ಇಳಕಲ್ಲ: ಬನ್ನಿಕಟ್ಟಿ, ಹೊಸಪೇಟ ಓಣಿ, ಕುಲಕರ್ಣಿ ಪೇಟ್, ಚವ್ಹಾಣ ಪ್ಲಾಟ್ ನಗರಸಭೆ ಹತ್ತಿರದ ಅಂಬೇಡ್ಕರ್ ಭವನದಿಂದ ಗುರಲಿಂಗಪ್ಪ ಕಾಲೋನಿ ವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸುವ ನಗರದ ಕೆಇಬಿ ಹತ್ತಿರ ಓವರ್ ಹೆಡ್ ಟ್ಯಾಂಕ್‌ನಲ್ಲಿ ಪಕ್ಷಿಗಳು ಬಿದ್ದು ಸತ್ತಿದ್ದು, ಅದೇ ಕಲುಷಿತ ನೀರನ್ನು ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆಲ ದಿನಗಳಿಂದ ನೀರು ಕೆಟ್ಟ ವಾಸನೆ ಇರುವುದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ನಗರಸಭೆಯವರು ನದಿಯಿಂದ ಪೂರೈಕೆಯಾಗುತ್ತಿರುವ ನೀರು ವಾಸನೆ ಇರಲು ಸಾಧ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತ ಬಂದಿದ್ದರು.
ಗಾಯತ್ರಿ ಕಲ್ಯಾಣ ಮಂಟಪ ಹಾಗೂ ಮದಿನಾ (ಜೋಡ) ಮಸೀದಿ ಹತ್ತಿರ ಪೈಪ್ ಲೈನ್ ಕಟ್ಟಿಕೊಂಡು ಕೆಲ ಮನೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಗುರುವಾರ ದುರಸ್ತಿಗಾಗಿ ಪೈಪ್‌ಲೈನ್ ಪರೀಕ್ಷಿಸಿದಾಗ ಅದರೊಳಗೆ ಹತ್ತಾರು ಪಕ್ಷಿಗಳ ಅಸ್ತಿ ಪಂಜರಗಳು, ರಕ್ಕೆ ಪುಕ್ಕಗಳು ಕಂಡು ಬಂದಿವೆ. ನೀರು ಕೂಡಾ ದುರ್ವಾಸನೆಯಿಂದ ಕೂಡಿತ್ತು. ಸ್ಥಳದಲ್ಲೇ ಇದ್ದ ಜನರು, “ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಸಾಕಷ್ಟು ಭಾರಿ ಹೇಳಿದರೂ ಕೇಳಲಿಲ್ಲ, ಕೆಇಬಿ ಹತ್ತಿರ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶೀತಲಗೊಂಡಿದೆ. ಅಲ್ಲಿ ನಿರ್ವಹಣೆ ಮಾಡುವವರು ಇಲ್ಲದೇ ಇರುವುದರಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಇದಕ್ಕೆ ಯಾರು ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರತಿಯೊಂದು ನಳಗಳಿಗೂ ಮೀಟರ್ ಅಳವಡಿಸಿದ್ದಿರಿ. ಸಾರ್ವಜನಿಕರು ಹಣ ಕೊಟ್ಟು ಕುಡಿಯುವ ನೀರು ಕೊಳ್ಳುತ್ತಾರೆ. ಆದರೆ ಹಣ ಪಡೆದು ಕುಲಷಿತ ನೀರು ಪೂರೈಸುತ್ತಿರುವುದು ನಾಚಿಕೆ ವಿಷಯ. ಈಗ ಆಗಿರುವ ಅನಾಹುತ ಕೂಡಲೇ ಸರಿಪಡಿಸಬೇಕು ಹಾಗೂ ಮತ್ತೂಮ್ಮೆ ಇಂತಹ ಘಟನೆ ಮರುಕಳಿಸದಂತೆ ನಿಗಾವಹಿಸಬೇಕು. ಇಲ್ಲದಿದ್ದರೇ ನಗರಸಭೆ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ನಾಗರಾಜ ಯರಡೋಣಿ, ಗುಂಡಪ್ಪ ಗೋಟೂರ ಇದ್ದರು.