ಬೆಂಗಳೂರು: ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ನೀಡುವ ಉದ್ದೇಶದಿಂದ ಆರಂಭಿಸಿರುವ ಬೆಂಗಳೂರು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ವಿದ್ಯಾರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ನೇಮಕಾತಿಗೆ ಸಂಬಂಧಿಸಿದಂತೆ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬರಬೇಕಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ರವಾನೆ ಮಾಡುತ್ತಿಲ್ಲ ಎಂದು ಅಭ್ಯರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ(ಜು. 30) ಇಂಟಿಗ್ರೇಟೆಡ್ ಎಂ.ಎಸ್ಸಿ ಕೋರ್ಸ್‌ಗೆ ದಾಖಲಾತಿಗೆ ಸಂಬಂಧಿಸಿದಂತೆ ಒರಿಯಂಟೇಷನ್ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸಂಜೆ ಇ-ಮೇಲ್ ಮಾಡಿದ್ದಾರೆ. ಇದು ಬೆಂಗಳೂರು ಹೊರವಲಯ ಹಾಗೂ ಬೇರೆ ಜಿಲ್ಲೆ, ರಾಜ್ಯಗಳಿಂದ ಬರಬೇಕಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಬಾರದು ಎಂಬ ದುರುದ್ದೇಶದಿಂದ ಆಡಳಿತ ಮಂಡಳಿಯವರೇ ಹೀಗೆ ಮಾಡುತ್ತಿದ್ದಾರೆ ಎಂದು ಇನ್ನೋರ್ವ ಅಭ್ಯರ್ಥಿ ಆರೋಪಿಸಿದರು. ಈ ಸಂಸ್ಥೆಯನ್ನು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾದರಿಯಲ್ಲಿ ರಚನೆ ಮಾಡಿ, ಅಲ್ಲಿನ ಗುಣಮಟ್ಟದ ಶಿಕ್ಷಣವನ್ನೇ ನೀಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಆರಂಭಿಸಿತು.
ಆದರೆ, ಈವರೆಗೂ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಅಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯವೂ ಇಲ್ಲ. ಆಡಳಿತ ಮಂಡಳಿ ಇದ್ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.