Advertisement

ಬದಲಾಗಿದೆ ಜಗದ ನಿಯಮ : ಔಟ್ ಸೋರ್ಸ್

10:26 AM Apr 01, 2020 | Suhan S |

ಕೆಲವು ತಿಂಗಳುಗಳ ಹಿಂದಿನ ಮಾತು. ಊಬರ್‌ ಕಂಪನಿ ವಿರುದ್ಧ ಪ್ರತಿಭಟನೆ ಮಾಡಬೇಕು ಅಂತ ಒಂದಷ್ಟು ಜನ ತೀರ್ಮಾನ ಮಾಡಿ ಹುಡುಕಾಡಿದರೆ, ಊಬರ್‌ನ ರಿಜಿಸ್ಟರ್‌ ಆಫೀಸೇ ಇರಲಿಲ್ಲ. ಇನ್ನೆಲ್ಲಿ ಗಲಾಟೆ ಮಾಡುವುದು?

Advertisement

ಹಾಗೇನೇ, ತಂಪುಪಾನೀಯ ಕಂಪನಿಯ ಮಾಲೀಕರೊಬ್ಬರು ಹೇಳುತ್ತಿದ್ದರು: “ಸ್ವಾಮೀ, ನನ್ನ ಫ್ಯಾಕ್ಟರಿಗೆ ಬೆಂಕಿ ಬಿದ್ದರೂ ತಲೆ ಕೆಡಿಸಿಕೊಳ್ಳಲ್ಲ. ಬೀಳಲಿ ಬಿಡಿ’ ಅಂತ. ಅಷ್ಟು ಧೈರ್ಯವಾಗಿ ಹೇಗೆ ಹೇಳಿದರು ಅಂದುಕೊಂಡಿರಾ? ಅದಕ್ಕೂ ಕಾರಣವಿತ್ತು- ಅವರ ಫ್ಯಾಕ್ಟರಿಗಳಾವುವೂ ಅವರರಾಗಿರಲಿಲ್ಲ. ಎಲ್ಲವೂ ಔಟ್‌ ಸೋರ್ಸಿಂಗ್‌. ಊಬರ್‌ ಕಂಪನಿ, ಸ್ವಂತದ್ದೊಂದು ಆಫೀಸು ಇಲ್ಲದೆಯೂ ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿರುವುದು ಇದೇ ಔಟ್‌ ಸೋರ್ಸಿಂಗ್‌ನಿಂದಲೇ.

ಜಗತ್ತೇ ಔಟ್‌ ಸೋರ್ಸಿಂಗ್‌ ಮಯ :  ಹಿಂದೆ, ನಮ್ಮಲ್ಲಿ ಶೇ.87ರಷ್ಟು ಸರ್ಕಾರಿಉದ್ಯೋಗಿಗಳು ಇದ್ದರು. ಈಗ ಅವರ ಸಂಖ್ಯೆಶೇ.67ಕ್ಕೆ ಬಂದಿರುವುದು ಔಟ್‌ ಸೋರ್ಸಿಂಗ್‌ ನ ಪರಿಣಾಮದಿಂದಲೇ. ಜ್ಞಾಪಕ ಇದೆಯಾ? ಮೊನ್ನೆ ಹೊಸ ಖಾಸಗಿ ರೈಲು ಬಿಟ್ಟರಲ್ಲ, ಅದೂ ಔಟ್‌ ಸೋರ್ಸಿಂಗ್‌. ನಾವು ಔಟ್‌ ಸೋರ್ಸಿಂಗ್‌ ಅಂದರೆ, ಅಂಥದೊಂದು ವ್ಯವಸ್ಥೆ ಇರುವುದುಬಿಪಿಒ ಕಂಪನಿಗಳಲ್ಲಿ ಮಾತ್ರ ಅಂದುಕೊಂಡಿದ್ದೇವೆ. ಈಗ ಕಾಲ ಬದಲಾಗಿದೆ. ಪ್ರತಿ ದೇಶವೂ ಒಂದೊಂದು ಔಟ್‌ ಸೋರ್ಸಿಂಗ್‌ ಯೂನಿಟ್‌ನಂತಾಗಿದೆ. ಚೀನಾದಲ್ಲಿ ತಯಾರು ಮಾಡುವ ಶೇ.65ರಷ್ಟು ವಸ್ತುಗಳು ಚೀನಾ ಪ್ರಾಡಕ್ಟಲ್ಲ. ಬದಲಾಗಿ, ಬೇರೆ ದೇಶದ ಬ್ರಾಂಡ್‌ಗಳನ್ನು ಅಲ್ಲಿ ತಯಾರು ಮಾಡಿಕೊಡುತ್ತಾರೆ.

ಮೊನ್ನೆ, ಇಂಗ್ಲೆಂಡ್‌ನ‌ಲ್ಲಿ ಉದ್ಯಮಿಯೊಬ್ಬರಿಗೆ- “ಕೋವಿಡ್ 19 ಬಂದಿದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ಗಳು ಬೇಕು. ತಯಾರು ಮಾಡಿಕೊಡಿ’ ಅಂದರೆ, “ವೆಂಟಿಲೇಟರ್‌ ತಯಾರಿಸಲು ಬೇಕಾದ ಕಚ್ಚಾವಸ್ತುಗಳು ಜಪಾನ್‌, ಚೀನಾದಿಂದ ಬರಬೇಕು. ಎಲ್ಲಾ ಬಂದ್‌ ಆಗಿದೆ. ಈಗ ಆಗೋಲ್ಲ’ ಅಂದುಬಿಟ್ಟರು.

ಗಿಗ್‌ ಎಕಾನಮಿ :  ಇದನ್ನು ಗಿಗ್‌ ಎಕಾನಮಿ ಅಂತಾರೆ. ಉದ್ಯಮಿ ಅನಿಸಿಕೊಂಡವನಿಗೆ ಸ್ವಂತ ಫ್ಯಾಕ್ಟ್ರಿ, ಎಂಪ್ಲಾಯ್‌ಮೆಂಟ್‌ ಏನೂ ಇರೋಲ್ಲ. ಬ್ರಾಂಡ್‌ ಮಾತ್ರ ಇರುತ್ತದೆ. ಇನೋವೇಷನ್‌, ಆರ್‌ ಎನ್‌ ಡಿ ಮಾಡಿ ಅದನ್ನು ಬ್ರಾಂಡ್‌ನ‌ವರಿಗೆ ಮಾರುತ್ತಾರೆ. ಅಂದರೆ, ಪ್ರತಿ ಹಂತವೂ ಔಟ್‌ ಸೋರ್ಸ್‌. ಎಲ್ಲಾ ನದಿಗಳ ನೀರು ಸಮುದ್ರ ಸೇರುವಂತೆ, ಎಲ್ಲರ ಕೆಲಸ ಒಂದೇ ಬ್ರಾಂಡ್‌ಗಾಗಿ ನಡೆಯುತ್ತಿರುತ್ತದೆ.

Advertisement

ಇವತ್ತು ಬೆಂಗಳೂರು ಒಂದರಲ್ಲೇ ಮೂರು ಸಾವಿರ ಬ್ಯಾಕ್‌ ಆಫೀಸ್‌ ಗಳು ಇವೆ. ಬೋಯಿಂಗ್‌, ಯುದ್ಧ ಉಪಕರಣ ತಯಾರು ಮಾಡುವ ಬಾಸ್ಟ್‌ ಆ್ಯಂಡ್‌ ಡೈನಾಮಿಕ್‌ ನಂಥ ಕಂಪನಿಗಳ ಬ್ಯಾಕ್‌ ಆಪೀಸ್‌ ಇಲ್ಲೇ ಇರೋದು. ಈ ಕಂಪನಿಗಳಿಗೆ ಕಳೆದ ವರ್ಷ 3,200 ಉತ್ಪನ್ನಗಳಿಗೆ ಪೇಟೆಂಟ್‌ ಸಿಕ್ಕವು. ಇದು ಬಿಗ್‌ ಎಕಾನಮಿಯ ಕಾಲಘಟ್ಟ. ಇಲ್ಲಿ ಓನರ್‌ ಶಿಪ್‌ ಇರೋಲ್ಲ. ನಾನು ಕಾರು ಮಾಲೀಕ ಅಂತ ಹೇಳಿಕೊಳ್ಳುವುದಕ್ಕಿಂತ, ಎಂಥ ಕಂಪನಿಗೆ ಕಾರುಗಳನ್ನು ಅಟ್ಯಾಚ್‌ ಮಾಡಿದ್ದೇನೆ ಅನ್ನೋದು ಈಗ ಹೆಚ್ಚು ಪ್ರಸ್ಟೀಜ್‌ ವಿಷಯ.

ಒಂದೇ ಒಂದು ಫ್ಯಾಕ್ಟ್ರಿ ಇಲ್ಲ! :  ಐಟಿಸಿ ಕಂಪನಿಯದ್ದು 4 ಸಾವಿರ ಕೋಟಿಯಷ್ಟು ಫ‌ುಡ್‌ ಬ್ಯುಸಿನೆಸ್‌ ಇದೆ. ಆದರೆ ಅವರಿಗೆ ಸೇರಿದ್ದು ಅನ್ನುವಂಥ ಒಂದೇ ಒಂದು ಫ್ಯಾಕ್ಟ್ರಿ ಇಲ್ಲ. ಹಿಂದೂಸ್ತಾನ್‌ ಲೀವರ್‌ ಕಂಪನಿ ಏನೇನೆಲ್ಲಾ ತಯಾರು ಮಾಡುತ್ತದೆ ಗೊತ್ತಲ್ಲ? ಅದರದು ಕೂಡ ಗಟ್ಟಿಯಾದ ಒಂದು ಫ್ಯಾಕ್ಟ್ರಿ ಇಲ್ಲ. ಎಲ್ಲವೂ ಔಟ್‌ ಸೋರ್ಸ್‌. ಈ ರಂಗದಲ್ಲಿ ಡಿಸೈನ್‌, ಟೆಕ್ನಾಲಜಿ, ಪೇಟೆಂಟ್‌ ಇವಿಷ್ಟೇ ಮುಖ್ಯ. ಇವತ್ತು, ಕೋವಿಡ್ 19 ಯಾವ ಮಟ್ಟಿಗೆ ಹರಡಲಿದೆ ಅನ್ನುವುದನ್ನು ಖಚಿತವಾಗಿ ಹೇಳಲು ಮನುಷ್ಯನಿಗೆ ಸಾಧ್ಯವಾಗುತ್ತಿಲ್ಲ. ಆದರೆ, ಕಂಪ್ಯೂಟರ್‌ ಹೇಳ್ತಿದೆ. ಯಾಕೆಂದರೆ, ಮನುಷ್ಯ ತನ್ನ ಬುದ್ಧಿವಂತಿಕೆಯನ್ನೂ ಔಟ್‌ಸೋರ್ಸ್‌ ಮಾಡ್ತಾ ಇದ್ದಾನೆ.

ಉದ್ಯೋಗ ಸಿಗಲ್ವಾ? :  ಇವತ್ತಿನ ಔಟ್‌ಸೋರ್ಸ್‌ ಜಗತ್ತಿನಲ್ಲಿ, ಖಾತ್ರಿಯಾದ ಉದ್ಯೋಗ ಸಿಗುವುದು ಬಹಳ ಕಷ್ಟ. 25ನೇ ವಯಸ್ಸಿಗೆ ಕೆಲಸಕ್ಕೆ ಸೇರಿ, 60 ನೇ ವಯಸ್ಸಿಗೆ ನಿವೃತ್ತಿ ಹೊಂದುವುದು, ಪೆನ್ಷನ್‌ ತಗೊಂಡು ಜೀವನ ನಡೆಸುವ ಕ್ರಮ ಇಲ್ಲವೇ ಇಲ್ಲ. ಈ ಅವಧಿಯಲ್ಲಿ, ಇವತ್ತಿನ ಹುಡುಗರು ಹತ್ತು ಕಂಪನಿ ಬದಲಾಯಿಸಿರುತ್ತಾರೆ. ಇದೇ ಅರ್ಹತೆ. ಸಾರ್‌, ಟೈಪಿಸ್ಟಾಗಿದ್ದೆ ಅಂತ ಇವಾಗ ಅಂದರೆ ಪ್ರಯೋಜನ ಇಲ್ಲ. ಏಕೆಂದರೆ, ಈಗ ಟೈಪಿಂಗ್‌ ಇಲ್ಲ. ಟೈಪಿಂಗ್‌ ಕೂಡ ಅಡಾಪ್ಟ್  ಮೂಲಕ, ಎಂಪ್ಲಾಯ್‌ ಎಬಿಲಿಟಿ ಜಾಸ್ತಿ ಮಾಡಿಕೊಳ್ಳಬೇಕು. ಎಬಿಲಿಟಿ, ಎಜುಲಿಟಿ, ಟೆಕ್ನಿಕಲ್‌ ಕೇಪಬಲಿಟಿ ಇದೇ ಕ್ಯಪಾಸಿಟಿ. ಈ ಚೈನ್‌ ಲಿಂಕ್‌ನಲ್ಲಿ ಒಂದು ತಪ್ಪಿ ಹೋದರೂ, ಉದ್ಯೋಗಿ ಔಟ್‌ ಡೇಟೆಡ್‌ ಆಗಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ಮದುವೆ ವಿಚಾರದಲ್ಲಿಯೂ ಔಟ್‌ ಸೋರ್ಸಿಂಗ್‌ ಚಾಲ್ತಿಯಲ್ಲಿದೆ. ಗಂಡು- ಹೆಣ್ಣು ಬಿಟ್ಟು, ಪುರೋಹಿತರು, ಛತ್ರ, ಡೋಲು ಬಾರಿಸೋರು ಅಷ್ಟೇಕೆ, ಹನಿಮೂನ್‌ ಕೂಡ ಮದುವೆ ಪ್ಯಾಕೇಜ್‌ನಲ್ಲಿ ಇರುತ್ತದೆ. ಅಂದರೆ, ಇವೆಲ್ಲವೂ ಔಟ್‌ ಸೋರ್ಸಿಂಗೇ… ಈ ಔಟ್‌ ಸೋರ್ಸಿಂಗ್‌ ಮಾಯೆ ಅದೆಲ್ಲಿಗೆ ಹೋಗಿ ನಿಲ್ಲುವುದೋ ನೋಡಬೇಕು.

 

 -ಡಾ. ಕೆ.ಸಿ. ರಘು

Advertisement

Udayavani is now on Telegram. Click here to join our channel and stay updated with the latest news.

Next