ಮೊಳಕಾಲ್ಮೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯ ಸೌಲಭ್ಯ ಕಲ್ಪಿಸುತ್ತಿಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೂ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ರಾಘವೇಂದ್ರ, ಪಟ್ಟಣದಲ್ಲಿರುವ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರ ಸಣ್ಣಪುಟ್ಟ ಕಾಯಿಲೆಗಳಿಗೂ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ದೂರದ ಬಳ್ಳಾರಿಯ ವಿಮ್ಸ್‌ಗೆ ಕಳುಹಿಸುತ್ತಿರುವುದರಿಂದ ಬಹುತೇಕರು ಮಾರ್ಗ ಮಧ್ಯದಲ್ಲಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ಕಲ್ಪಿಸಬೇಕಾಗಿದೆ. ತುರ್ತು ಚಿಕಿತ್ಸಾ ಸೌಲಭ್ಯದ ಕೊರತೆ ನಿವಾರಿಸಬೇಕು ಎಂದು ಒತ್ತಾಯಿಸಿದರು.
ಆ್ಯಂಬುಲೆನ್ಸ್‌ನಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲದ ಕಾರಣ ಸಾಕಷ್ಟು ರೋಗಿಗಳು ಮಾರ್ಗ ಮಧ್ಯದಲ್ಲಿಯೇ ಅಸುನೀಗಿದ್ದಾರೆ. ಹಾಗಾಗಿ ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಸಾರ್ವಜನಿಕರ ಚಿಕಿತ್ಸೆಗಾಗಿ ಉನ್ನತ ಮಟ್ಟದ ಸ್ಕ್ಯಾನಿಂಗ್, ಇಸಿಜಿ, ಐಸಿಯು ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಮುಂದಿನ 15 ದಿನಗಳಲ್ಲಿ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಬಳ್ಳಾರಿಗೆ ಕಳುಹಿಸದೆ ಈ ಆಸ್ಪತ್ರೆಯಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಮೊಳಕಾಲ್ಮೂರು ಬಂದ್‌ನೊಂದಿಗೆ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಯುವ ಮುಖಂಡ ಸಂತೋಷ್ ಮಾತನಾಡಿ, ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ನೀಡದ ಕಾರಣ ಕಳೆದೆರಡು ದಿನದಲ್ಲಿ ಆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸೂಕ್ತ ಚಿಕಿತ್ಸೆ ಸಿಗದೆ ಬಳ್ಳಾರಿಗೆ ಹೋಗುವ ಮಾರ್ಗದಲ್ಲಿಯೇ ಮೃತಪಟ್ಟಿರುವುದು ಬಹುತೇಕರಿಗೆ ನೋವುಂಟು ಮಾಡಿದೆ. ಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಇಲಾಖೆ ಸಚಿವರಾಗಿರುವ ಬಿ. ಶ್ರೀರಾಮುಲುರವರು ತಾವು ರಾಷ್ಟ್ರ ಮತ್ತು ರಾಷ್ಟ್ರ ಮಟ್ಟದ ನಾಯಕರೆಂದು ಬಿಂಬಿಸಿಕೊಂಡು ಕ್ಷೇತ್ರದ ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲರಾಗಿದ್ದಾರೆ. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾರೆಂಬ ನಂಬಿಕೆ ಹುಸಿಯಾಗಿದೆ. ಆಸ್ಪತ್ರೆಗೆ ಕೂಡಲೇ ವೈದ್ಯರು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಯುವ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲಲು ಆಗದು ಎಂದು ಗುಡುಗಿದರು.
ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಪದ್ಮಾವತಿ, ಡಾ| ಅಭಿನವ್ ಹಾಗೂ ಸಿಬ್ಬಂದಿಯೊಂದಿಗೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಎಂ. ಬಸವರಾಜ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಈ ಆಸ್ಪತ್ರೆಯ ಸಮಸ್ಯೆಗಳನ್ನು ಮೇಲಾ ಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತಂದು ಸಮಸ್ಯೆಗಳನ್ನುಪರಿಹರಿಸಲಾಗುವುದೆಂದು ಭರವಸೆ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಮಂಜುನಾಥ, ಸಾಗರ್, ವಸಂತ, ಗೌತಮ್, ನೂರ್ ಮಹಮ್ಮದ್, ಹರೀಶ್, ಮಲ್ಲಿಕಾರ್ಜುನ, ಪೃಥ್ವಿರಾಜ್, ಶ್ರೀಕಾಂತ ರೆಡ್ಡಿ, ಸೂರಿ, ಗಂಗಾಧರ, ಬುಜ್ಜಿ, ಪ್ರಶಾಂತ, ತಿಮ್ಮರಾಜ್, ನಾಗರಾಜ್, ತಿಪ್ಪೇಸ್ವಾಮಿ, ತಿಪ್ಪೇಶ್, ಆಕಾಶ್, ಕಿರಣ್‌ಕುಮಾರ್, ಅರುಣ್ ಕುಮಾರ್, ಅಭಿಷೇಕ್, ವಿನೋದ್‌ಕುಮಾರ್, ಪ್ರೇಮ್ ಕುಮಾರ್, ಅನಿಲ್, ಅಬ್ದುಲ್ಲಾ, ರಬ್ಬು, ಹನೀಫ್ ಮತ್ತಿತರರು ಭಾಗವಹಿಸಿದ್ದರು.