Advertisement

ರಾಮಮ್ಮನ ಕೆರೆ ಏರಿ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಆಕ್ರೋಶ

05:28 PM Dec 28, 2017 | |

ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನಕೆರೆ ಏರಿ ರಸ್ತೆ ಕಾಮಗಾರಿ ಆರಂಭಿಸಿ, ಸ್ಥಗಿತಗೊಳಿಸಿರುವುದನ್ನು ಖಂಡಿಸಿ ತಿಟ್ಟಮಾರ ನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಬುಧವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 

Advertisement

ಪಟ್ಟಣದಿಂದ ಅಂತರರಾಜ್ಯ ರಸ್ತೆಗಳಿಗೆ ಸಂಪರ್ಕ ಮಾರ್ಗವಾಗಿರುವ ತಾಲೂಕಿನ ತಿಟ್ಟಮಾರನಹಳ್ಳಿ ಬಳಿಯ ರಾಮಮ್ಮನ ಕೆರೆ ತುಂಬಿದು, ರಸ್ತೆ ಗುಂಡಿಮಯವಾಗಿದ್ದರಿಂದ ಪ್ರಯಾಣಿಕರು ಪ್ರತಿನಿತ್ಯ ಆತಂಕದಿಂದ ಸಂಚರಿಸುವಂತಾಗಿತ್ತು. ಈ ಬಗ್ಗೆ ಮಾರ್ಗದ ಪ್ರಯಾಣಿಕರು ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ಸಂಸದರನ್ನು ಸಹ ಅಡ್ಡಗಟ್ಟಿ ಮನವಿ ಸಲ್ಲಿಸಿದ್ದರು. ಇದರಿಂದ ಸ್ವಲ್ಪಮಟ್ಟಿಗೆ ಎಚ್ಚೆತ್ತ ಇಲಾಖೆ ಅಧಿಕಾರಿಗಳು ಡಿ.5ರಂದು ಏರಿ ರಸ್ತೆ
ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಆರಂಭದ 4-5 ದಿನಗಳು ಕಾಮಗಾರಿಯನ್ನು ಭರದಿಂದ ನಡೆಸಿದ್ದರು. ಇದೀಗ 10 ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ರಸ್ತೆಯಲ್ಲಿ ಹಲವು ಅವಘಡಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪ: ಏರಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಹಳೆ ರಸ್ತೆಯನ್ನು ಅಗೆದು ರಸ್ತೆಯಲ್ಲಿ ಮಣ್ಣು, ನೀರು ಹಾಕಿ ಸುಮ್ಮನಾಗಿರುವ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಕೇಳಿದರೆ ಕೆರೆ ಏರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ಸಿಕ್ಕಿಲ್ಲ ಎಂಬ ವದಂತಿಗಳು ಒಂದೆಡೆಯಾದರೆ. ಈಗಾಗಲೇ ಅನುಮೋದನೆಯಾಗಿ ಅಭಿವೃದ್ಧಿ ಮಾಡಿರುವ ತಿಟ್ಟಮಾರನಹಳ್ಳಿ-ಸಿದ್ದನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲೇ ಈ ಕೆರೆ ಏರಿ ರಸ್ತೆ ಅಭಿವೃದ್ಧಿ ಮಾಡಬೇಕಾಗಿತ್ತು. ಆದರೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಹಲವು ಸಂಶಯಗಳು ಉಂಟಾಗಿದ್ದು, ಗುತ್ತಿಗೆದಾರರು, ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹುಸಿಯಾದ ಭರವಸೆ: ಕೆರೆ ಏರಿ ರಸ್ತೆ ಅಭಿವೃದ್ಧಿ ಸ್ಥಗಿತ ಮಾಡಿರುವ ಬಗ್ಗೆ ಡಿ.22ರಂದು ಜಿಲ್ಲಾ ಲೋಕೋಪಯೋಗಿ ಇಲಾಖೆ ಇಇ ರವಿಕುಮಾರ್‌ ಅವರನ್ನು ಭೇಟಿ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅರಂಭಕ್ಕೆ ಮನವಿ ಮಾಡಲಾಗಿದೆ. ಅವರು ಡಿ.26ರಂದು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ಕಿಡಿಕಾರಿದರು.

ತನಿಖೆಯಾಗಲಿ: ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನಡೆಸಿರುವ ತಿಟ್ಟಮಾರನಹಳ್ಳ- ಸಿದ್ದನಹಳ್ಳಿ ಮಾರ್ಗದ ರಸ್ತೆ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಈಗಾಗಲೇ ಮಾರ್ಗದ ಹಲವೆಡೆ ಡಾಂಬರ್‌ ಕಿತ್ತು ಬಂದಿದ್ದು,
ರಸ್ತೆ ಗುಂಡಿ ಬೀಳುತ್ತಿದೆ. ಈ ಬಗ್ಗೆ ಇಲಾಖಾ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

Advertisement

ಭರವಸೆ: ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್‌ ನಾರಾಯಣಗೌಡ ತಾಂತ್ರಿಕ ತೊಂದರೆಗಳಿಂದ ಕಾಮಗಾರಿ ಸ್ಥಗಿತ ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಇವರ ಮನವಿಗೆ ಪ್ರತಿಭಟನಾಕಾರರು ಬಗ್ಗದ ಹಿನ್ನೆಲೆ ಜನವರಿ 1 ರಿಂದ ಶತಾಯ ಗತಾಯ ಕಾಮಗಾರಿ ಪ್ರಾರಂಭಿಸುವುದಾಗಿ ಹಿಂಬರಹ ಪತ್ರ ನೀಡಿ ದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಅಭಿಲಾಷ್‌ಗೌಡ, ಟಿ.ಪಿ.ರಘುನಂದನ್‌, ಟೆಂಪೋ ರಾಜು, ಮಹದೇವ, ಗ್ರಾಪಂ ಸದಸ್ಯ ಟಿ.ಸಿ.ಮೂರ್ತಿ, ಅನೀಲ್‌, ಸುಮಂತ್‌ಬಾಬು, ಹರ್ಷ, ಹರೀಶ, ಯೋಗೀಶ್‌, ರವಿ, ಮನೋಹರ್‌, ಧನಂಜಯ, ಕುಮಾರ್‌, ಮಾರ್ಗದ ವಾಹನ ಚಾಲಕರು ಸೇರಿದಂತೆ ಹಲವರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next