ಸುರಪುರ: ತಾಲೂಕಿನ ಕಕ್ಕೇರಾ ಹೋಬಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಯಲ್ಲಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶೋಷಿತ ಪರ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಹಸನಾಪುರ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲ ಸಮಯ ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿ ದೂರದ ಪ್ರಯಾಣಿಕರು ಪರದಾಡಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ತಾಲೂಕಿನ ಕಕ್ಕೇರಾದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ಮನಸ್ಸಿಗೆ ಬಂದಂತೆ ಸಾಲ ನೀಡಿದ್ದಾರೆ. 1 ಎಕರೆಗೆ 50 ಸಾವಿರದವರೆಗೆ ಬೆಳೆ ಸಾಲ ನೀಡಲು ಸರ್ಕಾರದ ಆದೇಶ ಇದೆ. ಆದರೆ, 1 ಎಕರೆ 16 ಗುಂಟೆಗೆ 6 ಲಕ್ಷ ಸಾಲ ನೀಡಿದ್ದಾರೆ ಎಂದರು.
ಬ್ಯಾಂಕ್ ವ್ಯವಸ್ಥಾಪಕ ಮತ್ತು ಫಿಲ್ಡ್ ಆಫೀರ್ ಸೇರಿ ಭ್ರಷ್ಟಾಚಾರವೆಸಗಿ 1 ಎಕರೆ 37 ಗುಂಟೆಗೆ 4 ಲಕ್ಷ, 3 ಎಕರೆ 16 ಗುಂಟೆಗೆ 6 ಲಕ್ಷ, 11 ಎಕರೆ 9 ಲಕ್ಷ, 15 ಎಕರೆಗೆ 15 ಲಕ್ಷ, 13 ಎಕರೆ 35 ಗುಂಟೆಗೆ 12 ಲಕ್ಷ ಮತ್ತು 3 ಎಕರೆ 36 ಗುಂಟೆಗೆ 8 ಲಕ್ಷ ಸಾಲ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಲಂಚ ಕೊಟ್ಟವರಿಗೆ ಮತ್ತು ಶ್ರೀಮಂತರಿಗೆ ಇಷ್ಟೊಂದು ಸಾಲ ನೀಡುತ್ತಿದ್ದು, ನಿಜವಾದ ಬಡ ರೈತರಿಗೆ ಸಾಲ ನೀಡುತ್ತಿಲ್ಲ ಎಂದರು.
ತಾಲೂಕಿನ ಅನೇಕ ಬ್ಯಾಂಕ್‌ಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲ ನೀಡದೆ ಸತಾಯಿಸಲಾಗುತ್ತಿದ್ದು, ನಿಯಮದಂತೆ ಸಾಲ ನೀಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳುಳ್ಳ ಬೆಂಗಳೂರನ ಸಿಸಿಬಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಒಕ್ಕೂಟದ ಮುಖಂಡರಾದ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಬಸವರಾಜ ಕವಡಿಮಟ್ಟಿ, ಕೇಶಣ್ಣ ದೊರೆ, ಕೃಷ್ಣಾ ದಿವಾಕರ, ದೇವಪ್ಪ ದೇವರಮನಿ ಇದ್ದರು.