Advertisement

ಇಂದು ಕೇರಳದಲ್ಲಿ ಹರತಾಳ

12:30 AM Jan 03, 2019 | Team Udayavani |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ಕೇರಳದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಮಹಿಳೆಯರ ಪ್ರವೇಶ ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಗುರು ವಾರ ಬೆಳಗ್ಗಿನಿಂದ ಹರತಾಳಕ್ಕೆ ಕರೆ ನೀಡಿದೆ. ಇದರ ಜತೆಗೆ ಬಿಜೆಪಿ ಕೂಡ 2 ದಿನಗಳ ಕಾಲ ಪ್ರತಿಭಟನೆ ನಡೆಸಲು ಮುಂದಾಗಿದೆ. ಆದರೆ, ವ್ಯಾಪಾರಿಗಳ ಒಕ್ಕೂಟ ಹರತಾಳಕ್ಕೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದೆ. ಕಳೆದ ತಿಂಗಳು ಸಭೆ ಸೇರಿದ್ದ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪಾಸನಾ ಸಮಿತಿ 2019ರಲ್ಲಿ ಯಾವುದೇ ರೀತಿಯ ಬಂದ್‌, ಹರತಾಳಕ್ಕೆ ಬೆಂಬಲ ನೀಡದೆ ಇರಲು ನಿರ್ಧರಿಸಿತ್ತು. 

Advertisement

ಕಾಸರಗೋಡು ಸ್ತಬ್ಧ: ತ್ರಿಶ್ಶೂರ್‌ನ ಕೊಡುಂ ಗಲ್ಲೂರ್‌, ಮಾಲಾ ಮತ್ತು ಇತರ ಸ್ಥಳಗಳಲ್ಲಿ ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ತಿರುವನಂತಪುರ, ಕೊಲ್ಲಂ, ಕಾಸರಗೋಡು ಸೇರಿದಂತೆ 14 ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಯ್ಯಪ್ಪ ಭಕ್ತರು ಬಲವಂತವಾಗಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಕಾಸರ ಗೋಡು ಸಂಪೂರ್ಣ ಬಂದ್‌ ಆಗಿದೆ.

ಸಿಎಂ ವಿರುದ್ಧ ಆಕ್ರೋಶ: ರಹಸ್ಯವಾಗಿ ಇಬ್ಬರು ಮಹಿಳೆಯರನ್ನು ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ. ಈ ಕ್ರಮದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ತಲೆ ಗಟ್ಟಿ ಇದೆ ಎಂಬ ನಿಲುವು ಪ್ರದರ್ಶಿಸಿದಂತಾಗಿದೆ ಎಂದಿದ್ದಾರೆ. ಡಿ.24ರಂದು ಇಬ್ಬರು ಮಹಿಳೆಯರು ತಮ್ಮ ಮೊದಲ ಪ್ರಯತ್ನ ಕೈಗೂಡದೇ ಇದ್ದ ಬಳಿಕ ನಾಪತ್ತೆಯಾಗಿದ್ದರು. ಅವರಿಬ್ಬರಿಗೆ ಪೊಲೀಸರೇ ರಕ್ಷಣೆ ನೀಡಿದ್ದರು. ಗುರುವಾರ ಕೇರಳಾದ್ಯಂತ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ ಚೆನ್ನಿತ್ತಲ. 

ಕೇರಳ ಬಿಜೆಪಿ ಘಟಕ ನಾಯಕ ಎಂ. ಟಿ.ರಮೇಶ್‌ ಮಾತನಾಡಿ, ಸಿಪಿಎಂನ ಅಜೆಂಡಾ ಏನಿದೆ ಎಂಬ ವಿಚಾರ ಈಗ ಸ್ಪಷ್ಟವಾಗಿದೆ. ಮುಂದಿನ 2 ದಿನಗಳ ಕಾಲ ಅಯ್ಯಪ್ಪ ನಾಮ ಜಪವನ್ನು ಪಕ್ಷ ಬೆಂಬಲಿಸಲಿದೆ ಎಂದಿದ್ದಾರೆ. ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೆ, ಕೇರಳ ಸರ್ಕಾರ ಅಯ್ಯಪ್ಪನ ಕೋಪಕ್ಕೆ ಬಲಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಎಡ ಪಂಥೀಯ ನಾಯಕರು ಮತ್ತು ಅವರ ಮುಂದಿನ ತಲೆಮಾರು ಅಯ್ಯಪ್ಪನ ಕೋಪಕ್ಕೆ ಬಲಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ತೃಪ್ತಿ ದೇಸಾಯಿ ಶ್ಲಾಘನೆ: ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರೂ ಇಬ್ಬರು ಮಹಿಳೆಯರ ದೇಗುಲ ಪ್ರವೇಶವನ್ನು ಶ್ಲಾಘಿಸಿದ್ದಾರೆ. ಇದು ಸಮಾನತೆಗೆ ಸಂದ ಜಯ. ಈ ಬೆಳವಣಿಗೆ ಹೋರಾಟಕ್ಕೆ ಸಂದ ಜಯ ಮತ್ತು ಹೊಸ ವರ್ಷದಲ್ಲಿ ಮಹಿಳೆಯರ ಪಾಲಿಗೆ ಉತ್ತಮ ಬೆಳವಣಿಗೆ ಎಂದಿದ್ದಾರೆ. ಜತೆಗೆ, ಜ.20ರ ವರೆಗೆ ಶಬರಿ ಮಲೆಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

Advertisement

ನಮ್ಮನ್ನು ಯಾರೂ ತಡೆಯಲಿಲ್ಲ: ದೇಗುಲ ಪ್ರವೇಶದ ಬಗ್ಗೆ ಮಾತನಾಡಿದ ಕನಕ ದುರ್ಗಾ, ಮಧ್ಯರಾತ್ರಿಯೇ ನಾವಿಬ್ಬರೂ ಪಂಪಾ ನದಿ ತೀರಕ್ಕೆ ಬಂದಿದ್ದೆವು. ಬಳಿಕ ಠಾಣೆಗೆ ತೆರಳಿದೆವು. ಪೊಲೀಸರ ರಕ್ಷಣೆ ಇಲ್ಲದೆ ದೇಗುಲದತ್ತ ನಡೆದುಕೊಂಡು ಹೊÃ  ‌ಟೆವು. 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ಕೊಂಡು ಸನ್ನಿಧಾನಂನತ್ತ ತೆರಳಿದೆವು. ಆಗ ಕೇವಲ ಭಕ್ತರು ಮಾತ್ರ ಇದ್ದರು. ನಮ್ಮನ್ನು ಯಾರೂ ತಡೆದಿಲ್ಲ ಎಂದು ಹೇಳಿ ದ್ದಾರೆ. ಇದೇ ವೇಳೆ ನ್ಯಾಯವಾದಿ ಬಿಂದು ಮಾತ ನಾಡಿ, 18 ಮೆಟ್ಟಿಲುಗಳನ್ನೇರದೆ ದೇಗುಲ ಪ್ರವೇಶ ಮಾಡಿದ್ದಾಗಿ ತಿಳಿಸಿದ್ದಾರೆ. 

ಭದ್ರತೆ ನೀಡಿದ್ದು ಆರು ಪೊಲೀಸರು
ಪಟ್ಟಣಂತಿಟ್ಟ ಜಿಲ್ಲೆಯ ಆಯ್ದ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾತ್ರ ಮಹಿಳೆಯರ ಭೇಟಿಯ ಬಗ್ಗೆ ಅರಿವು ಇತ್ತು. ಇಬ್ಬರು ರಹಸ್ಯವಾಗಿ ಪಂಪಾ ನದಿ ತೀರಕ್ಕೆ ಆಗಮಿಸಿದ್ದರು. ಅವರಿಗೆ ಆರು ಮಂದಿ ಪೊಲೀಸರು ಭದ್ರತೆ ಒದಗಿಸಿದ್ದರು. ಪಂಪಾ ನದಿ ತೀರಕ್ಕೆ ಅವರಿಬ್ಬರು ಮಧ್ಯರಾತ್ರಿ 1.30ಕ್ಕೆ ಆಗಮಿಸಿದ್ದರು. ಸಾದಾ ಉಡುಪಿನಲ್ಲಿದ್ದ ಪೊಲೀಸರು ಅವರಿಬ್ಬರಿಗೆ ಭದ್ರತೆ ನೀಡಿದ್ದರು. ನಡೆದುಕೊಂಡು ದೇಗುಲದ ಆವರಣವನ್ನು ಬೆಳಗ್ಗೆ 3.30ಕ್ಕೆ ಪ್ರವೇಶಿಸಿ, ಸನ್ನಿಧಾನಂ ಅನ್ನು 3.53ಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಮಾಡಿದರು. ಬಳಿಕ ಬೆಳಗ್ಗೆ 5.30ಕ್ಕೆ ಪಂಪಾಕ್ಕೆ ಆಗಮಿಸಿದರು. ನಂತರ ಅವರನ್ನು ತ್ರಿಶ್ಶೂರ್‌ಗೆ ಕರೆದೊಯ್ಯಲಾಗಿದೆ.

ಶುದ್ಧಗೊಳಿಸಲು ದೇಗುಲ ಬಂದ್‌
ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದರಿಂದ ಬೆಳಗ್ಗೆ 10.30ರಿಂದ ಎರಡು ಗಂಟೆಗಳ ಕಾಲ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದರ ಶುದ್ಧೀಕರಣ ಪ್ರಕ್ರಿಯೆ ನಡೆಸಿ, ಬಳಿಕ ಬಾಗಿಲನ್ನು ಮತ್ತೆ ತೆರೆಯಲಾಯಿತು. ಈ ಬೆಳವಣಿಗೆ ಅಯ್ಯಪ್ಪ ದೇಗುಲದ ಆಡಳಿತ ನಿರ್ವಹಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯನ್ನು ಸಿಟ್ಟಿಗೆಬ್ಬಿಸಿದೆ. ತಂತ್ರಿ, ಮುಖ್ಯ ಅರ್ಚಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಪ್ರತಿಯೊಬ್ಬ ಮಹಿಳೆಗೂ ಪೂಜಿಸುವ ಹಕ್ಕು ಇದೆ. ಹೀಗಾಗಿ ಅವರಿಗೆ ದೇಗುಲಕ್ಕೆ ತೆರಳಲು ಕೇರಳ ಸರ್ಕಾರ ಅಗತ್ಯ ಭದ್ರತೆ ಒದಗಿಸಿದೆ.
ಬೃಂದಾ ಕಾರಟ್‌,  ಸಿಪಿಎಂ ನಾಯಕಿ

ಇಬ್ಬರು ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದು ನನಗೆ ಸಂತೋಷವಾಗಿದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು. 
ಉದಿತ್‌ ರಾಜ್‌, ಬಿಜೆಪಿ ಸಂಸದ

ದೇಗುಲವನ್ನು ಮುಚ್ಚಿದ ಮುಖ್ಯ ತಂತ್ರಿ ಕಂದರಾರು ರಾಜೀವರಾರು ಸುಪ್ರೀಂಕೋರ್ಟ್‌ ತೀರ್ಪು ಉಲ್ಲಂ ಸಿದ್ದಾರೆ. ಸುಪ್ರೀಂಕೋರ್ಟ್‌ ಮತ್ತು ದೇವಸ್ವಂ ಬೋರ್ಡ್‌ ಅವರ ನಡವಳಿಕೆಯನ್ನು ಪರಿಶೀಲಿಸಬೇಕು.
ಕೊಡಿಯೇರಿ ಬಾಲಕೃಷ್ಣನ್‌, 
 ಮಾಜಿ ಸಚಿವ

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಧುನಿಕ ಔರಂಗಜೇಬನಂತೆ ವರ್ತಿಸುತ್ತಿದ್ದಾರೆ. ಮಹಿಳೆಯರ ಪ್ರವೇಶದಿಂದಾಗಿ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಸಿಪಿಎಂ ನಾಯಕರು ಮತ್ತು ಅವರ ಮುಂದಿನ ತಲೆಮಾರು ಈ ಬೆಳವಣಿಗೆಗೆ ಭಾರಿ ಬೆಲೆ ತೆರಬೇಕಾಗುತ್ತದೆ.
ಪಿ.ಎಸ್‌.ಶ್ರೀಧರನ್‌ ಪಿಳ್ಳೆ,  ಕೇರಳ ಬಿಜೆಪಿ ಅಧ್ಯಕ್ಷ

ಮಹಿಳೆಯರು ಪ್ರವೇಶ ನೀಡಿ ವಾಪಸಾದ ಬೆನ್ನಲ್ಲೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕರು ಬುಧವಾರ ಶುದ್ಧೀಕರಣ ಪ್ರಕ್ರಿಯೆ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next