Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ

11:27 AM Dec 31, 2019 | Suhan S |

ವಾಡಿ: ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪಟ್ಟಣದಲ್ಲಿ ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಜನಾಕ್ರೋಶ ವ್ಯಕ್ತವಾಯಿತು.

Advertisement

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಭಗತ್‌ಸಿಂಗ್‌, ನೇತಾಜಿ, ಅಂಬೇಡ್ಕರ್‌, ಟಿಪ್ಪುಸುಲ್ತಾನ್‌ ಹಾಗೂ ಅಬ್ದುಲ್‌ ಕಲಾಂ ಆಜಾದ್‌ ಅವರ ಭಾವಚಿತ್ರ ಹಿಡಿದುಕೊಂಡು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ನಾಯಕಿ ಕೆ.ನೀಲಾ, ಧರ್ಮದ ಆಧಾರದಲ್ಲಿ ಜನರನ್ನು ಇಬ್ಭಾಗ ಮಾಡುವ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಜಾರಿಗೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಖಾತೆ ಸಚಿವ ಅಮಿತ್‌ ಶಾ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ನರಕ ಸೃಷ್ಠಿಸಲು ಹೊರಟಿದ್ದಾರೆ. ಎಲ್ಲ ಜಾತಿ ಧರ್ಮಗಳ ಜನರ ಐಕ್ಯತೆ ಬಯಸುವ ಜಾತ್ಯತೀತ ಸಂವಿಧಾನ ಬದಲಿಸಿ ಮನುವಾದ ಜಾರಿಗೆ ತರುವ ಷಡ್ಯಂತ್ರ ಸಂಘ ಪರಿವಾರದ ಅಂಗ ಪಕ್ಷ ಬಿಜೆಪಿಯಿಂದ ನಡೆಯುತ್ತಿದೆ. ಮುಸ್ಲಿಂ, ಬೌದ್ಧ, ಕ್ರೈಸ್ತ, ಸಿಖ್‌, ಇಸಾಯಿ ಜನಾಂಗವನ್ನು ಬಂಧಿಸಿಡಲು ಅಸ್ಸಾಂ ಮತ್ತು ಕರ್ನಾಟಕದಲ್ಲಿ ಈಗಾಗಲೇ ಜೈಲುಗಳು ಸಿದ್ಧಗೊಂಡಿವೆ. ಪ್ರಾಣತೆತ್ತಾದರೂ ಈ ಕಾಯ್ದೆಗಳನ್ನು ಹಿಮ್ಮೆಟ್ಟಿಸಬೇಕಿದೆ. ಹೋರಾಟ ದೇಶದಾದ್ಯಂತ ಭುಗಿಲೆದ್ದಿದೆ. ಇದು ಆರಂಭವಷ್ಟೇ.

ಕಾಯ್ದೆಗಳು ವಾಪಸ್ಸಾಗುವವರೆಗೂ ಹೋರಾಟ ಜಿವಂತಾಗಿಡಬೇಕು ಎಂದು ಕರೆ ನೀಡಿದರು. ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪುರ ಮಾತನಾಡಿ, ಜೀವನದ ಸಮಸ್ಯೆಗಳ ವಿರುದ್ಧ ಜನರು ನಡೆಸಬೇಕಾದ ಐಕ್ಯ ಹೋರಾಟಗಳಿಗೆ ಧಕ್ಕೆತರಲು ಕೇಂದ್ರ ಬಿಜೆಪಿ ಸರಕಾರ ಕೆಟ್ಟ ಉಪಾಯ ರೂಪಿಸುತ್ತಿದೆ. ಇದರ ವಿರುದ್ಧ ಎಲ್ಲೆಡೆ ಜನರು ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಜನರ ಹೋರಾಟ ಹತ್ತಿಕ್ಕಲು ಪೊಲೀಸ್‌ ಬಲ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಚಳವಳಿ ಮಾತ್ರ ಕೈಬಿಟ್ಟಿಲ್ಲ. ಚಳವಳಿ ಇನ್ನಷ್ಟು ಉನ್ನತಮಟ್ಟಕ್ಕೆ ಹೋಗಲಿದೆ ಎಂದು ಹೇಳಿದರು.

ಎಸ್‌ಡಿಪಿಐ ಪಕ್ಷದ ಟ್ರೇಡ್‌ ಯೂನಿಯನ್‌ ರಾಜ್ಯಾಧ್ಯಕ್ಷ ಅಬ್ದುಲ್‌ ರಹೀಮ ಪಟೇನ್‌, ನ್ಯಾಯವಾದಿಗಳಾದ ವಾಹಜ್‌ ಬಾಬಾ, ಉಸ್ತಾದ್‌ ಸಾದತ್‌ ಹುಸೇನ್‌, ಸೈಯ್ಯದ್‌ ಮಝರ್‌ ಹುಸೇನ್‌, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿದರು. ಎನ್‌ಆರ್‌ಸಿ-ಸಿಎಎ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣಕುಮಾರ ಮೌಸಲಗಿ, ಎಸ್‌ಡಿಪಿಐ ಪಕ್ಷದ ಅಧ್ಯಕ್ಷ ಆಸೀಫ್‌ ಪಗಡಿವಾಲೆ, ಮುಖಂಡರಾದ ಮಕ್ಬುಲ್‌ ಜಾನಿ, ಮಹೆಮೂದ್‌ ಸಾಹೇಬ, ಟೋಪಣ್ಣ ಕೋಮಟೆ, ಚಂದ್ರಸೇನ ಮೇನಗಾರ, ಮಲ್ಲಯ್ಯ ಗುತ್ತೇದಾರ, ದೇವಿಂದ್ರ ಕರದಳ್ಳಿ, ಚಂದ್ರು ಕರಣಿಕ, ಬಾಬುಮಿಯ್ನಾ, ನಾಗೇಂದ್ರ ಜೈಗಂಗಾ, ಶ್ರೀನಿವಾಸ ಸಗರ, ಅಬ್ದುಲ್‌ ಅಜೀಜಸೇಠ, ಶಂಕ್ರಯ್ಯಸ್ವಾಮಿ ಮದರಿ, ವೀರಭದ್ರಪ್ಪ ಆರ್‌.ಕೆ., ಗೌತಮ ಪರತೂರಕರ, ಶರಣು ಹೇರೂರ, ರಮೇಶ ಬಡಿಗೇರ, ಫೇರೋಜ್‌ ಖಾನ್, ಮಹ್ಮದ್‌ ಗೌಸ್‌, ಮಹ್ಮದ್‌ ಅಶ್ರಫ್‌, ರಾಜಾ ಪಟೇಲ, ನಾಸೀರ್‌ ಹುಸೇನ್‌ ನೇತೃತ್ವ ವಹಿಸಿದ್ದರು. ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅವರು ಸ್ಥಳಕ್ಕಾಗಮಿಸಿ ರಾಷ್ಟ್ರಪತಿಗೆ ಬರೆದ ಮನವಿತ್ರ ಸ್ವೀಕರಿಸಿದರು. ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್  ಒದಗಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next