Advertisement

ಬಡವರ ಕಷ್ಟ ಅರ್ಥ ಮಾಡಿಕೊಳ್ಳದ ಶಾಸಕ ಶಿವಣ್ಣ ವಿರುದ್ಧ ಆಕ್ರೋಶ

01:26 PM Aug 24, 2017 | |

ಆನೇಕಲ್‌: ತಾಲೂಕಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಶಾಸಕ ಬಿ.ಶಿವಣ್ಣ ಕಣ್ಮುಚ್ಚಿ ಕುಳಿತಿದ್ದು ಬಡವರ ಕಷ್ಟ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎನ್‌.ಮಹೇಶ್‌ ಕಿಡಿಕಾರಿದರು. ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಿಂದ ಬಹುಜನ ಸಮಾಜ ಪಕ್ಷ ತಹಶೀಲ್ದಾರ್‌ ಕಚೇರಿವರೆಗೆ ಭ್ರಷ್ಟ ಮುಕ್ತ ಆನೇಕಲ್‌ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಲ್ಲಿ ಅವರು ಮಾತನಾಡಿದರು. ಶಾಸಕರ ಏಜೆಂಟರಂತೆ ಕೆಲಸ : ತಾಲೂಕು ಕಚೇರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳು ಲಂಚ ಪಡೆಯದೇ ಯಾವುದೇ ಕೆಲಸ ಮಾಡಿ ಕೊಡದಷ್ಟು ಹದಗೆಟ್ಟಿದೆ. ಅಧಿಕಾರಿಗಳು ಶಾಸಕರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಪೊಲೀಸ್‌ ಠಾಣೆಯಲ್ಲಿ ಶಾಸಕರ ಮಾತಿಗೆ ಮಾತ್ರ ಮನ್ನಣೆ ನೀಡುತ್ತಿದ್ದು, ದಲಿತರೇ ಹೆಚ್ಚಾಗಿರುವ ಆನೇಕಲ್‌ ತಾಲೂಕಿನಲ್ಲಿ ಈ ರೀತಿ ವರ್ತನೆ ತೋರುವ ಅಧಿಕಾರಿಗಳನ್ನು ಹಿಡಿತದಲ್ಲಿಡಬೇಕಾದ ಶಾಸಕರೇ ಅವರನ್ನು ಭ್ರಷ್ಟಾಚಾರಕ್ಕೆ ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ನಿರಂತರ ದಲಿತ ಯುವಕರ ಹತ್ಯೆಗಳು ನಡೆಯುತ್ತಿದ್ದು, ಅಪರಾಧಗಳ ಸಂಖ್ಯೆ ಬೆಳೆಯುತ್ತಿದೆ. ಮರಳು ದಂಧೆ, ಗ್ರಾನೈಟ್‌ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಪೊಲೀಸ್‌ ಇಲಾಖೆ ವಿಫ‌ಲವಾಗಿದೆ. ತಾಲೂಕು ಆಡಳಿತ ವ್ಯವಸ್ಥೆ ಹದಗೆಟ್ಟಿದ್ದರೂ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದೂರಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜ್‌ ಮಾತನಾಡಿ, ಪರಿಶಿಷ್ಟ ಜಾತಿಗಳ ಯುವಕರನ್ನೇ ಟಾರ್ಗೆಟ್‌ ಮಾಡಿ, ಅವರ ವಿರುದ್ಧ ದೂರುಗಳಿಲ್ಲದಿದ್ದರೂ ಅಥವಾ ಸಣ್ಣಪುಟ್ಟ ಪ್ರಕರಣಗಳಿಗೆ ರೌಡಿ ಶೀಟ್‌ ತೆರೆದು ಅವರನ್ನು ಕೆಟ್ಟ ದಾರಿಗೆ ಎಳೆಯುತ್ತಿರುವ ಪೊಲೀಸರ ಕ್ರಮ ಸರಿಯಲ್ಲ ಎಂದು
ಆರೋಪಿಸಿದರು. ದಲಿತರ ಮೇಲೆ ಕಾಳಜಿ ಇಲ್ಲ: ತಾಲೂಕಿನ ಬಡವರಿಗೆ ಹಕ್ಕು ಪತ್ರ ನೀಡುವಲ್ಲಿ ವಿಫ‌ಲರಾಗಿರುವ ಶಾಸಕರಿಗೆ, ಬಡವರ ದಲಿತರ ಮೇಲೆ ಕಾಳಜಿ ಇಲ್ಲ. ಅಂಬೇಡ್ಕರ್‌ ಭವನವನ್ನು ನಾಲ್ಕು ವರ್ಷದಿಂದ ಕಟ್ಟುವ ಭರವಸೆಯನ್ನೇ ನೀಡುತ್ತಿರುವ ಶಾಸಕರು ಮೀಸಲಾತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು. ಬಿಎಸ್‌ಪಿ ಆನೇಕಲ್‌ ತಾಲೂಕು ಉಸ್ತುವಾರಿ ಮುಖಂಡ ಕೃಷ್ಣಮೂರ್ತಿ ಮಾತನಾಡಿ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರನ್ನು ರಕ್ಷಣೆ ಮಾಡಬೇಕಾದವರೇ ಅವರ ವಿರುದ್ಧದ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ವೆಂಕಟೇಶ್ವರ ಚಿತ್ರಮಂದಿರದಿಂದ ಪ್ರತಿಭಟ ನಾಕಾರರು ಹಾಗೂ ನೂರಾರು ಮಹಿಳೆಯರು ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗುತ್ತ ತಾಲೂಕು ಕಚೇರಿ ಎದುರು ಜಮಾಯಿಸಿದರು. ಮನವಿ ಪತ್ರವನ್ನು ತಹಶೀಲ್ದಾರ್‌ ಆಶಾಪರ್ವೀನ್‌ ಹಾಗೂ ವೃತ್ತ ನಿರೀಕ್ಷಕ ಮಾಲತೀಶ್‌ ಅವರಿಗೆ ಸಲ್ಲಿಸಿದರು. ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಕಮಲಾನಾಭನ್‌, ಪ್ರಧಾನ ಕಾರ್ಯದರ್ಶಿಗಳಾದ ಆರ್‌. ಮುನಿಯಪ್ಪ, ಹರಿರಾಮ್‌,ರಾಜ್ಯ ಕಾರ್ಯದರ್ಶಿ ಸಿ.ಎಲ್‌.ಮುನಿಯಪ್ಪ, ಮುಖಂಡರಾದ ರಾಜಪ್ಪ, ಬೇಗೂರು ಮಹೇಶ್‌, ಲವ, ಕುಶ, ಹಾರಗದ್ದೆ ಪ್ರಭಾಕರ್‌, ನವೀನ್‌, ಮುನಿರಾಜು, ನಾಗರಾಜು, ಮೂರ್ತಿ, ಬಿಎಸ್‌ಪಿ ತ್ಯಾಗರಾಜು, ಮರಿಯಪ್ಪ, ಶಾಂತಕುಮಾರ್‌, ಗಂಗಾಧರ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next