Advertisement
ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುಮಲತಾ ಅಂಬರೀಶ್ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ರೈತರ ಸಮಸ್ಯೆ ಹಾಗೂ ನೀರಿನ ಅಗತ್ಯತೆ ಬಗ್ಗೆ ಮನವಿ ಸಲ್ಲಿಸಿದ್ದೇ ದೊಡ್ಡ ಸಾಧನೆ ಎಂದು ಭಾವಿಸಿದಂತಿದೆ.
Related Articles
Advertisement
ಸೌಜನ್ಯ ಪ್ರದರ್ಶಿಸಲಿಲ್ಲ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸಬೇಕೆಂಬ ಒತ್ತಾಯದೊಂದಿಗೆ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರು ಹತ್ತು ದಿನಗಳ ಕಾಲ ಮಂಡ್ಯದಲ್ಲಿ ರೈತಸಂಘದ ಕಾರ್ಯಕರ್ತರೊಂದಿಗೆ ಅಹೋರಾತ್ರಿ ಧರಣಿ ನಡೆಸಿದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸುವ ಸೌಜನ್ಯವನ್ನು ಸುಮಲತಾ ಪ್ರದರ್ಶಿಸಲಿಲ್ಲ. ಕಾಂಗ್ರೆಸ್ ನಾಯಕರಾದ ಎನ್.ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಎಚ್.ಬಿ.ರಾಮು ಸೇರಿದಂತೆ ಹಲವರು ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಆದರೆ, ಸುಮಲತಾ ರೈತರ ಹೋರಾಟಕ್ಕೆ ಟ್ವಿಟ್ಟರ್‌ನಲ್ಲಷ್ಟೇ ಬೆಂಬಲ ಸೂಚಿಸಿ ಮಂಡ್ಯಕ್ಕೆ ಬರದೆ ದೂರ ಉಳಿದರು.
ಹೊಣೆಗಾರಿಕೆ ಮರೆತ ಉಸ್ತುವಾರಿ : ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜಿಲ್ಲೆಯ ಸ್ಥಿತಿ-ಗತಿಗಳ ಬಗ್ಗೆ ಚೆನ್ನಾಗಿ ಅರಿತಿದ್ದರೂ ಜವಾಬ್ದಾರಿ ಮರೆತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮದೇ ಪಕ್ಷದ ಶಾಸಕರಿದ್ದರೂ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಬೆಳೆಗಳ ಪರಿಸ್ಥಿತಿ, ನೀರಿನ ಕೊರತೆಯ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಸಿಎಂ ಬಳಿಗೆ ನಿಯೋಗ ಕರೆದೊಯ್ದು ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಬೇಕಿತ್ತು. ಆ ಹೊಣೆಗಾರಿಕೆಯನ್ನೇ ಮರೆತು ಜವಾಬ್ದಾರಿಯಿಂದ ನುಣುಚಿಕೊಂಡಿರುವ ಪುಟ್ಟರಾಜು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಅಸಮಾಧಾನ; ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಮಯದಲ್ಲೂ ಉಸ್ತುವಾರಿ ಸಚಿವರಾಗಿ ಅವರ ಬೇಡಿಕೆಗಳನ್ನು ಆಲಿಸಲಿಲ್ಲ. ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚಿಸುವ, ನೀರು ಬಿಡುಗಡೆಗೆ ಇರುವ ಅಡೆ-ತಡೆಗಳನ್ನು ಅರ್ಥೈಸಿಕೊಟ್ಟು ಸಮಾಧಾನಪಡಿಸುವ ಯಾವ ಪ್ರಕ್ರಿಯೆಯನ್ನೂ ನಡೆಸಲಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತ ರೈತಸಂಘದ ನಾಯಕತ್ವದಲ್ಲೇ ಪ್ರತಿಭಟನೆ ನಡೆಯುತ್ತಿದ್ದು, ರಾಜಕೀಯ ಕಾರಣಕ್ಕಾಗಿ ಜೆಡಿಎಸ್‌ನ ಯಾವುದೇ ಶಾಸಕರು ಹಾಗೂ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಲ್ಲದೆ ಕಾವೇರಿ ವಿವಾದ ಸಂಪೂರ್ಣವಾಗಿ ಸಂಸದೆ ಸುಮಲತಾ ಅವರ ವ್ಯಾಪ್ತಿಗೆ ಒಳಪಟ್ಟಿದ್ದು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸೇಡಿನ ರಾಜಕಾರಣ: ಲೋಕಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ನಿಖೀಲ್ , ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ. ಅವರಿಂದಲೇ ಕೆಆರ್‌ಎಸ್‌ನಿಂದ ನೀರು ಹರಿಸಿಕೊಳ್ಳಿ ಎಂಬ ಅರ್ಥದಲ್ಲಿ ಹೇಳುತ್ತಾ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಟೀಕೆಗೆ ಗುರಿಯಾಗಿದೆ.
ಇನ್ನು ಜಿಲ್ಲೆಗೆ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ನಾಯಕರನ್ನೇ ಗೆಲ್ಲಿಸಿದ್ದರೂ ತೃಪ್ತರಾಗದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಗನನ್ನು ಸೋಲಿಸಿದರು ಎಂಬ ಒಂದೇ ಕಾರಣಕ್ಕೆ ಜಿಲ್ಲೆಯ ಜನರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಮೂರು ದಿನಕ್ಕೊಮ್ಮೆ ಮಂಡ್ಯದಲ್ಲೇ ಠಿಕಾಣಿ ಹೂಡುತ್ತಿದ್ದ ಸಿಎಂ ಚುನಾವಣಾ ಫಲಿತಾಂಶದ ನಂತರದಲ್ಲಿ ಅವರ ನೆರಳೂ ಜಿಲ್ಲೆಯ ಮೇಲೆ ಬೀಳದಂತೆ ನಡೆದುಕೊಳ್ಳುತ್ತಿದ್ದಾರೆ.
● ಮಂಡ್ಯ ಮಂಜುನಾಥ್