ನಾಲತವಾಡ: ಕಳೆದ ಒಂದು ತಿಂಗಳಿಂದಲೂ ಕುಡಿಯುವ ಹನಿ ನೀರಿಗಾಗಿ ಅಲೆದಾಡುತ್ತೀದ್ದೇವೆ. ಪಪಂ ಅಧಿಕಾರಿ ನಮ್ಮ ವಾರ್ಡಿನತ್ತ ಗಮನ ಹರಿಸದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ 13ನೇ ವಾರ್ಡಿನ ಮಹಿಳೆಯರು ಪಪಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆಯಿತು.
ಪಪಂ ಮೇಲ್ದರ್ಜೆಗೇರಿಸಿ ನಮಗೇನು ಸುಖವಾಗಿಲ್ಲ, ಮೊದಲಿನ ಗ್ರಾಪಂ ಮೂಲಕ ನೀರಿನ ಕೊರತೆ ಎಂದೂ ಕಂಡು ಬಂದಿಲ್ಲ ಎಂದು ಪಪಂ ದುರಾಡಳಿತ ಖಂಡಿಸಿದ ಪುರುಷರು-ಮಹಿಳೆಯರು ಸತತ 4 ವರ್ಷಗಳಿಂದ ನಮ್ಮ ಓಣಿಯಲ್ಲಿ ಕುಡಿವ ನೀರಿನ ಕೊರತೆ ನೀಗಿಸಿಲ್ಲ ಎಂದು ದೂರಿದರು.
ಅಧಿಕಾರಿ ತರಾಟೆಗೆ: ಕಚೇರಿ ಕೆಲಸದ ವೇಳೆ ಬೆಳಿಗ್ಗೆ 8 ಗಂಟೆ ಎಂದು ಬದಲಿಸಿದರೂ 11 ಗಂಟೆಯಾದರೂ ಬಾರದ ಪಪಂ ಸಿಒ ಅವರ ವರ್ತನೆಗೆ ಮುತ್ತಿಗೆ ಹಾಕಿದ ಸಾರ್ವಜನಿಕರ ಪೈಕಿ ಈಶ್ವರ್ ಡಿಗ್ಗಿ ಫೋನ್ ಮೂಲಕ ತರಾಟೆಗೆ ತಗೆದುಕೊಂಡರು. ಸರಕಾರದ ಸಮಯ ಪಾಲನೆ ಗೊತ್ತಿಲ್ಲ, ಪಪಂ ಸಮಸ್ಯೆ ಗಮನಕ್ಕೆ ತಂದವರೊಂದಿಗೆ ವರ್ತನೆ ಸರಿಯಾಗಿರಲಿ, ಮೊದಲು ಕಚೇರಿ ಬರಬೇಕು. ಒಂದು ವೇಳೆ ಫೋನ್ ಕರೆಗೆ ಸ್ಪಂದಿಸದೇ ಹೋದಲ್ಲಿ ಬೇರೆ ಪರಿಣಾಮವಾಗುತ್ತದೆ ಎಂದು ಬೆವರಿಳಿಸಿದರು.
ನಮ್ಮ ವಾರ್ಡಿನಲ್ಲಿ ಉಂಟಾದ ನೀರಿನ ಹಾಹಾಕಾರ ನೀಗಿಸುವವರೆಗೂ ಮತ್ತು ಅಧಿಕಾರಿ ಬರುವವರೆಗೂ ಕಾಲ್ಕಿತ್ತಲ್ಲ ಎಂದು ರೊಚ್ಚಿಗೆದ್ದ ಮಹಿಳೆಯರು ಸ್ಥಳದಲ್ಲೇ ಬಿಡಾರ ಹೂಡಿದರು. ವಿಷಯ ಅರಿತ ಪಪಂ ಸಿಒ ಮಾರುತಿ ನಡುವಿನಕೇರಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಸುತ್ತುವರಿದ ಮಹಿಳೆ ಹಾಗೂ ಪುರುಷರು ಕುಡಿವ ನೀರಿನ ಸಮಸ್ಯೆ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಅಧಿಕಾರಿಗಳು, ಕುಡಿವ ನೀರಿನ ಸಮಸ್ಯೆ ನೀಗಿಸಲೆಂದೇ ಟೆಂಡರ್ ಕರೆಯಲಾಗಿದೆ. ಯಾರೂ ಟೆಂಡರ್ ಹಾಕಲು ಬರುತ್ತಿಲ್ಲ, ಶೀಘ್ರವೇ ನಿಮ್ಮ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಬರದಂತೆ ಇಂದೇ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ಮಾಹಿತಿ ಪಡೆಯುತ್ತೇನೆ.ಗುಮ್ಮಿಗಳಿಗೆ ಸಂಪರ್ಕ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಮಹಿಳೆಯರು ಸ್ಥಳದಿಂದ ನಿರ್ಗಮಿಸಿದರು.
ಸಂಜು ಜೋಶಿ, ಈರಮ್ಮ ಹುಲಗಬಾಳ, ಅಂಬ್ರಮ್ಮ ತಾಳಿಕೋಟ, ಗೌರಮ್ಮ ಬಾಗೇವಾಡಿ, ಭಾರತಿ ಕುಲಕರ್ಣಿ, ರೇಣುಕಾ ಹೊಸೂರ, ಯಲ್ಲಮ್ಮ ಕ್ಷತ್ರಿ, ಮಮತಾ ಮುಲ್ಲಾ, ಪ್ರಭಾವತಿ ಹಾವರಗಿ ಇದ್ದರು.