ಮಳವಳ್ಳಿ: ಭೀಮಾ ಜಲಾಶಯದಿಂದ ನಂದಿಪುರ ಕೆರೆ ಹಾಗೂ ಇತರೆ 24 ಕೆರೆ ಕಟ್ಟೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ರೈತಸಂಘ ಸೇರಿ ಹಲವು ರೈತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯೋಜನೆ ವಿಳಂಬ: ಭೀಮಾ ಜಲಾಶಯದ ಏತ ನೀರಾವರಿ ಕಾಮಗಾರಿ ಸ್ಥಿತಿ-ಗತಿ, ಕೆರೆ-ಕಟ್ಟೆಗಳ ವಾಸ್ತವ ಪರಿಸ್ಥಿತಿ ವೀಕ್ಷಣೆ ನಡೆಸಿ ರೈತರ ಅಭಿಪ್ರಾಯ ಪಡೆದ ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್, ಈ ಯೋಜನೆ 2013ರಲ್ಲಿ ಕಾರ್ಯಾರಂಭವಾದರೂ ಅಧಿಕಾರಿಗಳು, ಶಾಸಕರ ಬೇಜವಾಬ್ದಾರಿತನದಿಂದ ವಿಳಂಬವಾಗಿದೆ. ಯೋಜನೆಯನ್ನು ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ರೈತರನ್ನು ವಂಚಿಸಿವೆ. ಒಂದೆರಡು ರೈತರು ಕಾಮಗಾರಿಗೆ ಅಡ್ಡಿ ಪಡಿಸಿದರೆಂಬ ನೆಪ ಮುಂದಿಟ್ಟುಕೊಂಡು ರಾಜಕೀಯ ಮೇಲಾಟ ನಡೆಸಿವೆ ಎಂದು ಆರೋಪಿಸಿದರು.
ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ವಹಿಸಬೇಕಿತ್ತು. ಅಧಿಕಾರಿಗಳು, ಶಾಸಕರು, ಗುತ್ತಿಗೆದಾರರು ನಿರ್ಲಕ್ಷಸಿದ್ದಾರೆ. ಇನ್ನೂ ಹಣವೂ ಇಲ್ಲ , ನೀರೂ ಇಲ್ಲ. ಕೊನೆಗೆ ಭೂಮಿಯೂ ನಮಗಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಅನುಕೂಲವಾಗಿಲ್ಲ: ಈ ಯೋಜನೆಯಲ್ಲಿ ಹೊನಗಳ್ಳಿ ಕೆರೆ 583 ಹೆಕ್ಟೇರ್, ನಂದಿಪುರ ಕೆರೆ 48.33 ಹೆಕ್ಟೇರ್ ಅಚ್ಚುಕಟ್ಟು ಹೊಂದಿದೆ. ಜೊತೆಗೆ 24 ಕೆರೆ-ಕಟ್ಟೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಲು ಶಿಂಷಾ ನದಿಯಿಂದಲೂ 11.47 ಕ್ಯೂಸೆಕ್‌ನೀರು ಹರಿಸಲು ಯೋಜಿಸಲಾಗಿದೆ. ಇದಕ್ಕಾಗಿ 225 ಕೆ.ವಿ.ಸಾಮರ್ಥ್ಯದ 3 ಪಂಪ್ ಅಳವಡಿಸಲಾಗಿದೆ. ಏರು ಕೊಳವೆ ಮೇಲ್ಮಟ್ಟದ ತೊಟ್ಟಿಯಿಂದ ಮತ್ತು ತೆರೆದ ಕಾಲುವೆಗಳಿಂದ 11ಕಿ.ಮೀ ದೂರದ ವ್ಯಾಪ್ತಿಯ ಜಮೀನುಗಳಿಗೆ ಮುಂಗಾರಿನಲ್ಲಿ 123 ದಿನ ನೀರು ಹರಿಸುವ ಉದ್ದೇಶಕ್ಕಾಗಿ 2013ರಲ್ಲಿ ತಾಂತ್ರಿಕ ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ 10.15 ಕೋಟಿ ರೂ. ಹಣ ನೀಡಿದ್ದರೂ ರೈತರಿಗೆ
ಅನುಕೂಲವಾಗಿಲ್ಲ ಎಂದು ತಿಳಿಸಿದರು.
ತಮಿಳುನಾಡಿಗೆ ನೀರು: ಶಿಂಷಾ, ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ತಮಿಳುನಾಡಿಗೆ ಹರಿಯುತ್ತಿದ್ದರೂ ಹಲಗೂರು ಹೋಬಳಿ ಹೊನಗಳ್ಳಿ ಕೆರೆ, ನಿಟ್ಟೂರು, ಹಲಗೂರು. ಬ್ಯಾಡರಹಳ್ಳಿ ಮುಂತಾದ ಕೆರೆ-ಕಟ್ಟೆ ನೀರಿಲ್ಲದೆ ಒಣ ಗುತ್ತಿವೆ. ಹಲಗೂರು ಹೋಬಳಿ ಭೀಮಾ ಜಲಾಶಯ ಗಾಣಾಳು, ನಂಜಾಪುರ, ನಿಟ್ಟೂರು ಏತ ನೀರಾವರಿಗಳನ್ನು ಶೀಘ್ರ ಹಾಗೂ ಸಮರ್ಪಕ ಜಾರಿಗೊಳಿಸದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಯೋಗದಲ್ಲಿ ಮುಖಂಡರಾದ ಮಹದೇವು, ನಾಗೇಶ್, ಗೋಪಾಲ್, ಮಹೇಶ್, ಬಸವೇಗೌಡ, ಜಯಶಂಕರ್, ರಾಜು, ರವಿ, ಮೋಹನ್, ಬಸವರಾಜ್, ಮರಿದೇವರು ಇದ್ದರು.