ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರದಿಂದ ಮೂರು ದಿನ “ಬೆಂಗಳೂರು ತಂತ್ರಜ್ಞಾನ ಸಮ್ಮೇಳನ’ (ಬೆಂಗಳೂರು ಟೆಕ್ ಸಮ್ಮಿಟ್) ನಡೆಯಲಿದ್ದು, ದೇಶೀಯ ಮಾತ್ರವಲ್ಲದೇ ಜಾಗತಿಕ ಮಟ್ಟದ ಅತ್ಯುನ್ನತ ತಂತ್ರಜ್ಞಾನ ಪರಿಣತಿ ಸಂಸ್ಥೆಗಳೊಂದಿಗೆ ವಿಚಾರ ಮಂಥನಕ್ಕೆ ಕ್ಷಣಗಣನೆ ಶುರುವಾಗಿದೆ.
ಬೆಂಗಳೂರು ಅರಮನೆಯಲ್ಲಿ ನಡೆಯುವ ಸಮ್ಮೇಳನವು 20ನೇ ಬೆಂಗಳೂರು ಐಟಿಇ.ಬಿಜ್, 17ನೇ ಆವೃತ್ತಿಯ ಬೆಂಗಳೂರು ಬಯೋ ಹಾಗೂ ಬೆಂಗಳೂರು ಮೇಕರ್ ಫೇರ್‌ನ 3ನೇ ಆವೃತ್ತಿಯ ಸಮಾಗಮಕ್ಕೆ ಸಾಕ್ಷಿಯಾಗಿರುವುದು ಈ ಬಾರಿಯ ವಿಶೇಷ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಟೆಕ್ ಸಮ್ಮಿಟ್- ಹೊಸ ಯೋಚನೆ, ನಾವೀನ್ಯತೆ ಹಾಗೂ ಅನ್ವೇಷಣೆ (ಐಡಿಯೇಟ್, ಇನ್ನೋವೇಟ್, ಇನ್‌ವೆಂಟ್) ಧ್ಯೇಯವಾಕ್ಯದೊಂದಿಗೆ ರೂಪುಗೊಂಡಿದೆ.
ದುಂಡು ಮೇಜಿನ ಸಭೆ: ಸಮ್ಮೇಳನದಲ್ಲಿ ಪ್ರತಿಷ್ಠಿತ ಕಂಪನಿಗಳ ಸಿಇಒಗಳ ದುಂಡು ಮೇಜಿನ ಸಭೆ ನಡೆಯಲಿದೆ. ಆಯ್ದ ಉದ್ಯಮ ಕ್ಷೇತ್ರದಲ್ಲಿನ ಅವಕಾಶಗಳು, ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ನಾನಾ ಕ್ಷೇತ್ರದ ತಾಂತ್ರಿಕ ತಜ್ಞರು, ಸಂಶೋಧಕರು, ಹೂಡಿಕೆದಾರರು, ನೀತಿ ನಿರೂಪಕರು ಒಂದೇ ವೇದಿಕೆಯಲ್ಲಿ ಸಂವಾದ ನಡೆಸಲಿದ್ದಾರೆ.
ಸಂವಾದ ಮಾತ್ರವಲ್ಲದೇ ಅಪರೂಪದ ತಂತ್ರಜ್ಞಾನ, ಸುಧಾರಿತ ಬೆಳವಣಿಗೆಗಳ ಬಗ್ಗೆ ಪರಿಚಯ ನೀಡಿಕೆಗೂ ಅವಕಾಶವಿರಲಿದೆ. ಸ್ಯಾಮ್‌ಸಂಗ್, ಐಬಿಎಂ, ಎಬಿಬಿ, ನ್ಯಾಸ್ಕಾಂ, ವೋಲ್ವೋ ಇಂಡಿಯಾ, ಜಿಇ ಏವಿಯೇಷನ್ ಇತರೆ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದು ಇಲಾಖೆ ಹೇಳಿದೆ.
ಒಂದೇ ವೇದಿಕೆ: ನಾನಾ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿ ಗಳಿಸಿರುವ ಕಂಪನಿಗಳ ನಡುವೆ ಉತ್ತಮ ಸಂವಹನವಿದ್ದರೆ ಹೆಚ್ಚು ಅನುಕೂಲವಾಗಲಿದೆ. ಈ ವಾತಾವರಣ ಸೃಷ್ಟಿಗಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನವನ್ನು ಒಂದೇ ವೇದಿಕೆಯಡಿ ತರಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಗ್ ಖರ್ಗೆ ತಿಳಿಸಿದರು.
ಕರ್ನಾಟಕವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂತೆ ಅನ್ವೇಷಣಾ ವಲಯದಲ್ಲೂ ಪ್ರಾವೀಣ್ಯತೆ ಗಳಿಸುವ ನಿಟ್ಟಿನಲ್ಲಿ ಐಟಿ ಸಮ್ಮಿಟ್ ಸಹಯಕಾರಿಯಾಗಲಿದೆ. ಆ ಮೂಲಕ ಮುಂದಿನ 10 ವರ್ಷಗಳಲ್ಲಿ ಕರ್ನಾಟಕ ತಂತ್ರಜ್ಞಾನ ಬೆಳವಣಿಗೆಗೆ ಆಯ್ಕೆ ಮಾಡಿಕೊಳ್ಳಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಲು ನೆರವಾಗಲಿದೆ ಎಂದು ಹೇಳಿದರು. ಸಂಶೋಧಕರು, ನೀತಿ ನಿರೂಪಕರು ಆಯ್ದ ವಿಭಾಗಗಳಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.