ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಜೂನ್ 28ರಂದು ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಎಲ್ಲರ ಮನ ಮಿಡಿಯುವಂತೆ ಮಾಡಿತ್ತು.
ದೋರನಹಳ್ಳಿ ಗ್ರಾಮದ ರೈತ ಭೀಮರಾಯ ಶಿವಪ್ಪ ಸುರುಪುರ ದಂಪತಿ ನಾಲ್ಕು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಡೀ ಕುಟುಂಬವನ್ನೇ ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದ ಮಗಳು ಮುಂದೆ ಜೀವನ ನಡೆಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ ಬದುಕು ನಡೆಸಲು ಕೈಹಿಡಿದೆ.
ಘಟನೆಯ ಬಳಿಕ ಆ ಕುಟುಂಬದಲ್ಲಿ ಬದುಕುಳಿದ ಏಕೈಕ ಮಗಳು ಚಂದ್ರಕಲಾಗೆ ಜೀವನ ಸಾಗಿಸಲು ಜಿಲ್ಲಾಡಳಿತ ಆಸರೆಯಾಗಿದ್ದು ಶಹಾಪುರ ನಗರಸಭೆ ಉದ್ಯೋಗ ನೀಡಿದೆ. ಚಂದ್ರಕಲಾಗೆ ಶಹಾಪುರ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ಹುದ್ದೆಗೆ ನೇಮಿಸಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ . ಆದೇಶ ಪತ್ರವನ್ನು ಶಹಾಪುರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ವಿತರಿಸಿದ್ದಾರೆ.
ಇದನ್ನೂ ಓದಿ : 52ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದ ಪ್ರಕಾಶ್ ಜಾವಡೇಕರ್
ಕುಟುಂಬ ಸದಸ್ಯರನ್ನು ಕಳೆದುಕೊಂಡು ಕುಂದು ಹೋಗಿದ್ದ ಚಂದ್ರಕಲಾಗೆ ಜಿಲ್ಲಾಧಿಕಾರಿಗಳು ಧೈರ್ಯ ಹೇಳಿ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವ ಮಾತುಗಳನ್ನು ಹೇಳಿದ್ದು ಯಾವುದೇ ಕಾರಣಕ್ಕೂ ದೃತಿಗೆಡದೆ ಜೀವನದಲ್ಲಿ ಉತ್ಸಾಹದಿಂದ ಮುಂದೆ ಬರುವಂತೆ ಬೆನ್ನುತಟ್ಟಿದ್ದಾರೆ.
ಜೀವನದಲ್ಲಿ ತಮ್ಮವರೆಲ್ಲರನ್ನು ಕಳೆದುಕೊಂಡವರಿಗೆ ನಿಜವಾಗಿಯೂ ಬೇಕಿರುವ ಧೈರ್ಯವನ್ನು ಹೇಳಿರುವ ಜಿಲ್ಲಾಧಿಕಾರಿಗಳ ತಾಯಿಹೃದಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಈ ಕ್ಷಣಕ್ಕೆ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಶಹಾಪುರ ತಹಶೀಲ್ದಾರ ಜಗನ್ನಾಥರೆಡ್ಡಿ, ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ಶಹಾಪುರ ಸಿ.ಪಿ.ಐ. ಚೆನ್ನಯ್ಯ ಎಸ್ ಹಿರೇಮಠ ಇದ್ದರು.