ಬೆಂಗಳೂರು: “ಪ್ರಧಾನಿ ಮೋದಿಗೆ ಬೈದರೆ ಆಕಾಶಕ್ಕೆ ಉಗುಳಿದಂತೆ, ದೇವರಿಗೆ ಬೈದಂತೆ’ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಮೋದಿಯವರು ಪ್ರತಾಪ್ ಸಿಂಹಗೆ ದೇವರು ಇರಬಹುದು. ಅವರು ಬೇಕಾದರೆ ಮೋದಿಗೆ ಪೂಜೆ ಮಾಡಿಕೊಳ್ಳಲಿ. ಆದರೆ, ಈ ದೇವರು ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಿದ್ದಾರೆ. ಮೊದಲು ನಮಗೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಣ ಕೊಡಿ ಎಂದು ಒತ್ತಾಯಿಸಿದ್ದಾರೆ.
ಪ್ರವಾಹದಲ್ಲಿ 20 ಲಕ್ಷ ಜನ ಮನೆ, ಮಠ ಕಳೆದುಕೊಂಡಿದ್ದಾರೆ. ಅದರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ.ಆದರೆ, ಪ್ರತಾಪ್ ಸಿಂಹ ಬಕೆಟ್ ರಾಜಕೀಯ, ಭಟ್ಟಂಗಿತನ ಮಾಡುತ್ತಿರುವುದು ಖಂಡನೀಯ. ಯಾರೂ, ಯಾರಿಗೂ ದೇವರಾಗಲು ಸಾಧ್ಯವಿಲ್ಲ. ಮೋದಿ ಜನ ವಿರೋಧಿ, ರೈತ ವಿರೋಧಿ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಉತ್ತರ ಕರ್ನಾಟಕದಲ್ಲಿ ನೆರೆಯಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಇಷ್ಟೊಂದು ದೊಡ್ಡಮಟ್ಟದ ಹಾನಿಯಾಗಿದ್ದರೂ ಪ್ರಧಾನಿ ಆದವರು ಜನರ ಸಂಕಷ್ಟಕ್ಕೆ ಬರದೇ ಇರುವುದು ನಿರ್ಲಕ್ಷ ಧೋರಣೆ. ಇಂತಹ ಅಮಾನವೀಯ ವ್ಯಕ್ತಿಯನ್ನು ದೇವರಂತೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರಜ್ಞಾವಂತ ಸಂಸದರಾಗಿ ಅವರು ಹೀಗೆ ಹೇಳಿದ್ದು ಸರಿಯಲ್ಲ.
-ಎಚ್.ಕೆ. ಪಾಟೀಲ್, ಮಾಜಿ ಸಚಿವ
ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಟಿವಿ ನೋಡಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಸೂಲಿಬೆಲೆ ಅವರು ಪ್ರಧಾನಿ ಮೋದಿ ಅಥವಾ ಬಿಜೆಪಿ ಸಂಸದರನ್ನಾಗಲಿ ನಿಂದಿಸಿಲ್ಲ. ಹೀಗಾಗಿ, ಅವರ ಮಾತಿಗೆ ಬೇರೆ ಬಣ್ಣ ಕೊಡುವುದು ಬೇಡ.
-ಸುರೇಶ ಅಂಗಡಿ, ರೈಲ್ವೆ ರಾಜ್ಯ ಸಚಿವ