Advertisement

ಟಿಪ್ಪು ಜಯಂತಿ ಆಚರಣೆ ವಿರುದ್ಧ ಆಕ್ರೋಶ

02:35 PM Nov 10, 2018 | |

ಭದ್ರಾವತಿ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಬಿಜೆಪಿ, ಬಜರಂಗ ದಳ, ಎಬಿವಿಪಿ ಮುಂತಾದ ಹಿಂದೂಪರ ಸಂಘಟನೆಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಎಂ.ಆರ್‌. ನಾಗರಾಜ್‌ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ರಂಗಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಮುಸ್ಲಿಂ ತುಷ್ಟೀಕರಣಕ್ಕೋಸ್ಕರ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ದೇಶದ್ರೋಹಿ, ಮತಾಂಧ ಟಿಪ್ಪುವನ್ನು ದೇಶಪ್ರೇಮಿ ಎಂದು ಸುಳ್ಳು ಹೇಳುತ್ತಾ ಟಿಪ್ಪುವಿನ ನಿಜ ಚರಿತ್ರೆಯನ್ನು ಮುಚ್ಚಿ ಹಾಕಿ ದೇಶದ ಜನರಿಗೆ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ತನ್ನ ಸಂಸ್ಥಾನವನ್ನು ಬ್ರಿಟಿಷರಿಂದ ರಕ್ಷಣೆ ಮಾಡಲು ಅವರ ವಿರುದ್ಧ ಹೋರಾಟ ಮಾಡಿದ್ದಾನೆಯೇ ವಿನಃ ಸ್ವಾತಂತ್ರ್ಯಕ್ಕಾಗಿ ಮಾಡಿಲ್ಲ ಎಂಬುದು ಇತಿಹಾಸದ ಪುಟಗಳಿಂದ ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಟಿಪ್ಪು ತನ್ನ ಆಡಳಿತದ ಅವಧಿಯಲ್ಲಿ ಹಿಂದೂಗಳು, ಕ್ರೈಸ್ತರು, ಮಲಬಾರಿಗಳು, ಮೇಲುಕೋಟೆ ಅಯ್ಯಂಗಾರಿಗಳು, ಕೊಡವರನ್ನು ಮತಾಂತರ ಮಾಡಿದ್ದಲ್ಲದೆ ಲಕ್ಷಾಂತರ ಜನರನ್ನು ಹತ್ಯೆ ಮಾಡಿ ದೇವಾಲಯಗಳನ್ನು ನಾಶ ಮಾಡಿದ ಕುರುಹುಗಳು ಇಂದಿಗೂ ಗೋಚರಿಸುತ್ತಿವೆ ಎಂದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷದ್‌ ಮುಖಂಡ ಹಾ. ರಾಮಪ್ಪ, ಸಂಘ ಪರಿವಾರದ ಓಂಕಾರಪ್ಪ, ಧರ್ಮಪ್ರಸಾದ್‌, ಬಿಜೆಪಿ ಅಧ್ಯಕ್ಷರಾದ ಜಿ. ಆನಂದಕುಮಾರ್‌, ಮಂಗೋಟೆ ರುದ್ರೇಶ್‌ ಮಾತನಾಡಿದರು. ಮುಖಂಡರಾದ ಬಿ.ಕೆ.ಶ್ರೀನಾಥ್‌, ಗಿರಿಧರ್‌, ರೂಪಶ್ರೀ, ರಾಮಮೂರ್ತಿ, ಶಿವಕುಮಾರ್‌, ಬಾ.ನಿ. ಮಹಾದೇವ, ರಾಮಣ್ಣ, ಎನ್‌. ವಿಶ್ವನಾಥ ರಾವ್‌, ಅವಿನಾಶ್‌, ಸುನಿಲ್‌, ಪಿ. ವೆಂಕಟರಮಣ ಶೇಟ್‌, ಶ್ರೀನಾಥಾಚಾರ್‌, ಕೃಷ್ಣಮೂರ್ತಿ ಮತ್ತಿತರರು ಇದ್ದರು.

ನಿಷೇಧಾಜ್ಞೆ ಜಾರಿ
ಶಿವಮೊಗ್ಗ: ನ. 10ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಆದೇಶಿಸಿದ್ದಾರೆ. 

Advertisement

ಟಿಪ್ಪು ಜಯಂತಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಮತ್ತು ಬೆಂಬಲಿತ ಸಂಘಟನೆಗಳು ಪ್ರತಿಭಟನೆ ಹಾಗೂ ಕಪ್ಪು ಬಾವುಟ ಪ್ರದರ್ಶನ ಇತ್ಯಾದಿ ನಡೆಸಬಹುದಾದ ಸಂಭವವಿರುವುದರಿಂದ ಸಾರ್ವಜನಿಕ ಶಾಂತಿ, ಪ್ರಾಣ ಮತ್ತು ಆಸ್ತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ
ಮುಂಜಾಗ್ರತಾ ಕ್ರಮವಾಗಿ ಅಂದು ಬೆಳಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಕಾರ್ಯಕ್ರಮ ನಡೆಯುವ ಪ್ರದೇಶವನ್ನು ಹೊರತುಪಡಿಸಿ, ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಅವಧಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿರುವ ಪ್ರದೇಶದ ವ್ಯಾಪ್ತಿಯಲ್ಲಿ ಬೈಕ್‌ ರ್ಯಾಲಿ, ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನು ನಿಷೇಧಿಸಲಾಗಿದೆ. ನಿಷೇದಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ 5 ಮತ್ತು ಅದಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಸೇರುವುದನ್ನು ಹಾಗೂ
ಯಾವುದೇ ರೀತಿಯ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮಾರಕಾಸ್ತ್ರಗಳೊಂದಿಗೆ ಅಲೆದಾಡುವುದನ್ನು ಮತ್ತು ಕೋಮು ಗಲಭೆ ಪ್ರಚೋದಿಸುವ ಕರಪತ್ರಗಳನ್ನು ಮುದ್ರಿಸಿ ಹಂಚುವುದನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದು ಮತ್ತು ಯಾವುದೇ ಸಿಡಿಮದ್ದು ಬಳಕೆಯ ಪ್ರದರ್ಶನವನ್ನು ಮತ್ತು ಕ್ಷಿಪಣಿಗಳ ತಯಾರಿಕೆ ಹಾಗೂ ಬಳಕೆಯನ್ನು ನಿಷೇಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next