Advertisement
ಅಂದರೆ ತನ್ನಲ್ಲಿ ತಾನು ಮುಳುಗುವುದು!
Related Articles
Advertisement
ಉಪನಿಷತ್ತು ಪ್ರಯೋಗಪರ. ಅದು ಇಂದ್ರಿಯ ವಿರೋಧಿಯಲ್ಲ. ಬದಲಾಗಿ ಇಂದ್ರಿಯ ಪ್ರಪಂಚವೇ ಸರ್ವಸ್ವ ಎಂದು ಬಗೆಯುವುದೇ ನಿಜವಾಗಿ ಇಂದ್ರಿಯ ವಿರೋಧಿಯಾದ್ದು- ಏಕೆಂದರೆ, ಈ ನಿಲುವು ಇಂದ್ರಿಯಗಳ ನಿಜವಾದ ಸಾಮರ್ಥ್ಯವನ್ನು ಅಲ್ಲಗಳೆದಂತೆ ಎಂಬ ನಿಲುವು- ಉಪನಿಷತ್ತಿನದು. ಇಂದ್ರಿಯಗಳು ಹೊರಮುಖವಾಗಿರುವಂತೆ ಒಳಮುಖವೂ ಆಗಬಲ್ಲುದು. ನಿಜಕ್ಕಾದರೆ, ಅವು ಒಳಮುಖವೇ ಆಗಿದ್ದವು; ಈ ಲೋಕಕ್ಕೆ ಬಂದ ಮೇಲೆ ಹೊರಮುಖವಾದವು, ಹೊಸಮುಖವಾಗಿ ಇರುವುದೇ ಅವುಗಳ ಸ್ವಭಾವವೆನ್ನುತ್ತಾರಲ್ಲ- ಒಳಮುಖವಾಗಿರುವುದೂ ಅವುಗಳ ಸ್ವಭಾವವೇ ಎಂದು ಉಪನಿಷತ್ತು ಅರ್ಥಮಾಡಿಕೊಂಡಿದೆ. ‘ಸ್ವಭಾವ’ ಎನ್ನುವಲ್ಲಿ ಯಾವುದನ್ನು ನೋಡಿದುವೋ ಅದನ್ನು ಕನ್ನಡಿಯಂತೆ ಪ್ರತಿಫಲಿಸುವುದು ಈ ಇಂದ್ರಿಯ, ಮನಸ್ಸುಗಳ ಸ್ವಭಾವ ಎನ್ನುವುದೇ ಉಪನಿಷತ್ತಿಗೆ ತಿಳಿದುಬಂದ ಮೊದಲ ನಿಜ. ಇವು ಪ್ರತಿಫಲನ ಮಾಡುವ ಯಂತ್ರಗಳೇ ನಿಜ. ಲೋಕವನ್ನು ನೋಡಿ ಅದರಂತೆ ಆಗಬೇಕೆಂಬ ಪ್ರೇರಣೆ ಹುಟ್ಟುವಲ್ಲಿ- ‘ಅದರಂತೆ’ ಅಂದರೇನು? ನಮ್ಮ ಕಣ್ಣು ನೋಡಿದ್ದು ಒಂದು ‘ದೃಶ್ಯ’ವನ್ನು. ‘ದೃಶ್ಯ’ವೆಂದರೆ ನೋಡುವುದಕ್ಕೆ ಯೋಗ್ಯವಾದದ್ದು ಎಂದೇ ಅರ್ಥ. ಅಂದರೆ- ಕಣ್ಣುಬಿಟ್ಟರೆ ಕಾಣುತ್ತದೆ ಎಂದು! ಈ ದೃಶ್ಯದ ‘ಚಿತ್ರ’ ನಮ್ಮಲ್ಲಿ ನೆಲಸಿತು. ಅಂದರೆ ನೋಡಿದ್ದ ಪ್ರತಿಫಲನ! ನೋಡಿದ್ದರ ನೆರಳು! ಮನಸ್ಸೆಂದರೆ ಇಂಥ ಚಿತ್ರಗಳು! ಚಿತ್ರಶಾಲೆ! ಯಾವುದನ್ನು ನೋಡಿದೆವೋ ಅದರಂತೆ ಆಗುವೆವು ಎನ್ನುತ್ತಾರಲ್ಲ- ಅಂದರೆ ಏನು ನೋಡಿದೆವೋ ಅದರ ಚಿತ್ರಗಳು ನಾವು.copyಗಳು ! ಪ್ರತಿಗಳು! ನಾವು ಸ್ವತಂತ್ರ ವ್ಯಕ್ತಿಗಳೆಂದುಕೊಳ್ಳುವ ಪ್ರತಿಗಳು- ಅಷ್ಟೆ. ಹೊರಲೋಕದ ಈ ಪ್ರತಿಫಲನ ವ್ಯಾಪಾರದಂತೆಯೇ ಒಳಲೋಕದ್ದೂ ಪ್ರತಿಫಲನವೇ. ಅಂದರೆ, ಒಳಗಿನ ಪ್ರೇರಣೆಗೆ ಸ್ಪಂದಿಸುವುದೆಂದರೆ ಅದನ್ನು ತನ್ನಲ್ಲಿ ಪ್ರತಿಫಲಿಸುವುದೇ.
ಒಳಗಿನ ಪ್ರೇರಣೆಗೆ ಸ್ಪಂದಿಸುವಾಗ ಮಾತ್ರ ನಿಜದ ಅರಿವು. ನಿಜದ ಅರಿವಾದಾಗ ಮಾತ್ರ ನಿಜ ಹೇಳುವ ಉತ್ಸಾಹ. ಏಕೆನ್ನುವಿರೋ- ಹೊರಲೋಕದಲ್ಲಿ ನಾವು ಸ್ವತಂತ್ರ ವ್ಯಕ್ತಿಗಳೆಂದು ಭಾವಿಸಿಕೊಂಡಿಲ್ಲವೆ? ಹಾಗಲ್ಲವೆಂದು ಸ್ವಲ್ಪ ಮಟ್ಟಿಗೆ ತಿಳಿದಿದ್ದರೂ ಸ್ವತಂತ್ರ ವ್ಯಕ್ತಿಗಳೆಂದೇ ನಟಿಸುತ್ತಿಲ್ಲವೆ? ಹೊರಲೋಕದಲ್ಲಿ, ಸ್ವತಂತ್ರರಲ್ಲವೆನ್ನುವ ಸ್ಥಿತಿ ದುಃಖ ದಾಯಕವಲ್ಲವೆ? ಆದುದರಿಂದಲೇ, ಹೊರಲೋಕದ ಅರಿವು ನಿಜವಾದ ಅರಿವಲ್ಲ. ಅದು ನಾಟಕೀಯವಾದ ಅರಿವು. ಒಳಗಿನ ಪ್ರೇರಣೆಗೆ ಒಳಗಾಗಿ ಅದನ್ನು ಪ್ರತಿಫಲಿಸುವಲ್ಲಿ , ತಾನು ಪ್ರತಿಫಲನ, ತಾನು ಸ್ವತಂತ್ರನಲ್ಲ, ತಾನೊಂದು ನೆರಳಿನಂತೆ, ಗೊಂಬೆಯಂತೆ ಎಂಬ ಅರಿವು ಬಂದಾಗ- ಹಾಗೆಂದೇ ಅದನ್ನು ಉಗ್ಗಡಿಸುವ ಉತ್ಸಾಹ. ತಾನು ಸ್ವತಂತ್ರನಲ್ಲ ಎಂದು ಸಾರುವ ಉತ್ಸಾಹ. ತನ್ನ ಅಸ್ವಾತಂತ್ರ್ಯವನ್ನು ಸಾರುವ ಮೂಲಕವೇ ‘ಸ್ವತಂತ್ರ’ವಾದದ್ದು ಇನ್ನೊಂದಿದೆ ಎಂದು ಸೂಚಿಸುವ ಉತ್ಸಾಹ! ಈ ಸಂಭ್ರಮವನ್ನು ಏನೆನ್ನೋಣ!
ಇದೊಂದು ಸಂಭ್ರಮವೇ ನಿಜ. ಏಕೆಂದರೆ, ಈಗ ಇಂದ್ರಿಯಗಳಿಗೆ ಲೋಕ ಅವುಗಳ ಮೇಲೆ ಹೇರಿದ ಮಿತಿಯಿಂದ ಬಿಡುಗಡೆ. ಉಪನಿಷತ್ತೆಂದರೆ- ಬಿಡುಗಡೆಗೊಂಡ ಇಂದ್ರಿಯಗಳ ಹಾಡು. ಹಾಗೆ ಕೇಳಿದರೆ ಇಂದ್ರಿಯಗಳನ್ನು ಬಿಡುಗಡೆಗೊಳಿಸಬಲ್ಲ ಹಾಡು ಕೂಡ. ಕೇನೋಪನಿಷತ್ತು ಅಥವಾ ತಲವಕಾರೋಪನಿಷತ್ತು ಎಂದು ಪ್ರಸಿದ್ಧವಿರುವ ಉಪನಿಷತ್ತಿನ ಮೊದಲ ನುಡಿ ಇದು:
ಕೇನೇಷಿತಂ ಪತತಿ ಪ್ರೇಷಿತಂ ಮನಃ
ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ
ಕೇನೇಷಿತಾಂ ವಾಚಮಿಮಾಂ ವದಂತಿ
ಚಕ್ಷುಃ ಶ್ರೋತ್ರಂ ಕ ಉ ದೇವೋ ಯುನಕ್ತಿ
ಮನಸ್ಸು ವಿಷಯಗಳತ್ತ ಹರಿಯುತ್ತದಲ್ಲ, ಯಾರ ಇಷ್ಟದಂತೆ, ಯಾರು ಪ್ರೇರಿಸುವಂತೆ ಇದು ನಡೆದುಕೊಳ್ಳುತ್ತಿದೆ? ಈ ಉಸಿರಾಟ? ಯಾರು ನಡೆಸುತ್ತಿರುವುದು? ಮತ್ತು ಮಾತು? ಯಾರು ಮಾತನಾಡಿಸುತ್ತಿರುವುದು? ಇದು ಯಾರ ಇಚ್ಛೆ? ನಮ್ಮ ಕಣ್ಣು-ಕಿವಿಗಳಿಂದ ಕೆಲಸ ತೆಗೆದುಕೊಳ್ಳುತ್ತಿರುವ ದೇವನಾರು?
ನಮ್ಮ ಮನಸ್ಸು-ಇಂದ್ರಿಯಗಳು ಅದಾವುದೋ ಇನ್ನೊಂದರಿಂದ ಪ್ರೇರಿಸಲ್ಪಡುತ್ತಿವೆ ಎಂಬ ಅನುಭವದಿಂದ ಹುಟ್ಟಿಕೊಂಡ ನುಡಿ ಇದು. ಇಂದ್ರಿಯ ವ್ಯಾಪಾರಗಳು ನಡೆಯುತ್ತಿರುವಂತೆಯೇ ಈ ಒಳಗಿನ ಪ್ರೇರಣೆಯನ್ನು ಅನುಭವಿಸುತ್ತಿರುವ ಮಾತು ಇದು. ಇದು ಪುಲಕಗೊಳಿಸುವ ಸಂಗತಿ. ಅಂದರೆ ಅನುಭವಿಸುತ್ತಿರುವಂತೆಯೇ- ಈ ಪ್ರಕ್ರಿಯೆಯನ್ನೆ ಉಪನಿಷತ್ತು ಹೇಳುತ್ತಿದೆ. ಅನುಭವದ ಜೊತೆಗೆ ಇದರ ಹಿನ್ನೆಲೆಯ ಕುರಿತಾದ ಎಚ್ಚರವೂ ಇಲ್ಲಿ ಕಾಣುತ್ತಿದೆ. ಕೇನೇಷಿತಾಂ ವಾಚಮಿಮಾಂ ವದಂತಿ ಎಂಬ ಮಾತಿದೆ. ಜನ ಮಾತನಾಡುತ್ತಿರುವುದು ಯಾರ ಇಷ್ಟದಂತೆ? ಈ ಮಾತು, ಜನದ ಮಾತನ್ನು ಯಾವ ರೀತಿಯಲ್ಲೂ ನಿರಾಕರಿಸದೆ, ಆದರೆ ಅದರ ಹಿಂದಿನ ಪ್ರೇರಣೆಯ ಕುರಿತು ಎಚ್ಚರಗೊಳಿಸುವ ಮಾತು. ಮಾತಿನ ಅರ್ಥವನ್ನು ಹುಡುಕಬೇಕಾದುದೆಲ್ಲಿ? ಹೊರ ಜಗತ್ತಿನಲ್ಲಿಯೆ? ಅಥವಾ ಅದನ್ನು ಪ್ರೇರಿಸುತ್ತಿರುವ ಒಳಜಗತ್ತಿನಲ್ಲಿಯೆ? ಮಾತಿನ ಒಳ ಸೂತ್ರಗಳೆಲ್ಲಿವೆ?
ಉಪನಿಷತ್ತಿನ ಈ ಮಾತು ತನ್ನ ಬಗೆಯೇ ಹೇಳಿಕೊಂಡ ಮಾತು. ತನ್ನ ಬಗ್ಗೆ ಹೇಳುತ್ತಲೇ ತನ್ನನ್ನು ನಿರಾಕರಿಸುವ ಮಾತೂ ಹೌದು. ತನ್ನನ್ನು ನಿರಾಕರಿಸುತ್ತಲೇ ಇನ್ನೊಂದನ್ನು ಸೂಚಿಸುವ ಮಾತೂ ಹೌದು. ಒಳಜಗತ್ತಿನ ಒಂದು ವಿಲಕ್ಷಣವಾದ ಒಡನಾಟವನ್ನು ಸೂಚಿಸುವ ಮಾತು. ಈ ಒಡನಾಟವೇ ಈ ಮಾತಿನ ಅರ್ಥ. ಅದನ್ನು ಅರ್ಥ. ಅದನ್ನು ಅರ್ಥ ಎನ್ನುವುದಕ್ಕಿಂತ ಅನುಭವ ಎನ್ನುವುದೇ ಸರಿ!
-ಲಕ್ಷ್ಮೀಶ ತೋಳ್ಪಾಡಿ