ಶಹಾಬಾದ: ನಗರದ ಬಹುರಾಷ್ಟ್ರೀಯ ಜನರಲ್ ಇಲೆಕ್ಟ್ರಿಕಲ್ (ಜಿಇ) ಕಾರ್ಖಾನೆ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆಯಿಲ್ಲದೇ ಸೋಮವಾರ ಕಾರ್ಖಾನೆ ಮುಖ್ಯದ್ವಾರ ಮುಚ್ಚಿ ಕಾರ್ಮಿಕರಿಗೆ ಒಳಗೆ ಹೋಗಲು ನಿರಾಕರಿಸಿದಕ್ಕೆ ಕಂಪನಿಯ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕ ವರ್ಗದವರು ನಡೆಸಿದ ಹೋರಾಟ ಮೂರನೇ ದಿನಕ್ಕೆ ಮುಂದುವರಿದಿದೆ.
ನಂತರ ಮಾತನಾಡಿದ ಕಾರ್ಮಿಕರು ಕಳೆದ ಮೂರು ತಿಂಗಳಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸುತ್ತಿದ್ದಾರೆ. ಈಗಾಗಲೇ ಹಣದ ಆಮಿಷ ತೋರಿಸಿ 86 ಕಾರ್ಮಿಕರಲ್ಲಿ 33 ಜನರನ್ನು ಹೊರಹಾಕಿದ್ದಾರೆ. ಉಳಿದ 53 ಜನರು ಸ್ವಯಂನಿವೃತ್ತಿ ತೆಗೆದುಕೊಳ್ಳಲು ನಿರಾಕರಿಸಿದಕ್ಕೆ ಕಂಪನಿಯ ಗೇಟ್ ಬಂದ್ ಮಾಡಿ, ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಕಂಪನಿಯಲ್ಲಿರುವ ಮಶಿನರಿಗಳನ್ನು
ಬೇರೆ ಕಡೆ ಸಾಗಿಸಲು ಯೋಜನೆ ಮಾಡಿದ್ದಾರೆ.
ಆದ್ದರಿಂದ ಕಂಪನಿಯಲ್ಲಿ ಕೆಲಸವಿಲ್ಲ. ನೀವು ಮನೆಯಲ್ಲಿರಿ, ನಾವು ನಿಮಗೆ ಸಂಬಳ ನೀಡುತ್ತೆವೆ ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಪೊಲೀಸ್‌ರಿಗೆ ದೂರು ನೀಡಲಾಗಿದೆ. ನಗರದ ಸಿಪಿಐ ಆನಂದರಾವ ಅವರು ವಿಧಾನಸಭೆ ಚುನಾವಣೆಯ ಫಲಿತಾಂಶವಾದ ನಂತರ ಮೇ 16ರಂದು ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನಾವು ಇವರ ಕಿರುಕುಳಕ್ಕೆ ಬಗ್ಗದೇ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಸತ್ಯನಾರಾಯಣ ಜೋಷಿ, ಅಶೋಕ ಘೂಳಿ, ಮಹಾದೇವ ಮಾನಕರ್, ಭೀಮರಾಯ ಸಿರಗೊಂಡ, ದಾವೂದ್ ಹುಸೇನ್, ಜಿ.ರಮೇಶ, ಲಕ್ಷ್ಮೀಕಾಂತ ಕಂದಗೂಳ, ಸುಧಾಕರ್, ಸೂರ್ಯಕಾಂತ ಕಲಾಲ, ನಿಂಗಣ್ಣ ಕಾರೊಳ್ಳಿ, ಸ್ಟಾನಿಲಿ, ಜಾನ್, ಅಣ್ಣಾರಾಯ ಹಳ್ಳಿ, ಮಲ್ಲಣ್ಣ ಹಬ್ಟಾಳ, ಪ್ರಭು ಪೂಜಾರಿ, ಮಹೇಶ ಹೀರಾಳ ಹಾಗೂ ಇನ್ನಿತರ ಕಾರ್ಮಿಕರು ಇದ್ದರು.