ಬೀದರ: ಬೀದರ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳಿಂದ ವಿವಿಧ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಉಂಟಾ ಗುತ್ತಿದ್ದರೂ ಕೂಡ ಅಧಿಕಾರಿಗಳು ಜೀವಗಳಿಗೆ ಬೆಲೆ ಕೊಡುತ್ತಿಲ್ಲ. ಅಧಿಕಾರಿಗಳು ಹಫ್ತಾ ಪಡೆಯಲು ಮಾತ್ರ ಸೀಮಿತರಾಗಿದ್ದಾರೆ ಎಂದು ಕೊಳಾರ, ನಿಜಾಮ್‌ಪುರ ಸೇರಿದಂತೆ ವಿವಿಧ ಗ್ರಾಮಸ್ಥರು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ಕೊಳಾರ ಕೈಗಾರಿಕಾ ಪ್ರದೇಶದ ವಾಣಿ ಆಗ್ರ್ಯಾನಿಕ್ಸ್ ಕಂಪನಿಯಲ್ಲಿ ಏರ್ಪಡಿಸಿದ್ದ ಪರಿಸರ ಪರಿಣಾಮಗಳ ಕುರಿತ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ವಿವಿಧ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದು.
ಅಮೃತರಾವ್ ನಾವದಗಿ ಕೊಳಾರ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವರ್ಷ ಔಷಧ ಹಾಗೂ ರಾಸಾಯನಿಕ ಕಾರ್ಖಾನೆಗಳು ಹೆಚ್ಚುತ್ತಿದ್ದು, ಸುತ್ತಲಿನ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಉಂಟಾ ಗುತ್ತಿವೆ. ವಿವಿಧ ಗ್ರಾಮಗಳಲ್ಲಿನ ಅಂತರ್ಜಲ ಹಾಳಾಗಿದೆ. ಮಳೆಗಾಲ ಬಂದರೆ ಸಾಕು ಕಲ್ಮಶ ಎಲ್ಲಾ ಕಡೆಗಳಲ್ಲಿ ಹರಿದಾಡುತ್ತಿದೆ. ಇಲ್ಲಿನ ಕಾರ್ಖಾನೆಗಳು ಸರ್ಕಾರದ ನಿಯಮ ಗಳಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಚಂದ್ರಶೇಖರ ಗೌಡಪನೊರ್ ಮಾತನಾಡಿ, ಅಧಿಕಾರಿಗಳು ಎಸಿ ವಾಹನದಲ್ಲಿ ಸಂಚರಿಸಿ ಕರ್ತವ್ಯ ನಿರ್ವಹಿಸಿದರೆ ಹೇಗೆ? ವಾಸ್ತವದಲ್ಲಿ ಯಾವ ಕಾರ್ಖಾನೆಗಳು ಯಾವ ಕಾನೂನು ಮೀರುತ್ತಿವೆ ಎಂದು ಯಾರು ಪರಿಶೀಲಿಸಬೇಕು ಎಂದು ಪ್ರಶ್ನಿಸಿದರು. ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕರ ಜೀವಗಳಿಗೆ ಕಾರ್ಖಾನೆಗಳ ಮಾಲೀಕರು ಬೆಲೆ ನೀಡುತ್ತಿಲ್ಲ. ಅಧಿಕಾರಿಗಳು ಕಂಪೆನಿಗಳ ಜೊತೆಗೆ ಶಾಮೀಲಾಗಿದ್ದಾರೆ. ಇಲ್ಲಿನ ಅವ್ಯವಸ್ಥೆಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವ ಅಧಿಕಾರಿಗಳೂ ಸ್ಪಂದಿಸಿಲ್ಲ. ಜನರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಈ ಮಧ್ಯೆ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ವಾಣಿ ಕಾರ್ಖಾನೆ ಕುರಿತು ಮಾತನಾಡಿ, ಈ ಕಾರ್ಖಾನೆಯಿಂದ ಪರಿಸರ ಸಮಸ್ಯೆ ಬಗ್ಗೆ ಅನಿಸಿಕೆ ತಿಳಿಸಿ ಹೊರತು ಇಲ್ಲಸಲ್ಲದ ಆರೋಪ ಮಾಡುವುದು ಸರಿ ಅಲ್ಲ. ಸರ್ಕಾರಿ ಅಧಿಕಾರಿಗಳು ಜನರ ಕೆಲಸಕ್ಕೆ ಇರುತ್ತಾರೆ. ನಿಮ್ಮ ಸಮಸ್ಯೆಗಳ ಕುರಿತು ಕಚೇರಿಗೆ ಬಂದು ಭೇಟಿ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ನಿವಾಸಿ ಶರಣಪ್ಪ ಮಾತನಾಡಿ, ಕೊಳಾರ ಕೈಗಾರಿಕಾ ಪ್ರದೇಶದ ಸುತ್ತಲ್ಲಿನ ಪ್ರದೇಶದಲ್ಲಿ ಉತ್ತಮ ಪರಿಸರ ಕಾಪಾಡುವಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದರೆ ಇಂದು ವಿವಿಧ ಗ್ರಾಮಗಳಲ್ಲಿ ಪರಿಸರ ಹಾನಿ ಉಂಟಾಗುತ್ತಿದ್ದಿಲ್ಲ ಎಂದರು.
ದಲಿತ ಸಂಘಟನೆಯ ರಾಜು ಕಾಂಬಳೆ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳು ತೆಲಂಗಾಣ ಭಾಗದ ಜನರಿಗೆ ಉಧ್ದೋಗ ನೀಡುತ್ತಿದ್ದಾರೆ. ಜಿಲ್ಲೆಯ ಜನರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿಲ್ಲ. ನಿಯಮ ಅನುಸಾರ ಕಾರ್ಖಾನೆಗಳನ್ನು ನಡೆಸುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವಾಣಿ ಆಗ್ರ್ಯಾನಿಕ್ಸ್ ಕಂಪನಿಯು ಹೆಚ್ಚು ಉತ್ಪಾದನೆ ಮಾಡಲು ಬಯಸಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದು, ಜನರ ಅನಿಸಿಕೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಪರಿಸರ ಇಲಾಖೆಯ ಅಧಿಕಾರಿ ಮಂಜಪ್ಪ ಮಾತನಾಡಿ, ಕೈಗಾರಿಕಾ ಪ್ರದೇಶದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.