Advertisement

ಕಳಪೆ ಕಾಮಗಾರಿಗೆ ಆಕ್ರೋಶ

09:21 AM Sep 22, 2019 | Team Udayavani |

ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಭೂ ಸೇನಾ ನಿಗಮ ಕೈಗೊಂಡ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅವಧಿಗೆ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

ಭೂ ಸೇನಾ ನಿಗಮದ ಅಧಿ ಕಾರಿ ಲಕ್ಷ್ಮಣ ನಾಯ್ಕ ತಮ್ಮ ಇಲಾಖೆ ವರದಿ ವಿವರಿಸುತ್ತಿರುವಾಗ ಗುಡಗೇರಿ ಸದಸ್ಯ ಬಸನಗೌಡ ಕರೇಹೊಳಪ್ಪಗೌಡ್ರ ಮಧ್ಯ ಪ್ರವೇಶಿಸಿ ಗುಡಗೇರಿಯಲ್ಲಿ ನಿರ್ಮಿಸಿದ ಪಶು ಚಿಕಿತ್ಸಾಲಯವು ಉದ್ಘಾಟನೆ ಪೂರ್ವದಲ್ಲಿಯೇ ಬಿರುಕು ಬಿಟ್ಟಿದೆ. ನೆಲಕ್ಕೆ ಹಾಕಿದ ಟೈಲ್ಸ್  ಕೀಳುತ್ತಿವೆ ಎಂದು ಕಿಡಿಕಾರಿದರು. ತಹಶೀಲ್ದಾರ್‌ ಬಸವರಾಜ ಮೆಳವಂಕಿ ಮಾತನಾಡಿ, ಮಳೆ ಹಾನಿಯಿಂದ ಒಟ್ಟು 3 ಸಾವಿರ 2 ನೂರಾ 14 ಮನೆ ಹಾನಿಗೊಂಡಿದ್ದು, ಇದರಲ್ಲಿ 2 ಸಾವಿರ 8 ನೂರಾ 12 ಮನೆ ಹಾನಿಗೊಳಗಾದವರಿಗೆ ಜಿಪಿಎಸ್‌ ಮಾಡಲಾಗಿದೆ.

ಇನ್ನೂ 402 ಮನೆ ಮಾಲೀಕರು ನೀಡಿರುವ ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿ ದೋಷ ಇರುವುದರಿಂದ ಜಿಪಿಎಸ್‌ ಮಾಡಲಾಗಿಲ್ಲ. ಇನ್ನೂ 316 ಮನೆ ಬಿದ್ದವರು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ಇವರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಪಶು ಇಲಾಖೆ ಅ ಧಿಕಾರಿ ಡಾ| ಮುಲ್ಕಿ ಪಾಟೀಲ ತಮ್ಮ ಇಲಾಖೆ ವರದಿಯನ್ನು ಮಂಡಿಸುತ್ತಿರುವಾಗ ಪಶುಭಾಗ್ಯ ಯೋಜನೆಯಡಿಯಲ್ಲಿ ನಮಗೂ ಸಹ 5 ಫಲಾನುಭವಿಗಳನ್ನು ಆಯ್ಕೆ ಮಾಡಲು ಹಕ್ಕು ನೀಡಿ ಎಂದು ಕೇಳಿದಾಗ ಇದಕ್ಕೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅವರ ಗಮನಕ್ಕೆ ತಿಳಿಸುವುದಾಗಿ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಮ್ಮ ಇಲಾಖೆ ವರದಿ ಮಂಡಿಸುತ್ತಿರುವಾಗ ಅಧ್ಯಕ್ಷೆ ರಾಧಿಕಾ ಮೈಸೂರ ಮಧ್ಯ ಪ್ರವೇಶಿಸಿ ತರ್ಲಘಟ್ಟ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಮಕ್ಕಳ ಮೇಲೆ ಹಲ್ಲೆ ಮಾಡಿದವರಾರು ಎಂದು ಪ್ರಶ್ನಿಸಿದಾಗ ತಬ್ಬಿಬ್ಬುಗೊಂಡ ಅಧಿಕಾರಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರಿಂದ ಸದಸ್ಯರು ಆಕ್ರೋಶಗೊಂಡರು. ಶಿಕ್ಷಣ ಇಲಾಖೆ ಹಾಗೂ ಲೋಕೊಪಯೋಗಿ ಇಲಾಖೆ ಜಿಲ್ಲಾ ಪಂಚಾಯತಿ ಅ ಧಿಕಾರಿಗಳು ಮಳೆಯಿಂದ ಹಾನಿ ಆಗಿರುವುದರ ಬಗ್ಗೆ ವಿವರಿಸಿದರು. ತಾಪಂ ಉಪಾಧ್ಯಕ್ಷೆ ಕುಸುಮವ್ವ ಕಲ್ಲಣ್ಣವರ, ತಾಪಂ ಇಒ ಎಮ್‌.ಎಸ್‌. ಮೇಟಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next