Advertisement

Cauvery Dispute ಮಂಡ್ಯ, ರಾಮನಗರದಲ್ಲಿ ಭುಗಿಲೆದ್ದ ಪ್ರತಿಭಟನೆ

10:56 PM Aug 21, 2023 | Team Udayavani |

ಮಂಡ್ಯ/ರಾಮನಗರ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ, ರೈತಸಂಘ ಹಾಗೂ ವಿವಿಧ ಕನ್ನಡ ಪರ ಸಂಘ ಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

Advertisement

ಮಂಡ್ಯ ನಗರದ ಜೆ.ಸಿ.ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಒಂದು ಗಂಟೆ ಪ್ರತಿಭಟನೆ ನಡೆಸಿದರು. ಕಿವಿ ಮೇಲೆ ಹೂವಿಟ್ಟುಕೊಂಡು, ಹುರುಳಿ ಕಾಳು ಪ್ರದರ್ಶನ ಮಾಡುವ ಮೂಲಕ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದ ಕಾರ್ಯಕರ್ತರು ಜೆ.ಸಿ.ವೃತ್ತದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬೆಂಕಿ ನಂದಿಸಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ ನಡೆಯಿತು. ಸಂಸದೆ ಸುಮಲತಾ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣಗೌಡ, ಪಿ.ಸಿ.ಮೋಹನ್‌, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಸಹಿತ ಹಲವರು ಪಾಲ್ಗೊಂಡಿದ್ದರು.

ಮದ್ದೂರಿನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಉರುಳು ಸೇವೆ ಮಾಡಿದರು. ರಾಮನಗರದಲ್ಲೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾವೇರಿ ಕ್ರೆಡಿಟ್‌ ಸಂಸದರೇ ತೆಗೆದುಕೊಳ್ಳಲಿ
ಮಂಡ್ಯ: ಚುನಾವಣೆ ಬರುತ್ತಿದೆ ಎಂದು ಸಂಸದೆ ಸುಮಲತಾ ಹೋರಾಟ ಮಾಡುತ್ತಿದ್ದಾರೆ. ಅವರು ಈ ಹಿಂದೆ ಯಾವತ್ತಾದರೂ ಪ್ರತಿಭಟನೆಗೆ ಬಂದಿದ್ದರಾ? ಚುನಾವಣೆಗಾಗಿ ಬಂದಿದ್ದಾರೆ ಅಷ್ಟೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ವ್ಯಂಗ್ಯವಾಡಿದರು.

ಸುದ್ದಿಗಾರರ ಜತೆ ಮಾತನಾಡಿ, ಅವರು ಕೇಳಬೇಕಾದದ್ದು ಕೇಂದ್ರ ಸರಕಾರವನ್ನೇ ಹೊರತು ನಮ್ಮನ್ನಲ್ಲ. ಮಂಡ್ಯ ಜಿಲ್ಲೆಯ ಪರವಾಗಿ 27 ಜನರ ನಿಯೋಗ ಕರೆದುಕೊಂಡು ಹೋಗಿ ಧ್ವನಿ ಎತ್ತಲಿ. ಈಗಲಾದರೂ ಜವಾಬ್ದಾರಿ ನಿರ್ವಹಿಸಲಿ. ನಮ್ಮ ರಾಜ್ಯದ ಪರವಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿ. ಅದರ ಕ್ರೆಡಿಟ್‌ ಅನ್ನು ಅವರೇ ತೆಗೆದುಕೊಳ್ಳಲಿ, ನಮಗೆ ಬೇಡ ಎಂದರು.

Advertisement

ಬಿಜೆಪಿ ರಾಜಕೀಯ ಬೇಳೆ ಬೇಯಿಸಿ ಕೊಳ್ಳುತ್ತಿದೆ
ಮೈಸೂರು: ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ನ್ಯಾಯಾಲಯದ ನಿರ್ಧಾರದಂತೆ ನೀರು ಬಿಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಯಿಂದ ಯಾವುದೇ ಸರಕಾರ ಕೆಲಸ ಮಾಡುವುದಿಲ್ಲ. ನಮ್ಮ ಸರಕಾರವೂ ರಾಜ್ಯದ ರೈತರ ಹಿತದೃಷ್ಟಿಯಿಂದಲೇ ಕೆಲಸ ಮಾಡಲಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರದಲ್ಲಿ¨ªಾಗಲೂ ತಮಿಳುನಾಡಿಗೆ ನೀರು ಬಿಡಲಾಗಿದೆ. ಹೀಗಾಗಿ ಬಿಜೆಪಿ ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣೆ ಮಂಡಳಿ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿದೆ. ಮಳೆಯಾಗದ ಸಂದರ್ಭದಲ್ಲಿ ಸಂಕಷ್ಟ ಸೂತ್ರದಡಿ ನೀರು ಹಂಚಿಕೆ ಮಾಡಿಕೊಳ್ಳಬೇಕಿದೆ. ಸಂಕಷ್ಟ ಸೂತ್ರದಂತೆಯೇ ರಾಜ್ಯ ಸರಕಾರ ನಡೆದುಕೊಳ್ಳುತ್ತಿದೆ. ಆ.23ರಂದು ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ನಮ್ಮ ರೈತರಿಗೆ ಅನ್ಯಾಯ ಆಗಿದೆ. ಕಾವೇರಿ ನಮ್ಮ ತಾಯಿ ಇದ್ದಂತೆ. ಇದನ್ನು ಯಾರೂ ರಾಜಕೀಯ ದೃಷ್ಟಿಯಿಂದ ನೋಡಬಾರದು. ಕೇಂದ್ರ ಸರಕಾರ ಇದರಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ರಾಜ್ಯ ಸರಕಾರ ಸುಳ್ಳು ಹೇಳುತ್ತಿದ್ದು, ಜನರ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ.
-ಸುಮಲತಾ ಅಂಬರೀಷ್‌, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next