ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಸಾವಿರ ಆಂಗ್ಲ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ಈ ಯೋಜನೆ ಕೈ ಬಿಡಬೇಕು ಎಂದು ಸಿಪಿಐಎಂ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಕಾರ್ಯದರ್ಶಿ ಎಸ್.ಜಗನ್ನಾಥ ಮಾತನಾಡಿ, ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ಸಾವಿರ ಆಂಗ್ಲ ಶಾಲೆಗಳನ್ನು ಪ್ರಾರಂಭಿಸುವುದರಿಂದ ಮಾತೃ ಭಾಷೆ ಕನ್ನಡಕ್ಕೆ ಹೊಡೆತ ಬೀಳುತ್ತದೆ. ತಮಿಳುನಾಡು ಸೇರಿ ಅನೇಕ ರಾಜ್ಯಗಳಲ್ಲಿ ಮಾತೃ ಭಾಷೆಯಲ್ಲಿಯೇ ಶಿಕ್ಷಣವನ್ನು ನೀಡುತ್ತಿದ್ದಾರೆ. ಇದರಿಂದ ಆಯಾ ರಾಜ್ಯದ ಪ್ರಾದೇಶಿಕ ಭಾಷೆಗಳು ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಉದ್ದೇಶಿಸಿರುವ ಇಂಗ್ಲೀಷ್ ಶಾಲೆಗಳನ್ನು ಕೈಬಿಟ್ಟು ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಕನ್ನಡದಲಿಯೇ ಪ್ರಾಥಮಿಕ ಶಿಕ್ಷಣವನ್ನು ನೀಡಿ, ಕನ್ನಡ ನಾಡು-ನುಡಿ, ಕನ್ನಡ ಜಲ,ಸಂಸ್ಕೃತಿ ಭಾಷೆಯನ್ನು ಉಳಿಸಬೇಕಾಗಿದೆ ಎಂದು ಆಗ್ರಹಿಸಿದರು.
ದೇವದಾಸಿ ವಿಮೋಚನಾ ಸಂಘದ ರಾಜ್ಯಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ಜಾಗತೀಕರಣ,ಉದಾರೀಕರಣ, ಖಾಸಗೀಕರಣ ನೀತಿಗಳು ಎಲ್ಲೆಲ್ಲೂ ಆಂಗ್ಲ ಭಾಷೆ ಅನಿವಾರ್ಯವೆಂಬ ಹುಸಿ ಭಾವನೆಗಳನ್ನು ಹುಟ್ಟು ಹಾಕಿರುವುದರಿಂದ ಮಧ್ಯಮ ಮತ್ತು ಬಡ ಜನತೆಗಳಿಗೆ ಇದು ಅನಿವಾರ್ಯವೆನಿಸಿದೆ. ಆದ್ದರಿಂದ ಇಂತಹ ನೀತಿಗಳನ್ನು ಜಾರಿಗೆ ತರದೆ ಮೂಲ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಹು ರಾಷ್ಟ್ರೀಯ ಕಂಪನಿಗಳು ಕನ್ನಡ ರಾಜ್ಯದಲ್ಲಿ ತಮ್ಮ ಆಡಳಿತವನ್ನು ಕನ್ನಡದಲ್ಲಿಯೇ ಮಾಡಬೇಕು. ತಮಿಳು ಇತರೆ ರಾಜ್ಯಗಳಲ್ಲಿ ಈಗಾಗಲೇ ಆಯಾ ಭಾಷೆಯಲ್ಲಿ ಆಡಳಿತ, ಬ್ಯಾಂಕ್ ಹಾಗೂ ಕಚೇರಿ ವಹಿವಾಟುಗಳು ನಡೆಯುತ್ತಿವೆ. ಅದರಂತೆ ಕರ್ನಾಟಕದಲ್ಲೂ ಕೂಡ ಎಲ್ಲ ರಾಜ್ಯ ಸರ್ಕಾರಿ ಮತ್ತು ಕೇಂದ್ರ ಸರ್ಕಾರ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ನಂತರ ತಹಶೀಲ್ದಾರ್ ಕೆ.ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಪಿ.ಚಾಂದ ಬೀ, ಎಚ್.ಮಂಜುನಾಥ್, ಗಾಳೆಪ್ಪ, ಜಿ.ಸರೋಜಮ್ಮ, ಎಂ.ಅಂಜಿನಮ್ಮ, ಡಿ.ಹನುಮಂತಪ್ಪ, ಜಿ.ಆರ್.ಮಲ್ಲಮ್ಮ, ಬಿ.ಮೈಲಮ್ಮ, ಎಂ.ಆನಂದ ಇನ್ನಿತರರಿದ್ದರು.