ಉಡುಪಿ: ಹೊರ ರಾಜ್ಯದ ವಿದ್ಯಾರ್ಥಿಗಳು, ಯಕ್ಷಗಾನದ ಮೇಲಿನ ಅಭಿಮಾನ, ಪ್ರೀತಿಯಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಮಣಿಪಾಲ ಮಾಹೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುವಾಹಟಿ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶದ ಮೂಲದವರು ಒಂದು ತಿಂಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಇವರು ರಂಗಭೂಮಿ, ಜಾನಪದ ಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಾಗಿದ್ದಾರೆ. ತರಬೇತಿ ಅವಧಿ ದಿನಕ್ಕೆ 12 ಗಂಟೆಯಾಗಿದ್ದು, ನಾಟ್ಯ ಶಾಸ್ತ್ರಗಳಿಗೆ ಪೂರಕವಾಗಿ, ಯಕ್ಷಗಾನ ಕಲೆಯ ವಿವಿಧ ಆಯಾಮದ ಪ್ರಾಥಮಿಕ ತರಬೇತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. 14 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಬಿ.ವಿ ಕಾರಂತರು 1979ರಲ್ಲಿ ದಿಲ್ಲಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮ್ಯಾಕ್‌ಬೆಥ್ ನಾಟಕದಲ್ಲಿ ಯಕ್ಷಗಾನ ನಾಟ್ಯ ಪ್ರಕಾರ ಅಳವಡಿಸಿಕೊಂಡು ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದರು. ತರಬೇತಿಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಈ ವಿದ್ಯಾರ್ಥಿಗಳು ಯಕ್ಷ ನಾಟ್ಯ ಶಾಸ್ತ್ರಗಳನ್ನು ರಂಗಭೂಮಿಕೆಯಲ್ಲಿ ಪ್ರಯೋಗಿಸುವ ಉತ್ಸಾಹ ಹೊಂದಿದ್ದಾರೆ. ತನ್ಮೂಲಕ ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಯಕ್ಷಗಾನ ಕಲೆಗಳ ಪರಿಚಯವಾಗಲಿದೆ.
ಕೇಂದ್ರದಲ್ಲಿ ಏನೇನು ಕಲಿಕೆ ? :
ಯಕ್ಷಗಾನದ ನೃತ್ಯ ಕಲೆಗಳಲ್ಲಿ 8 ಬಗೆಯಲ್ಲಿರುವ ಪ್ರಯಾಣ ಕುಣಿತ, ಜಲಕ್ರೀಡೆ, ಯುದ್ದ ನೃತ್ಯ, ರಥದ ಕುಣಿತ, ಜಾರುಗುಪ್ಪೆ, ಗಿಳಿ ಕುಣಿತ ಸಹಿತ ಹಲವು ನೃತ್ಯ ಪ್ರಕಾರಗಳನ್ನು ಕಲಿಸಲಾಗುತ್ತಿದೆ. ಜತೆಗೆ ತಾಳ ಮತ್ತು ಸ್ವರ ಶಾಸ್ತ್ರ, ವೇಷ, ಭೂಷಣಗಳ ಮಾಹಿತಿ ನೀಡಲಾಗುತ್ತದೆ. ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ನಾಗಮಂಡಲ, ಭೂತಾರಾಧನೆ, ಕೋಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರು ಸಂಜೀವ ಸುವರ್ಣ ಅವರ ನೇತೃತ್ವದಲ್ಲಿ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಶ್ರೀಧರ ಹೆಗ್ಡೆ, ಕೈಲಾಶ್, ಲೋಹಿತ್, ನಿಶ್ಚಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಅಲ್ಲಿನ ನಾನಾ ಪ್ರಕಾರದ ನಾಟಕ ಕಲೆಗಳಿಗೆ ಯಕ್ಷಗಾನ ನಾಟ್ಯ ಪ್ರಕಾರಗಳ ಸ್ಪರ್ಶ ಒಂದು ವಿಶೇಷ ಪ್ರಯತ್ನವಾಗಿದ್ದು, ಬಹುತೇಕ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ .
-ಸಂಜೀವ ಸುವರ್ಣ,, ಯಕ್ಷಗಾನ ಕೇಂದ್ರದ ಗುರು