ರಾಣಿಬೆನ್ನೂರ: ರಾಣಿಬೆನ್ನೂರು-ಹಿರೇಕೆರೂರು ರಾಜ್ಯ ಹೆದ್ದಾರಿಯ ವ್ಯಾಪ್ತಿಯ ಹೆಡಿಯಾಲ ಗ್ರಾಮದ ಬಳಿ ಕೆಆರ್‌ಡಿಸಿಎಲ್ನವರು ಲಿಂಕ್ ರಸ್ತೆಗೆ ಅವೈಜ್ಞಾನಿಕವಾಗಿ ಟೋಲ್ ನಿರ್ಮಿಸಿದ್ದು, ಸಾರ್ವಜನಿಕರಿಗೆ ಹೊರೆಯಾಗುವ ರೀತಿಯಲ್ಲಿ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಇದು ಗ್ರಾಮಾಂತರ ಲಿಂಕ್ ರಸ್ತೆಯಾಗಿದ್ದರಿಂದ ಶುಲ್ಕವನ್ನು ಪಡೆಯದೇ ಮುಕ್ತವಾಗಿ ಅವಕಾಶ ಕಲ್ಪಿಸಬೇಕು ಎಂದು ನಾಗರಿಕರು ನಗರದಲ್ಲಿ ಪ್ರತಿಭಟಿಸಿ ಆಗ್ರಹಿಸಿದರು.
ರೈತ ಸಂಘಟನೆಯ ಮುಖಂಡರಾದ ರವೀಂದ್ರಗೌಡ ಪಾಟೀಲ ಮತ್ತು ಶಿವಪುತ್ರಪ್ಪ ಮಲ್ಲಾಡದ ಜಂಟಿಯಾಗಿ ವಿವರವಾಗಿ ಮಾತನಾಡಿದರು. ಹಿರೇಕೆರೂರು-ರಾಣಿಬೆನ್ನೂರು ರಾಜ್ಯ ಹೆದ್ದಾರಿಯಲ್ಲಿ ಹೆಡಿಯಾಲ ಹತ್ತಿರ 62ರ ಹಾಗೂ ಹಂಸಭಾವಿ ಹತ್ತಿರದ 76ರ ಹೆದ್ದಾರಿ ಇದಾಗಿದೆ. ಇದೇ ಸೆ. 16ರಿಂದ ಶುಲ್ಕ ಸಂಗ್ರಹಣೆಗೆ ಮುಂದಾಗಿರುವುದು ಗ್ರಾಮಸ್ಥರಿಗೂ ನೋವಾಗಿದೆ ಎಂದರು.
ಈ ಯೋಜನೆಯನ್ನು ರೈತಾಪಿ ವರ್ಗ ನಿತ್ಯ ಸಂಚರಿಸುವ ನಾಗರಿಕರಿಗೆ ತುಂಬಾ ಹೊರೆಯಾಗುತ್ತದೆ. ಯೋಜನೆ ಜಾರಿಯಾದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಂಚಾರಿಗಳ ತಲೆಯ ಮೇಲೆ ಆರ್ಥಿಕ ಭಾರವಾಗುತ್ತದೆ. ಇದರಿಂದ ನಾಗರಿಕರು ನಿತ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಜನವಿರೋಧಿ ನೀತಿಯಾಗಿದ್ದು, ಕೂಡಲೇ ಕೈ ಬಿಡದಿದ್ದರೆ ಸೋಮವಾರದಂದು ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಹೇಳಿದರು.
ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿ ಟೋಲ್ ಗೇಟ್ ಸಂಪರ್ಕ ರಸ್ತೆಯಲ್ಲಿ ರೈತ ಸಂಪರ್ಕ ರಸ್ತೆ ಕಲ್ಪಿಸುವಂತೆ ಪ್ರತಿಭಟಿಸಿ ಮನವಿ ಸಲ್ಲಿಸಲಾಗಿತ್ತು. ಜನರ ವಿರೋಧದ ಮಧ್ಯೆಯೂ ಕಾಮಗಾರಿ ಮುಕ್ತಾಯಗೊಳಿಸಿದ್ದಾರೆ. ಇದೆಲ್ಲರ ಮಧ್ಯೆ ಕುಸಗೂರ ಗ್ರಾಮಕ್ಕೆ ಸಾಗುವ ಪೂರ್ವದಲ್ಲಿ ಇರುವ ಹೇಮರಡ್ಡಿ ಮಲ್ಲಮ್ಮ ಮಹಾದ್ವಾರ ರಸ್ತೆಯು ಸಂಪೂರ್ಣ ಹದಗೆಡಿಸಿದ್ದಾರೆ. ರಸ್ತೆಯನ್ನು ಕೂಡಲೇ ಸರಿಪಡಿಸಬೇಕು ಎಂದರು.
ರಸ್ತೆ ಕಾಮಗಾರಿಗಾಗಿ ಅನೇಕ ರೈತರ ಜಮೀನುಗಳ ಭೂಮಿಯನ್ನು ವಶಕ್ಕೆ ಪಡೆದಿದೆ. ನಿಗದಿಪಡಿಸಿದಂತೆ ಅವರಿಗೆ ಈ ವರೆಗೂ ಪರಿಹಾರದ ನೀಡದೆ ನಿತ್ಯವೂ ರೈತರನ್ನು ಅಲೆದಾಡಿಸುವಲ್ಲಿ ನಿರತರವಾಗಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ, ರಸ್ತೆ ಸುರಕ್ಷತೆಗೆ ಅಂಬ್ಯುಲೆನ್ಸ್ ಪ್ರಥಮ ಚಿಕಿತ್ಸೆ, ಶೌಚಾಲಯಗಳು ನಿರ್ಮಿಸದೇ ಏಕಾಏಕಿ ಸುಂಕ ಸಂಗ್ರಹಣೆಗೆ ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಲಿಂಕ್ ರಸ್ತೆ ಹೆಡಿಯಾಲ-ಹಂಸಭಾವಿ ನಡುವೆ ಕೇವಲ 25 ಕಿಮೀ ಅಂತರವಿದೆ. ಟೋಲ್ಗೇಟ್‌ನ ಅವಶ್ಯಕತೆ ಇಲ್ಲಿ ಇರಲಿಲ್ಲ. ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯ ಕುಳಿತು ಯೋಜನೆಯನ್ನು ರೂಪಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೆಆರ್‌ಡಿಸಿಎಲ್ನವರ ಕ್ರಮ ಅವೈಜ್ಞಾನಿಕವಾಗಿದ್ದು, ಈ ಭಾಗದ ನಾಗರಿಕರ ವಿರೋಧವಿದೆ. ಶುಲ್ಕ ವಿಧಿಸುವುದನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ನಾಗರಿಕರಿಂದ ನಿರಂತರ ಪ್ರತಿಭಟನೆ ನಡೆಯಲಿದೆ ಎಂದರು.
ಸುರೇಶಪ್ಪ ಗರಡಿಮನಿ, ಸತೀಶ ಕ್ಯಾತಾಳಿ, ಮಹೇಶಪ್ಪ ಪೂಜಾರ, ಮಲಕಪ್ಪ ಲಿಂಗದಹಳ್ಳಿ, ಹರಿಹರಗೌಡ ಪಾಟೀಲ, ಹನುಮಂತಪ್ಪ ಕಬ್ಟಾರ, ರಾಜು ದೊಡ್ಡಮನಿ, ಪ್ರಭು ಗೂಡಿಹಾಳ, ಪರಮೇಶಪ್ಪ ಗೌಳಿ, ರಮೇಶ ಹಾರೋಗೊಪ್ಪ, ಮಹೇಶಪ್ಪ ಸುಣಗಾರ, ಬಸವರಾಜ ಚಲವಾದಿ, ಕರಬಸಪ್ಪ ಚಲವಾದಿ, ರಮೇಶ ತಿಮ್ಮಣ್ಣನವರ, ಹಸನ್‌ಸಾಬ್ ಒಡೆಹೊಸೂರ, ಸುರೇಶಪ್ಪ ಸುಣಗಾರ, ಚನ್ನಪ್ಪ ಹೆಡಿಯಾಲ, ಫಕ್ಕೀರಪ್ಪ ಹೆಡಿಯಾಲ ಸೇರಿದಂತೆ ನೂರಾರು ರೈತರು ಇದ್ದರು.