಂಡನೀಯ. ಈ ಆದೇಶವನ್ನು ರಾಜ್ಯಪಾಲರು ಹಿಂಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದರು.

ಹೋರಾಟಗಾರರಾದ ಶಿವಾನಂದ ಕುಗ್ವೆ, ತಾಪಂ ಸದಸ್ಯ ಅಶೋಕ ಬರದಳ್ಳಿ, ಎಸ್‌. ಲಿಂಗರಾಜ್‌, ನಾಗರಾಜ್‌, ತನ್ವಿರ್‌, ಮುಕ್ತಿಯಾರ್‌, ಅಸಾದುಲ್ಲಾ ಖಾನ್‌, ಬಾಷಾ ಶೇಖ್‌, ಅಜೀಜ್‌, ಮನ್ಸೂರ್‌ ಆಹ್ಮದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next