Advertisement

ಹೊರನಾಡ ಕನ್ನಡಿಗರಿಗಾಗಿ ಜೈಲಿಗೆ ಹೋಗಲೂ ಸಿದ್ಧ

03:03 PM Apr 10, 2017 | Team Udayavani |

ಧಾರವಾಡ: ಹೊರನಾಡ ಕನ್ನಡಿಗರ ಮತ್ತು ಕನ್ನಡ ರಕ್ಷಣೆಗೆ ಕನ್ನಡದ ಕಟ್ಟಾಳುಗಳು ಜೈಲಿಗೂ ಹೋಗಲೂ ಸಿದ್ಧ ಎಂದು ಸಾಹಿತಿ ಮೋಹನ ನಾಗಮ್ಮನವರ ಹೇಳಿದರು. ಹೈದರಾಬಾದ್‌ನ ಮೌಲಾನಾ ಆಝಾಧ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಸಭಾಭವನದಲ್ಲಿ ನಡೆದ ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ 7ನೇ ಮಹಾಮೇಳದ ಗಡಿನಾಡು ಮತ್ತು ಹೊರನಾಡಿನಲ್ಲಿ ಕನ್ನಡ- ಕನ್ನಡಿಗರ ಮಾತು-ಕತೆ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

Advertisement

ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಸಂಕಲ್ಪ ತೊಡಬೇಕಾದ ಅವಶ್ಯಕತೆ ಇದೆ. ಹೊರನಾಡ ಕನ್ನಡಿಗರು ಒಬ್ಬಂಟಿಗಳಲ್ಲ, ಅವರ ಜತೆ ನಾವಿದ್ದೇವೆ ಎಂದರು. ಕನ್ನಡಿಗರ ಕೈ ಬಲಪಡಿಸಲು ಕನ್ನಡ ಕಟ್ಟಾಳುಗಳು ಅದರಲ್ಲೂ ಕರ್ನಾಟಕ ವಿದ್ಯಾವರ್ಧಕ ಸಂಘ ಸದಾ ಮುಂದಿರುತ್ತದೆ.

ಗಡಿ ಅಭಿವೃದ್ಧಿ ಪ್ರಾಧಿಧಿಕಾರದ ಅಧ್ಯಕ್ಷರನ್ನಾಗಿ ಜೋಕರ್‌ಗಳನ್ನು ಸರಕಾರ ನೇಮಕ ಮಾಡುತ್ತಿದೆ. ಹೀಗಾಗದೇ, ಗಡಿನಾಡು ಕನ್ನಡಿಗರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಯುವ ಧುರೀಣ ಗುರುರಾಜ ಹುಣಸಿಮರದ ಮಾತನಾಡಿ, ಹೊರನಾಡ ಮತ್ತು ಗಡಿನಾಡಿನಲ್ಲಿ ವಾಸಿಸುವ ಕನ್ನಡಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ.

ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಒಳನಾಡ ಕನ್ನಡಿಗರು ಸರಕಾರದ ಕಿವಿ ಹಿಂಡುವ ಮೂಲಕ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಇನ್ನು ಪ್ರಸ್ತುತ ನಡೆಸಲಾಗುತ್ತಿರುವ ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳದ ಹೆಸರನ್ನು ಬದಲಾಯಿಸಬೇಕೆಂಬ ಆಶಯ ವ್ಯಕ್ತಪಡಿಸಿದರಲ್ಲದೆ, ರಾಷ್ಟ್ರೀಯ ಹೊರನಾಡ ಕನ್ನಡಿಗರ ಸಮ್ಮೇಳನ ಹೆಸರಿಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹೊರನಾಡು ಮತ್ತು ಗಡಿನಾಡು ಪ್ರದೇಶಗಳಿಂದ ಆಗಮಿಸಿದ ಡಾ| ಅರವಿಂದ ಯಾಳಗಿ, ಗದ್ಗಿಹಳ್ಳಿ ಗುರುಬಸವರಾಜ, ಡಾ| ಸದಾನಂದ ಬಿಳ್ಳೂರ, ಶಿವರಾಮ ಕಾಸರಗೋಡ, ಎನ್‌.ಎ. ವಾಲೆ, ವೀರನಗೌಡ ಪಾಟೀಲ, ನಾರಾಯಣ ಕುಲಕರ್ಣಿ ಸೇರಿದಂತೆ ಹಲವಾರು ಪ್ರತಿನಿಧಿಗಳು,ಅಲ್ಲಿನ ಸ್ಥಿತಿ-ಗತಿ ಮತ್ತು ಸಮಸ್ಯೆಗಳನ್ನು ವಿವರಿಸಿದರು. 

Advertisement

ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಸತೀಶ ತುರುಮರಿ, ಗುರು ತಿಗಡಿ, ಚಂದ್ರಶೇಖರ ರಾಯರ, ಸರೋಜಾ ದೇಸಾಯಿ, ಪೊ| ಐ.ಜಿ. ಸನದಿ, ಶಿವಣ್ಣ ಬೆಲ್ಲದ, ಶ್ರೀಶೈಲ ಹುದ್ದಾರ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next