ಕಾರವಾರ: ಜನಸಾಮಾನ್ಯನ ಠೇವಣಿಗೆ ಭದ್ರತೆ ಇಲ್ಲದ ಬ್ಯಾಂಕ್ ಖಾಸಗೀಕರಣದ ಒಲವು ಹೊಂದಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಬ್ಯಾಂಕ್ ನೌಕರರು ನಡೆಸುತ್ತಿರುವ ಹೋರಾಟವನ್ನು ಜನ ಸಾಮಾನ್ಯರ ಹೋರಾಟವಾಗಿ ಪರಿವರ್ತಿಸಲು ಸಾರ್ವಜನಿಕರ ಬೆಂಬಲ ಅಗತ್ಯವಿದೆ ಎಂದು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್ ಹೇಳಿದ್ದಾರೆ.
ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರದ ಪ್ರಯುಕ್ತ ಬ್ಯಾಂಕ್ ನೌಕರರ ಪ್ರತಿಭಟನೆ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು. ಅನುತ್ಪಾದಕ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವ ಬದಲಿಗೆ ಅದಕ್ಕೆ ಕಾರಣರಾದ ಕಾರ್ಪೋರೇಟ್ ವಲಯದ ಶ್ರೀಮಂತ ಕುಳಗಳಿಗೇ ಬ್ಯಾಂಕ್‌ಗಳನ್ನು ಮಾರಾಟ ಮಾಡುವ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಖಾಸಗೀಕರಣ ನೀತಿಯಿಂದಾಗಿ ಜನಸಾಮಾನ್ಯರ ಠೇವಣಿ ಹಣದ ಭದ್ರತೆ ಗಾಳಿಗೆ ತೂರಲಾಗಿದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಎರಡು ದಿನದ ಮುಷ್ಕರದ ಮೊದಲ ದಿನ ಕಾರವಾರದ ಭಾರತೀಯ ಸ್ಟೇಟ್ ಬ್ಯಾಂಕ್ ಎದುರು ಜರುಗಿದ ಬೃಹತ್ ಮತ ಪ್ರದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ತಾರತಮ್ಯ ಹಾಗೂ ನಿಷ್ಕ್ರಿàಯತೆಗಳ ನಡುವೆಯು ಜನ ಸೇವಾ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಶ್ರಮವಹಿಸಿ ನಿರ್ವಹಣಾ ಲಾಭವನ್ನು ಎಲ್ಲ ಬ್ಯಾಂಕ್‌ಗಳೂ ಗಳಿಸುತ್ತಿವೆ. ಆದರೆ ಅನುತ್ಪಾದಕ ಸಾಲಗಳಿಗೆ ಲಾಭಾಂಶ ಮೀಸಲಿಡುವ ಸಲುವಾಗಿ ನಿವ್ವಳ ಲಾಭ ತೋರಿಸಲು ಕೆಲ ಬ್ಯಾಂಕ್‌ಗಳಿಗೆ ಅಡಚಣೆಯಾಗಿದೆ. ಕೆಟ್ಟ ಸಾಲಗಳ ವಸೂಲಿಗೆ ಸರಕಾರ ದಿಟ್ಟ ಕ್ರಮ ಕೈಗೊಂಡಲ್ಲಿ ಹಾಗೂ ಸೂಕ್ತ ಸಂಖ್ಯೆಯಲ್ಲಿ ನೌಕರರನ್ನು ನೇಮಕಾತಿ ಮಾಡಿದಲ್ಲಿ ಖಾಸಗಿಯವರಿಗಿಂತ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳು ಸಮರ್ಥವಾಗಿ ಸೇವೆ ಸಲ್ಲಿಸಲು ಸಾಧ್ಯವಿದೆ. ಆದರೆ ಸರಕಾರಕ್ಕೆ ಇದು ಯಾಕೆ ಬೇಕಾಗಿಲ್ಲ ಎಂದು ಸಾರ್ವಜನಿಕರೇ ಪ್ರಶ್ನಿಸಬೇಕಾಗಿದೆ ಎಂದರು.
ಸಾರ್ವಜನಿಕರ ಪರವಾಗಿ ಮಾತನಾಡಿದ ನಿವೃತ್ತ ಬ್ಯಾಂಕ್ ಉದ್ಯೋಗಿ, ಕಾಂಗ್ರೆಸ್ ವಕ್ತಾರ ಕೆ. ಶಂಭುಶೆಟ್ಟಿ, ಕೇಂದ್ರ ಸರಕಾರ ಚುನಾವಣೆಯಲ್ಲಿ ಸಹಾಯ ಮಾಡಿದ ಶ್ರೀಮಂತ ಕೈಗಾರಿಕೋದ್ಯಮಿಗಳ ಋಣ ತೀರಿಸಲು ಅವರಿಗೆ ಬ್ಯಾಂಕ್‌ಗಳನ್ನು ಮಾರಾಟ ಮಾಡುತ್ತಿದೆಯಾ ಎಂದು ಪ್ರಶ್ನಿಸಿದರು.
ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಪವಾರ, ಖಾಸಗೀಕರಣದ ವಿರುದ್ಧದ ಹೋರಾಟಕ್ಕೆ ಕೆ.ಡಿ.ಸಿ.ಸಿ ಬ್ಯಾಂಕ್ ಕಾರ್ಮಿಕ ಸಂಘಟನೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ವಿವಿಧ ಬ್ಯಾಂಕ್ ಸಂಘಟನೆಗಳ ಪದಾಧಿಕಾರಿಗಳಾದ ದಯಾನಂದ ಮಡಿವಾಳ, ವಿನೋದ ಬಾಂದೇಕರ, ಗಜಾನನ ನಾಯ್ಕ, ಅರವಿಂದ ನಾಯ್ಕ, ವಿಶ್ವನಾಥ ದುಗೇìಕರ, ಅಶೋಕ ರಾಮದುರ್ಗ, ಶಹನಾಜ್ ಶೇಖ್, ಶಕುಂತಲಾ ಜೈವಂತ ಹಾಗೂ ವಿಮಾ ನೌಕರರ ಸಂಘದ ಹರೀಶ ನಾಯ್ಕ, ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಮುಂತಾದವರು ನೇತೃತ್ವ ವಹಿಸಿದ್ದರು.