ಕುಮಟಾ: ಐಆರ್‌ಬಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರು, ಕೃಷಿಕರು, ಪ್ರವಾಸಿಗರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಕ್ಷಣ ವಿವಿಧ ಕಾಮಗಾರಿಗಳನ್ನು ನಡೆಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಮಂಗಳವಾರ ಹಂದಿಗೋಣದ ಐಆರ್‌ಬಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮೊದಲಿನಿಂದಲೂ ಐಆರ್‌ಬಿ ನಡೆಸುತ್ತಿರುವ ಅವೃಜ್ಞಾನಿಕ ಕಾಮಗಾರಿಗಳಿಂದ ಜನರ ಜೀವ ಹಿಂಡಿದೆ. ಅನೇಕ ಜೀವಗಳು ಉರುಳಿವೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಸ್ವೇಚ್ಛಾಚಾರ ನಡೆಸಿದ್ದಾರೆ. ಚತುಷ್ಪಥ ಎನ್ನುವುದು ಯಮನೆಡೆ ಸಾಗುವ ಹಾದಿಯಂತಾಗಿದೆ. ಹೀಗಿದ್ದರೂ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ತಡೆ ಇಲ್ಲ. ಮಿರ್ಜಾನದ ಖೈರೆ ಕ್ರಾಸ್, ತಂಡ್ರಕುಳಿಯಲ್ಲಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಜನರು ಜೀವ ಕಳೆದುಕೊಂಡಿದ್ದಾರೆ. ದಿಕ್ಕುದಿಸೆ ಸಮರ್ಪಕವಾಗಿ ಗೋಚರಿಸಿದ ಕಾರಣ ಅನೇಕ ದ್ವಿಚಕ್ರ ಮತ್ತು ಭಾರಿ ವಾಹನಗಳು ಅಪಘಾತಕ್ಕೀಡಾಗಿ ಸಾಕಷ್ಟು ಸಾವು ನೋವು ಸಂಭವಿಸಿವೆ. ಇನ್ನೂ ಜನರ ಜೀವಕ್ಕೆ ಹಾನಿಯಾದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಐಆರ್‌ಬಿ ಅಧಿಕಾರಿಗಳ ವಿರುದ್ಧ ಮುಗಿಲು ಮುಟ್ಟುವ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ತಡೆಯಲು ಸಾಹಸ ಪಟ್ಟರು. ಒಂದು ವಾರದೊಳಗೆ ಭಟ್ಕಳದಿಂದ ಕಾರವಾರದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಹೊಂಡಗಳನ್ನು ಮುಚ್ಚಬೇಕು. ಚತುಷ್ಪಥ ಪೂರ್ತಿಗೊಳ್ಳದ ಹೊರತು ಟೋಲ್ ವಸೂಲಿ ಮಾಡಕೂಡದು. ಈಗಲೇ ಟೋಲ್ ವಸೂಲಿ ಮಾಡಿದರೆ ಅಂತಹ ಸ್ಥಳಗಳನ್ನು ಧ್ವಂಸಗೊಳಿಸುತ್ತೆವೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಸಿದರು.
ಧಾರೇಶ್ವರದಿಂದ ಬಡಗಣಿ ಟೋಲ್ ನಾಕಾವರೆಗೆ ಮಳೆಯ ನೀರು ಹರಿದು ಹೋಗಲು ಕಾಲುವೆ ನಿರ್ಮಿಸದಿರುವುದರಿಂದ ಕಳೆದ ಮೂರು ವರ್ಷಗಳಿಂದ ರೈತರು ಭತ್ತದ ಸಾಗವಳಿ ನಡೆಸಿಲ್ಲ. ಐಆರ್‌ಬಿಯವರು ರಸ್ತೆ ಇಕ್ಕೆಲಗಳಲ್ಲಿ ಕಾಲುವೆ ನಿರ್ಮಿಸಿಲ್ಲ. ಹೀಗಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಐಆರ್‌ಬಿ ವಿರುದ್ಧ ಹರಿಹಾಯ್ದರು.
ಅವೈಜ್ಞಾನಿಕ ಕಾಮಗಾರಿಯಿಂದ ನೂರಾರು ಸಮಸ್ಯೆಗಳು ಜನರನ್ನು ಕಾಡುತ್ತಿದೆ. ವಾಹನ ಸವಾರರು ರಸ್ತೆಯಲ್ಲಿ ಸುಗಮವಾಗಿ ಓಡಾಡಲು ಬಿದ್ದಿರುವ ಹೊಂಡಗಳನ್ನು ತುಂಬಬೇಕು. ರೈತರಿಗೆ ಕಾಮಗಾರಿ ನಡೆಸಿ ಕೃಷಿಗೆ ಅನುಕೂಲ ಮಾಡಿಕೊಡಬೇಕು. ಪ್ರವಾಸಿಗರು ಬಯಸಿದ ತಾಣಗಳಿಗೆ ತೆರಳಲು ಸುಗಮ ಮಾರ್ಗ ಕಲ್ಪಿಸಬೇಕು. ಏಳು ದಿನಗಳೊಳಗೆ ಎಲ್ಲ ಕಾಮಗಾರಿಗಳನ್ನು ನಡೆಸುತ್ತೆವೆ ಎಂದು ಲಿಖೀತವಾಗಿ ಬರೆದು ಕೊಡಬೇಕು ಎಂದು ಪಟ್ಟು ಹಿಡಿದಿದ್ದಲ್ಲದೇ, ಮಾತಿಗೆ ತಪ್ಪಿದರೆ ಉಗ್ರ ಹೊರಾಟ ನಡೆಸುತ್ತೇವೆ ಎಂದು ಭಾಸ್ಕರ ಪಟಗಾರ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಮೇಘರಾಜ ನಾಯ್ಕ ಕಾಮಗಾರಿಗಳನ್ನು ಶೀಘ್ರ ನಡೆಸುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಐಆರ್‌ಬಿ ಅಧಿಕಾರಿಗಳು ಲಿಖೀತ ರೂಪದಲ್ಲಿ ಒಂದು ವಾರದೊಳಗಾಗಿ ಹಂತ ಹಂತದಲ್ಲಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ದೇವಗಿರಿ ಗ್ರಾಪಂ ಅಧ್ಯಕ್ಷ ಎಸ್.ಟಿ. ನಾಯ್ಕ, ಕರವೇ ಜಿಲ್ಲಾ ಉಪಾಧ್ಯಕ್ಷ ಆರುಣ ಹರಕಡೆ, ಪೂರ್ಣಿಮಾ ರೇವಣಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಬಾಬು ಮುಕ್ರಿ, ವಿನಾಯಕ ನಾಯ್ಕ, ಮಂಜುನಾಥ ಗೌಡ, ತಿಮಪ್ಪ ನಾಯ್ಕ, ನಾಗರಾಜ ನಾಯ್ಕ ಮೊದಲಾದವರು ಪ್ರತಿಭಟನೆಯಲ್ಲಿದ್ದರು.