ಹುಮನಾಬಾದ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಸ್ವಚ್ಛತೆ ಕೊರತೆ ಕಂಡು ಆರೋಗ್ಯ ಇಲಾಖೆ ಯೋಜನಾ ನಿರ್ದೇಶಕ ಡಾ|ಓಂಪ್ರಕಾಶ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆಯಿತು.
ಆಸ್ಪತ್ರೆಗೆ ಭೇಟಿ ನೀಡಿದ ಅವರು ಸಾಮಾನ್ಯ ವಾರ್ಡ್, ಪ್ರಸೂತಿಗೃಹ ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಅವೈಜ್ಞಾನಿಕವಾಗಿ ಕಸ ಸಂಗ್ರಹಿಸಿರುವುದು, ವಿಲೆವಾರಿಗೊಳಿಸದೇ ಇರುವುದು ಮತ್ತು ಶೌಚಾಲಯ ಸ್ವಚ್ಛತೆ ಕಡೆಗೆ ಗಮನಹರಿಸದೇ ಇರುವುದನ್ನು ಕಂಡು ಆಯಾ ವಿಭಾಗ ಮುಖ್ಯಸ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮನೆ ಅಂಗಳ ಮನೆ ಒಳಗಿನ ವ್ಯವಸ್ಥೆಗೆ ಕನ್ನಡಿ ಎಂಬಂತೆ ಆಸ್ಪತ್ರೆ ಪ್ರಾಂಗಣದಲ್ಲಿ ಅವ್ಯವಸ್ಥೆ ಆಸ್ಪತ್ರೆ ಒಳಗಿನ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದ ಅವರು, ಆಸ್ಪತ್ರೆಯ ಪ್ರತಿಯೊಂದು ವಿಭಾಗಗಳಿಗೆ ಸಮರ್ಪಕ ನೀರು ಪೂರೈಕೆ ಆಗದಿರಲು ಕಾರಣವೇನು? ಅಗತ್ಯಕ್ಕೆ ತಕ್ಕಂತೆ ಬಾಣಂತಿಯರಿಗೆ ಬಿಸಿ ನೀರು ಮತ್ತು ತಂಪು ನೀರು ಸಮರ್ಪಕ ಪೂರೈಕೆ ಆಗುತ್ತಾ? ನಿಮ್ಮ ಮನೆಯಲ್ಲಿನ ಶೌಚಾಲಯಗಳೂ ಹೀಗೆ ಮಲಿನವಾಗಿವೆಯೇ? ಸ್ವಚ್ಛತೆ ಬಗ್ಗೆ ಯಾಕೆ ಇಷ್ಟೊಂದು ನಿರ್ಲಕ್ಷ ್ಯ? ಇಲ್ಲಿ ಯಾರೂ ಹೆಳುವವರು ಕೇಳುವವರು ಇಲ್ಲ ಅಂದ್ಕೊಂಡಿದ್ದೀರೊ ಹೇಗೆ ಎಂದು ಪ್ರಶ್ನಿಸಿದರು. ಹೈ.ಕ. ಅಭಿವೃದ್ಧಿ ವಿಭಾಗದಲ್ಲಿ ಇರುವ ಅನುದಾನದ ಸದ್ಬಳಕೆ ಮೂಲಕ ರೋಗಿಗಳಿಗೆ ಉತ್ತಮ ಸೇವೆ ಒದಗಿಸಿ. ಸರ್ಕಾರ, ಆಸ್ಪತ್ರೆ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳಬೇಕು ಎಂದರು.
ಎಲ್ಲ ಸೌಲಭ್ಯಗಳ ಮಧ್ಯದಲ್ಲೂ ಸಿಬ್ಬಂದಿ ಕರ್ತವ್ಯದ ಬಗ್ಗೆ ಬೇಜವಾಬ್ದಾರಿ ವಹಿಸುವುದು ನ್ಯಾಯವೇ? ಸರ್ಕಾರ ನೀಡುವ ಸಂಬಳಕ್ಕೆ ಕನಿಷ್ಟ ಬದ್ಧತೆ ಬೇಡವೇ ಎಂದು ಪ್ರಶ್ನಿಸಿದರು. ಕಳೆದ ದಶಕದ ಹಿಂದೆ ಕೊಡಮಾಡಿದ ಶವ ಸಂರಕ್ಷಣಾ ಘಟಕ ಬಳಕೆ ಇಲ್ಲದೇ ಹಾಳಾಗುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 8 ಲಕ್ಷ ರೂ. ವೆಚ್ಚದ ಯಂತ್ರ ವ್ಯರ್ಥ ಹಾಳಾದರೇ ಯಾರಿಗೆ ಪ್ರಯೋಜನ? ಆಸ್ಪತ್ರೆಯಲ್ಲಿ ಎಲ್ಲ ಅತ್ಯಾಧುನಿಕ ಯಂತ್ರ ಸೇರಿದಂತೆ ಪ್ರತಿಯೊಂದು ಉಪಕರಣಗಳನ್ನು ನಿಮ್ಮ ಮನೆಯಲ್ಲಿನ ವಸ್ತುಗಳಂತೆ ಜೋಪಾನ ಮಾಡಬೇಕು ಎಂದರು.
ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಭವಿಷ್ಯದಲ್ಲಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೇ ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು, ಕೆಲವರಿಗೆ ನೊಟೀಸ್ ನೀಡುವುದಾಗಿ ಎಚ್ಚರಿಸಿದರು.
ಇಲಾಖೆಯ ಜಿಲ್ಲಾ ವೀಕ್ಷಕ ಡಾ| ವಿವೇಕ ಡೋರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ|ಕೃಷ್ಣಾರೆಡ್ಡಿ, ಡಾ|ಸಂತೋಷ ಕಾಳೆ, ಆರೋಗ್ಯ ಇಲಾಖೆ ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಡಾ|ಸಂಜೀವಕುಮಾರ ಪಾಟೀಲ, ಹುಮನಾಬಾದ್ ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ|ಅವಿನಾಶ ಹಾಗೂ ಸಿಬ್ಬಂದಿ ಹಾಜರಿದ್ದರು.