ಮತದಾನದ ಬಗ್ಗೆ ತಿಳಿದುಕೊಳ್ಳಬೇಕಾ? ಹಾಗಾದ್ರೆ, ಚಿಂತೆ ಬಿಡಿ. ಈ ಬಾರಿಯ ಚುನಾವಣೆಯಲ್ಲಿ ಸ್ವತಃ ಚುನಾವಣಾ ಆಯೋಗವೇ ಪ್ರತಿಯೊಂದು ಮನೆಗೆ “ಓಟರ್ ಗೈಡ್’ ತಲುಪಿಸಲಿದೆ. ಮತದಾನದ ದಿನಾಂಕಕ್ಕಿಂತ ಸಾಕಷ್ಟು ಮುಂಚಿತವಾಗಿ ಮತಗಟ್ಟೆ ಅಧಿಕಾರಿಗಳು ಓಟರ್ ಗೈಡ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಂದು ಕೊಡಲಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಈ ಕೈಪಿಡಿಯಲ್ಲಿ ಮತದಾನದ ದಿನಾಂಕ, ಸಮಯ, ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸುವ ವಿಳಾಸ ಮತ್ತು ದೂರವಾಣಿ, ಮೊಬೈಲ್ ಸಂಖ್ಯೆ, ಪ್ರಮುಖ ವೆಬ್‌ಸೈಟ್‌ಗಳ ಮಾಹಿತಿ, ಸಹಾಯವಾಣಿ ಸಂಖ್ಯೆಗಳು, ಮತಗಟ್ಟೆಗೆ ಹೋದಾಗ ನಿಮ್ಮಲ್ಲಿ ಇರಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಈ ಓಟರ್ ಗೈಡ್‌ನಲ್ಲಿ ಮಾಹಿತಿ ಇರುತ್ತದೆ.
ಅದಲ್ಲದೇ ಮತಗಟ್ಟೆಗಳಲ್ಲಿ ಮತದಾರರು ಏನು ಮಾಡಬೇಕು ಮತ್ತು ಏನು ಮಾಡಬಾರದೆಂಬ ವಿಷಯಗಳ ಮಾಹಿತಿ ಈ ಕೈಪಿಡಿಯಲ್ಲಿ ಕೊಡಲಾಗಿರುತ್ತದೆ. ಮತಗಟ್ಟೆ ಅಧಿಕಾರಿಗಳು ಮತದಾರರಿಗೆ ಭಾವಚಿತ್ರ ಸಹಿತ ಮತದಾರ ಚೀಟಿ (ಫೋಟೋ ಓಟರ್ ಸ್ಲಿಪ್) ಹಂಚುವ ವೇಳೆ ಈ ಓಟರ್ ಗೈಡ್‌ನ್ನು ಸಹ ಹಂಚುತ್ತಾರೆ.
ಮತದಾನ ಪ್ರಮಾಣ ಶೇ.75ಕ್ಕೆ ಹೆಚ್ಚಿಸುವ ಗುರಿ ಇಟ್ಟುಕೊಂಡಿರುವ ಚುನಾವಣಾ ಆಯೋಗ “ಯಾವೊಬ್ಬ ಮತದಾರ ಮತ ಚಲಾಯಿಸುವಿಕೆಯಿಂದ’ ವಂಚಿತರಾಗಬಾರದು ಅನ್ನುವುದು ಆಯೋಗದ ಕಾಳಜಿ. ಆದ್ದರಿಂದ ಕೊನೇ ಕ್ಷಣದಲ್ಲಿ ಎದುರಾಗುವ ಸಮಸ್ಯೆ, ಗೊಂದಲ ಹಾಗೂ ಮಾಹಿತಿಯ ಕೊರತೆಯಿಂದ ಅನೇಕರು ಮತಗಟ್ಟೆಗೆ ಹೋಗಲು ಹಿಂದೇಟು ಹಾಕುತ್ತಾರೆ.
ಹಾಗಾಗಿ, ಮತದಾರರಿಗೆ ಮತದಾನಕ್ಕಿಂತ ಮುಂಚಿತವಾಗಿ ಎಲ್ಲ ರೀತಿಯ ಮಾಹಿತಿ ಒದಗಿಸುವುದು ಆಯೋಗದ ಜವಾಬ್ದಾರಿ. ಆ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸ್ವತಃ ಆಯೋಗವೇ ಪ್ರತಿಯೊಬ್ಬ ಮತದಾರರಿಗೆ ಕೈಪಿಡಿ ನೀಡಲಿದೆ.