ಕಲಾದಗಿ: ಕೃಷ್ಣಾ ಭಾಗ್ಯ ಜಲ ನಿಗಮ ಹೇರಕಲ್ ದಕ್ಷಿಣ ಏತ ನೀರಾವರಿ ಯೋಜನೆಯಲ್ಲಿ ಕಳಸಕೊಪ್ಪ ಕೆರೆ ಸೇರಿದಂತೆ ಬಾದಾಮಿ ತಾಲೂಕಿನ ಹಲವು ಕೆರೆಗೆ ನೀರು ತುಂಬಿಸುವ ಉದ್ದೇಶಕ್ಕಾಗಿ ಭೂಮಿಯ ಅಲ್ಪಭಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಇಡೀ ಭೂಮಿಗೆ ಭೂಸ್ವಾಧೀನ ಪ್ರಕ್ರಿಯೆ ಎಂದು ರೈತರ ಪಹಣಿ ಪತ್ರದಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗೋವಿಂದಕೊಪ್ಪ ಗ್ರಾಮಸ್ಥರು ನೀರೆತ್ತುವ ಮುಖ್ಯ ಸ್ಥಾವರದ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಗ್ಗೆ ಜಾಕ್‌ವೆಲ್ನಿಂದ ಕೆರೆಗೆ ನೀರೆತ್ತಲು ಪ್ರಾರಂಭ ಮಾಡಲಿದ್ದಾರೆ ಎಂದು ಭಾವಿಸಿ ಜಾಕ್ವೆಲ್ ಪಂಪ್ ಹೌಸ್ ಎದುರು ಗೋವಿಂದಕೊಪ್ಪ ಗ್ರಾಮದ 50ಕ್ಕೂ ಅಧಿಕ ರೈತರು ಜಮಾಯಿಸಿದರು. ಕೆರೆ ತುಂಬಿಸುವ ಯೋಜನೆಗೆ ಗ್ರಾಮದ ನೂರಾರು ರೈತರ ಭೂಮಿ ಸ್ವಾಧಿಧೀನಮಾಡಿಕೊಂಡು ಪೈಪ್‌ಲೈನ್ ಹಾಯಿಸಲಾಗಿದೆ. ರೈತನ 10 ಎಕರೆ ಭೂಮಿಯಲ್ಲಿ 1 ಎಕರೆ, ಅರ್ಧ ಎಕರೆ, 20 ಗುಂಟೆ, 10 ಗುಂಟೆ ಪೈಪ್‌ಲೈನ್ ಮಾರ್ಗಕ್ಕೆ ಭೂ ಬಳಕೆ ಸ್ವಾಧೀನಗೊಂಡರೆ ಇಡೀ 10 ಎಕರೆ ಭೂಮಿಗೆ ಸರಕಾರದ ಭೂಸ್ವಾಧೀನ ಎಂದು ಉತಾರ್‌ನಲ್ಲಿ ನಮೂದಿಸಲಾಗಿದೆ. ಇದರಿಂದ ರೈತರಿಗೆ ಸರಕಾರ ಸಹಾಯ ಸಬ್ಸಿಡಿ, ಬ್ಯಾಂಕ್ ಸಾಲ ಸಿಗುತ್ತಿಲ್ಲ ಎಂದು ಕೃಷ್ಣಾ ಮೇಲ್ದಂಡೆ ಯೋಜನಾ ಬಾಗಲಕೋಟೆ ನವನಗರ ಹೆಚ್ಚುವರಿ ವಿಶೇಷ ಭೂಸ್ವಾಧೀನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷವೂ ಇದೇ ತಿಂಗಳಲ್ಲಿ ಕಳಸಕೊಪ್ಪ ಕೆರೆಗೆ ನೀರು ತುಂಬಿಸಲು ಚಾಲನೆ ನೀಡಲು ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಹನಮಂತ್ ಆರ್. ನಿರಾಣಿಯವರ ಮುಂದೆಯೂ ಈ ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳ ಶೀಘ್ರ ಸಮಸ್ಯೆ ಇತ್ಯರ್ಥ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಆ ವೇಳೆ ಅಧಿಕಾರಿಗಳು ಸರಿಪಡಿಸುವುದಾಗಿ ಭರವಸೆ ನೀಡಿ ವರ್ಷ ಕಳೆದರೂ ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಸಮಸ್ಯೆ ಹೇಳಿಕೊಳ್ಳುತ್ತಿದ್ದರೂ ಅಧಿಕಾರಿಗಳು ಸರಿಪಡಿಸುತ್ತಿಲ್ಲ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡರು.
ಪ್ರತಿಭಟನೆ ಸುದ್ದಿ ತಿಳಿದ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಅಶೋಕ ಚವಾಣ್ ಸ್ಥಳದಲ್ಲಿದ್ದು, ರೈತರ ಸಮಸ್ಯೆ ಆಲಿಸಿ ರೈತರೊಂದಿಗೆ ಮಾತನಾಡಿದರು. ಅನ್ಯಾಯ ಸರಿಪಡಿಸದಿದ್ದಲ್ಲಿ ಬಾಗಲಕೋಟೆಯ ಕೆಬಿಜೆಎನ್ ಅಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವಣ್ಣಾ ವಾಘ, ಹಸನಅಹದ ರೋಣ, ಅಲ್ಲಾಭಕ್ಷ ರೋಣ, ಮುತ್ತಪ್ಪ ಬೀಡಕಿ, ವಿಠಲದೇಶಮುಖ, ಅಬ್ದುಲ್ಖಾದರ ತಾಂಬೊಳೆ, ಮುನ್ನಾ ರೋಣ, ಬಸಪ್ಪ ಬೀಡಕಿ ಮುಂತಾದವರಿದ್ದರು.