Advertisement

ಪಶುಪಾಲನಾ ಇಲಾಖೆಯಲ್ಲಿ ಅವಧಿ ಮೀರಿದ ಔಷಧಿ!

03:04 PM Aug 23, 2019 | Suhan S |

ಕೋಲಾರ: ಪಶು ಪಾಲನಾ ಇಲಾಖೆಯು ಅವಧಿ ಮುಗಿದಿರುವ ಔಷಧಿಗಳನ್ನು ದಾಸ್ತಾನು ಮಾಡಿರುವುದು ಕಂಡು ರೊಚ್ಚಿಗೆದ್ದ ರೈತ ಸಂಘದ ಕಾರ್ಯಕರ್ತರು ಕೂಡಲೇ ಹೊಸ ಔಷದಿಗಳನ್ನು ಸರಬರಾಜು ಮಾಡಬೇಕೆಂದು ಅಗ್ರಹಿಸಿ ಪ್ರತಿಭಟಿಸಿದರು.

Advertisement

ಪಶುಪಾಲನಾ ಇಲಾಖೆಯಲ್ಲಿ ರೈತರಿಗೆ ವಿತರಣೆ ಮಾಡದೆ ಅವಧಿ ಮುಗಿದ ಔಷಧಿಗಳಿರುವುದು ಪತ್ತೆಯಾಗಿದ್ದು, ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿದ ರೈತ ಸಂಘವು, ಪಶುಪಾಲನಾ ಇಲಾಖೆಯ ಮುಂದೆ ಪ್ರತಿಭಟಿಸಿ, ಉಪ ನಿರ್ದೇಶಕರಿಗೆ ಮನವಿ ನೀಡಿದರು.

ಗ್ರಾಮೀಣ ಪ್ರದೇಶದ ಸೇವೆ ಮಾಡದೆ ನಾಪತ್ತೆಯಾಗಿರುವ ಸರ್ಕಾರಿ ಪಶು ವೈದ್ಯರನ್ನು ಹುಡುಕಿಕೊಡಬೇಕು ಮತ್ತು ಕಳಪೆ ಗುಣಮಟ್ಟದ ಹಿಂಡಿ ಬೂಸ ಮಾರಾಟ ಮಾಡುವ ಖಾಸಗಿ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಸರ್ಕಾರಕ್ಕೆ ದ್ರೋಹ: ಹೋರಾಟದ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಲಕ್ಷಾಂತರ ರೂ. ಮೌಲ್ಯದ ಪಶು ಔಷಧಿಗಳನ್ನು ಕೊಠಡಿಯಲ್ಲಿ ಕೊಳೆಯುತ್ತಿದ್ದರು ಸಮರ್ಪಕವಾಗಿ ಸರಬರಾಜು ಮಾಡದೆ ದೂಳಿಡಿಯುವಂತೆ ಮಾಡಿದ್ದಾರೆ. ವೈದ್ಯರನ್ನು ಕೇಳಿದರೆ ಔಷಧಿ ಸರಬರಾಜು ಆಗುತ್ತಿಲ್ಲ ಎಂದು ಖಾಸಗಿ ವಲಯಕ್ಕೆ ಚೀಟಿಗಳನ್ನು ಬರೆದುಕೊಡುತ್ತಾರೆ. ಕೇಂದ್ರ ಸ್ಥಾನವಾದ ಪಶುಪಾಲನಾ ಇಲಾಖೆಯಲ್ಲಿ ಅವಧಿ ಮುಗಿದಿರುವ ಔಷಧಿಗಳನ್ನು ದಾಸ್ತಾನು ಮಾಡಿ ರೈತರಿಗೂ, ಸರ್ಕಾರಕ್ಕೂ ದ್ರೋಹ ಬಗೆದಿದ್ದಾರೆ ಎಂದು ದೂರಿದರು.

ವೈದ್ಯರ ಬೇಜವಾಬ್ದಾರಿ: ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುವ ಜೊತೆಗೆ ನಾವು ಬರುವವರೆಗೂ ಕಾಯಬೇಕು, ಇಲ್ಲವಾದರೆ ನೀವು ಯಾರಿಗಾದರೂ ದೂರು ನೀಡಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ, ಪಶು ಇಲಾಖೆ ಎಂಬುದು ರೈತರ ಪಾಲಿಗೆ ಮರಣ ಶಾಸನ ಬರೆಯುವ ಇಲಾಖೆಯಾಗಿದೆ. ಔಷಧಿಗಳನ್ನು ದಾಸ್ತಾನು ಮಾಡಿರುವ ಕೊಠಡಿಗಳು ಕಸದ ತೊಟ್ಟಿಗಳಿಗಿಂತ ಕಡೆಯಾಗಿವೆ. ಹೋಬಳಿ ಮಟ್ಟದಲ್ಲಿರುವ ವೈದ್ಯರು ಹಣವಿಲ್ಲದೆ ಹಸುವನ್ನು ಸಹ ಮುಟ್ಟುವುದಿಲ್ಲ.

ಮೇವು ಮತ್ತು ನೀರಿಗಾಗಿ ಕಿ.ಮೀ ಗಟ್ಟಲೆ ಅಲೆದಾಡಿ ಹಸುಸಾಕಾಣಿಕೆ ಮಾಡಿ ತನ್ನ ಸ್ವಾಭಿಮಾನ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಬರುವ ಅನುದಾನಗಳನ್ನು ಪಡಯಬೇಕಾದರೆ ಮುಳ್ಳಿನ ದಾರಿಯಾಗಿದೆ, ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಆಗದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳೆಂದರೆ ಅಸಹ್ಯ: ಸರ್ಕಾರಿ ಪಶು ವೈದ್ಯರಿಗೆ ಹಳ್ಳಿಗಳೆಂದರೆ ಅಸಹ್ಯವಾಗಿದೆ. ಹಳ್ಳಿಗೆ ಬಂದರೆ ಹಣ ನೀಡದೆ ಯಾವುದೇ ಚಿಕಿತ್ಸೆ ನೀಡದೆ ಔಷದಿಗಳನ್ನು ಸಹ ಖಾಸಗಿ ಅಂಗಡಿಗಳಿಗೆ ಬರೆದುಕೊಡುತ್ತಾರೆ. ಜತೆಗೆ ಖಾಸಗಿ ಅಂಗಡಿಗಳು ನೀಡುವ ಹಿಂಡಿ ಬೂಸಾ ಪಶು ಆಹಾರ ತೀವ್ರ ಕಳಪೆ ಗುಣಮಟ್ಟ ನೀಡುತ್ತಾರೆ. ಜತೆಗೆ ಅಂಗಡಿ ಮಾಲೀಕರು ಮಾಡುವ ಬೆಲೆ ನಿಗದಿಗೆ ಹೈನೋದ್ಯಮ ಕುಟುಂಬಗಳು ತತ್ತರಿಸುತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆಯ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ, ನಾರಾಯಣ್‌, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್‌, ಶ್ರೀನಿವಾಸಪುರ ತಾಲೂಕು ತೆರ್ನಹಳ್ಳಿ ಆಂಜಿನಪ್ಪ, ರಂಜಿತ್‌, ಸಾಗರ್‌, ಚಂದ್ರಪ್ಪ, ಪುತ್ತೇರಿ ರಾಜು ಇತರರಿದ್ದರು.

ಹಳ್ಳಿಗಳಲ್ಲಿ ಸರ್ಕಾರಿ ವೈದ್ಯರು ನಾಪತ್ತೆ:

ತೀವ್ರ ಬರಗಾಲದ ಜತೆಗೆ ಸಾಲಬಾಧೆಗೆ ಸಿಲುಕಿ ತನ್ನ ಅಮೂಲ್ಯವಾದ ಜೀವನಕ್ಕೆ ಅಂತ್ಯ ಹೇಳುತ್ತಿರುವ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿ ರೈತರ ಜೀವನವನ್ನು ಕಾಪಾಡುತ್ತಿರುವ ಹೈನೋದ್ಯಮ ಇಂದು ಪ್ರಥಮ ಸ್ಥಾನದಲ್ಲಿದೆ. ಆದರೂ, ಜಿಲ್ಲೆಯ ಪಶು ಇಲಾಖೆ ಇದ್ದು ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಹಸುಗಳಿಗೆ ಬರುವ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ವೈದ್ಯರು ನಾಪತ್ತೆಯಾಗಿ ಖಾಸಗಿ ವೈದ್ಯರಿಗೆ ಸಾವಿರಾರು ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ವಿವರಿಸಿದರು.
ರೈತರ ಮನವಿಗೆ ಸ್ಪಂದನೆ: ಇಲಾಖೆಯಲ್ಲಿ ಅವಧಿ ಮುಗಿದಿರುವ ಔಷಧಿಗಳನ್ನು ತೆರವುಗೊಳಿಸಿ 1 ತಿಂಗಳ ಹಿಂದೆ ಔಷಧಿಗಳು ಬಂದಿದೆ. ಕೂಡಲೇ ಔಷಧಿಗಳನ್ನು ಸರಬರಾಜು ಮಾಡುತ್ತೇವೆ. ಜೊತೆಗೆ ಸರ್ಕಾರಿ ವೈದ್ಯರು ಗ್ರಾಮೀಣ ಪ್ರದೇಶಗಳ ಸೇವೆ ಮಾಡದ ಬಗ್ಗೆ ಹೆಚ್ಚಾಗಿ ಸಾರ್ವಜನಿಕ ದೂರುಗಳು ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಖಾಸಗಿ ಅಂಗಡಿಗಳಿಗೆ ಬರೆದು ಕೊಡಬಾರದು ಜೊತೆಗೆ ಹಿಂಡಿ ಬೂಸಾ ಕಳಪೆ ಪಶು ಆಹಾರ ನೀಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿದ ಇಲಾಖೆ ಉಪ ನಿರ್ದೇಶಕ ಮಧುಸೂದನ್‌ ರೆಡ್ಡಿ ಭರವಸೆ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next