Advertisement

ಖಾಸಗಿ ಫೈನಾನ್ಸ್‌ ವಿರುದ್ಧ ಆಕ್ರೋಶ

12:03 PM Nov 26, 2019 | Suhan S |

ಎನ್‌.ಆರ್‌.ಪುರ: ಖಾಸಗಿ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲ ವಸೂಲಿ ನೆಪದಲ್ಲಿ ಬಡ ಮಹಿಳೆಯರನ್ನು ಬೆದರಿಸಿ, ಹಿಂಸೆ ನೀಡುತ್ತಿವೆ ಎಂದು ಆರೋಪಿಸಿ ತಾಲೂಕು ಋಣಮುಕ್ತ ಹೋರಾಟ ಸಮಿತಿ ಆಶ್ರಯದಲ್ಲಿ ಸೋಮವಾರ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

Advertisement

ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಮೈಕ್ರೋ ಫೈನಾನ್ಸ್‌ ವಿರುದ್ಧ ಘೋಷಣೆ ಕೂಗುತ್ತ, ಬ್ಯಾನರ್‌ ಹಿಡಿದು ಮೆರವಣಿಗೆ ನಡೆಸಿದ ಮಹಿಳೆಯರು, ಅಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಋಣಮುಕ್ತ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷಕುಮಾರ್‌, ಈ ಭಾಗದಲ್ಲಿ ಹುಟ್ಟಿಕೊಂಡಿರುವ ಮೈಕ್ರೋ ಫೈನಾನ್ಸ್‌ಗಳು ಬಡ ಮಹಿಳೆಯರಿಗೆ ಸಾಲ ನೀಡಿ ಆರ್‌ಬಿಐ ಕಾನೂನು ಮೀರಿ ಸಾಲ ವಸೂಲಿ ಮಾಡುತ್ತಿವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೂ ಮನೆ ಬಾಗಿಲಿಗೇ ಬಂದು ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು

ಆರೋಪಿಸಿದರು. 30 ಸಾವಿರ ರೂ.ಗೆ ಮಾತ್ರ ಸಾಲ ನೀಡಬೇಕೆಂಬ ನಿಯಮವಿದ್ದರೂ ಮಿತಿ ಇಲ್ಲದೇ ಸಾಲ ನೀಡುತ್ತಿದ್ದಾರೆ. ಚೆಕ್‌ನಲ್ಲಿ ಹಣ ನೀಡದೆ ನೇರವಾಗಿ ನಗದು ಸಾಲ ನೀಡುತ್ತಿದ್ದಾರೆ. ಇಲ್ಲಿ ಕಪ್ಪು ಹಣ ಚಲಾವಣೆ ನಡೆಯುತ್ತಿದ್ದು, ಸಾಲ ವಸೂಲಿಗೆ ಬಂದರೆ ಹೆದರದೆ ನೇರವಾಗಿ ಪೊಲೀಸರಿಗೆ ದೂರು ನೀಡಬೇಕೆಂದು ಸಲಹೆ ನೀಡಿದರು. ಬೆಳ್ತಂಗಡಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಕೆ.ನೇಮಿರಾಜ್‌ ಮಾತನಾಡಿ, ಮಹಿಳೆಯರ ಉದ್ಧಾರದ ನೆಪದಲ್ಲಿ ಮೋಸ ಮಾಡುತ್ತಿವೆ. ನಿಮ್ಮ ದಬ್ಟಾಳಿಕೆಗೆ ನಾವು ಬಗ್ಗುವುದಿಲ್ಲ. ಸಾಲ ನೀಡಿದ ಆರಂಭದಿಂದ ಸಾಲ ತೀರುವವರೆಗೆ ಶೇ.40 ರಷ್ಟು ಬಡ್ಡಿ ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡ ಬಿ.ಎಚ್‌.ಕೈಮರದ ವಿಜಯಕುಮಾರ್‌, ದ.ಕ. ಜಿಲ್ಲೆಯ ಋಣಮುಕ್ತ ಸಮಿತಿ ಸಂಚಾಲಕ ಕೊರಗಪ್ಪ ಪೂಜಾರಿ ಮಾತನಾಡಿದರು. ಸಭೆಯಲ್ಲಿ ಋಣಮುಕ್ತ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಸಿಂಸೆಯ ಜಗದೀಶ್‌, ಕಾರ್ಯದರ್ಶಿ ಸಿಂಸೆ ರವಿ ಮುಂತಾದವರು ಉಪಸ್ಥಿತರಿದ್ದರು. ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನಾ ಸಭೆಯ ನಂತರ ತಹಶೀಲ್ದಾರ್‌ ನಾಗರಾಜ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next