Advertisement

ಬಿಜೆಪಿಯಿಂದಲೇ ಶೋಷಿತರಿಗೆ ಅಭದ್ರತೆ

01:20 PM Jun 12, 2022 | Team Udayavani |

ಮಂಡ್ಯ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ಶೋಷಿತ ಸಮುದಾಯಗಳಲ್ಲಿ ಅಭದ್ರತೆ ಉಂಟು ಮಾಡುವುದರಿಂದ ಮೀಸಲಾತಿ ರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.

Advertisement

ನಗರದ ರೆಡ್‌ಕ್ರಾಸ್‌ ಸಭಾಂಗಣದಲ್ಲಿ ಶನಿವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಜಾಗೃತಿ ವೇದಿಕೆ ವತಿಯಿಂದ ನಡೆದ ಶೋಷಿತ ಸಮುದಾಯಗಳ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ, ರಾಜಕೀಯ ಅಭಿವೃದ್ಧಿಗೆ ಮೀಸಲಾತಿ ಅಗತ್ಯ: ಶೋಷಿತ ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಮೀಸಲಾತಿ ಅತ್ಯಗತ್ಯ. ಇಂಥ ಮೀಸಲಾತಿ ತೆಗೆದುಹಾಕುವ ಹುನ್ನಾರ ಹಿಂದಿನಿಂದಲೂ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ಬಂದಾಗಲೆಲ್ಲವೂ ಮೀಸಲಾತಿ ನಾಶಗೊಳಿಸುವ ಪ್ರಯತ್ನ ನಡೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿವಾರು ಜನಗಣತಿ ಬಿಡುಗಡೆ ಮಾಡಲಿ: ಜನಸಂಖ್ಯೆಗನುಗುಣವಾಗಿ ಅಧಿಕಾರ ಮತ್ತು ಸಂಪತ್ತು ಹಂಚಿಕೆಯಾಗ ಬೇಕೆಂಬ ಉದ್ದೇಶದಿಂದ 1931ರ ನಂತರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2014ರಲ್ಲಿ ಎಚ್‌.ಕಾಂತರಾಜು ನೇತೃತ್ವದ ಆಯೋಗದ ಮೂಲಕ ಜಾತಿವಾರು ಜನಗಣತಿ ನಡೆಸಿದ್ದಾರೆ. ಕಳೆದ 4 ವರ್ಷಗಳಿಂದಲೂ ಸಮೀಕ್ಷೆ ಬಿಡುಗಡೆಗೊಳಿಸಿ ಎಲ್ಲಾ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸುತ್ತಿದ್ದರೂ, ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾವೇಶ ಆಯೋಜನೆಗೆ ಸಿದ್ಧತೆ: ಜಿಲ್ಲೆಯ ಎಲ್ಲಾ ಶೋಷಿತ ಸಮುದಾಯದ ಮುಖಂಡರ ನೇತೃತ್ವದಲ್ಲಿ ಶೋಷಿತ ಸಮುದಾಯಗಳ ಸಮಾವೇಶ ನಡೆಸಲಾಗುವುದು. ಆ ಮೂಲಕ ಈ ಸಮುದಾಯಗಳ ಅಗತ್ಯತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಲಾಗುವುದು ಎಂದರು.

Advertisement

ಜಾಗೃತಿ ಅಭಿಯಾನ ನಡೆಯಲಿ: ಚಿಂತಕ ಪ್ರೊ.ಹಲ್ಕೆರೆ ಮಹದೇವು ಮಾತನಾಡಿ, ಹಿಂದುಳಿದವರು, ಮಹಿಳೆಯರು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳ ಪರವಾಗಿ ದಲಿತ ಚಳವಳಿ ನಡೆದುಕೊಂಡು ಬಂದಿದೆ. ಜಾತ್ಯತೀತ ರಾಜಕಾರಣ ಹಾಳಾದರೆ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಅನ್ಯಾಯವಾಗುವುದಿಲ್ಲ. ಬದಲಾಗಿ ಶೋಷಿತ ಸಮುದಾಯಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಜಾತ್ಯತೀತ ರಾಜಕಾರಣ ಉಳಿಸಿಕೊಳ್ಳುವ ಜಾಗೃತಿ ಅಭಿಯಾನ ನಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌. ಸಂದೇಶ್‌, ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್‌, ಮಾಜಿ ಅಧ್ಯಕ್ಷ ನಾಗರಾಜು, ಮಾಜಿ ಮೇಯರ್‌ ವೆಂಕಟೇಶಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ಸುರೇಶ್‌ ಕಂಠಿ, ಮಾಜಿ ಸದಸ್ಯ ಪಿ.ಎಲ್‌.ದೇವರಾಜು, ನಾಗೇಂದ್ರ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್‌, ವಿವಿಧ ಸಮು ದಾಯದ ಮುಖಂಡರಾದ ಸಾತನೂರು ಕೃಷ್ಣ, ಗುರುರಾಜ್‌, ರಾಜಣ್ಣ, ಡಿ.ರಮೇಶ್‌, ಮಂಚಶೆಟ್ಟಿ, ಸಿದ್ದಶೆಟ್ಟಿ, ಎಂ.ಎಸ್‌.ರಾಜಣ್ಣ, ಪ್ರತಾಪ, ರವಿಕುಮಾರ್‌, ನಾಗರತ್ನ, ದೊಡ್ಡ ಯ್ಯ, ಅಮ್ಜದ್‌ಪಾಷಾ, ಮುಜಾಹಿದ್‌, ಬೆನ ಲ್‌ ಚಾರ್ಲ್ಸ್‌ ಮತ್ತಿತರರು ಉಪಸ್ಥಿತರಿದ್ದರು. ತಳ ಸಮುದಾಯದ ಹಕ್ಕು ಕಸಿಯಲು ಯತ್ನ : ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾರಿಗಾಗಿ ವಿವಿಧ ಯೋಜನೆ ಜಾರಿಗೊಳಿಸಲಾಗಿತ್ತು. ನಿಗಮಗಳಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಈಗಿನ ಸರ್ಕಾರ ಅಹಿಂದ ವರ್ಗಕ್ಕೆ ಸೇರಿದ ನಿಗಮಗಳನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಿದೆ. ಮೀಸಲಾತಿ ವಿಚಾರದಲ್ಲೂ ಬಲಾಡ್ಯರಿಗೆ ಅವಕಾಶ ಕಲ್ಪಿಸುವ ಮೂಲಕ ತಳ ಸಮುದಾಯಗಳ ಹಕ್ಕು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next