Advertisement

ಬಿಎಸ್ಸೆನ್ನೆಲ್‌ ವ್ಯಾಪ್ತಿ ಪ್ರದೇಶದಿಂದ ಹೊರಕ್ಕೆ!

01:22 PM Mar 24, 2019 | Naveen |

ಕಾಣಿಯೂರು : ಕರೆಂಟ್‌ ಇಲ್ಲದಿದ್ರೆ ಇಲ್ಲಿ ಮೊಬೈಲ್‌ ಸಿಗ್ನಲ್‌ ಕೂಡ ಸಿಗುವುದಿಲ್ಲ. ಹೌದು ಕಾಣಿಯೂರಿನ ಬಿಎಸ್ಸೆನ್ನೆಲ್‌ ಮೊಬೈಲ್‌ ಟವರ್‌ ಪದೇ ಪದೇ ಕೆಟ್ಟು ಹೋಗುತ್ತಿದೆ. ಸರಿಯಾಗಿ ನೆಟ್‌ ವರ್ಕ್‌, ಇಂಟರ್ನೆಟ್‌ ಇಲ್ಲದೆ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಪ್ರತಿ ದಿನ ತಾಂತ್ರಿಕ ತೊಂದರೆಗಳು ಕಾಣುತ್ತಲೇ ಇದೆ. ಇಲಾಖೆಯ ನಿರ್ಲಕ್ಷ ಧೋರಣೆಯಿಂದಾಗಿ ಶೇ. 95 ಗ್ರಾಹಕರು ಸ್ಥಿರ ದೂರವಾಣಿ ಸಂಪರ್ಕವನ್ನು ರದ್ದುಗೊಳಿಸಿದ್ದಾರೆ.

Advertisement

ದೂರವಾಗುತ್ತಿರುವ ಗ್ರಾಹಕರು
ಕಾಣಿಯೂರು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‌ಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘಗಳು, ಶಾಲಾ ಕಾಲೇಜುಗಳು, ಆನ್‌ಲೈನ್‌ ಸೇವಾ ಕೇಂದ್ರಗಳು ಸಹಿತ ಹಲವಾರು ಕಚೇರಿಗಳಿವೆ. ಹೆಚ್ಚಿನವರು ಇಂಟರ್ನೆಟ್‌ ಬಳಕೆದಾರರಾಗಿದ್ದಾರೆ. ಆದರೆ ಇಲ್ಲಿ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಿಗುವುದೇ ಅಪರೂಪವಾಗಿದೆ. ಇಂಟರ್ನೆಟ್‌ಗಾಗಿ ಗ್ರಾಹಕರು ಖಾಸಗಿ ನೆಟ್‌ವರ್ಕ್‌ಗಳ ಮೊರೆ ಹೋಗಿದ್ದಾರೆ.

ಪ್ರತಿಭಟನೆಯೂ ನಡೆದಿತ್ತು
ಕಾಣಿಯೂರಿನ ಬಿಎಸ್ಸೆನ್ನೆಲ್‌ ದೂರವಾಣಿ ಕೇಂದ್ರದಲ್ಲಿ ಟವರ್‌ ನೆಟ್‌ ವರ್ಕ್‌ ಸಮಸ್ಯೆ ಬಗೆಹರಿಸಬೇಕು. ಜನರೇಟರ್‌ ವ್ಯವಸ್ಥೆ ಮಾಡಬೇಕು. ಸಿಬಂದಿ ಕೊರತೆ ನೀಗಿಸಬೇಕೆಂದು ಕೆಲ ತಿಂಗಳ ಹಿಂದೆ ಸಾರ್ವಜನಿಕರಿಂದ ಪ್ರತಿಭಟನೆಯೂ ನಡೆದಿತ್ತು. ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಇಲಾಖಾಧಿಕಾರಿಗಳು ಈ ಸಂದರ್ಭ ಭರವಸೆ ನೀಡಿದ್ದರು. ಆದರೆ ಲೋಪ ಸರಿಪಡಿಸುವಲ್ಲಿ ಉದಾಸೀನತೆ ತೋರಿರುವ ಮೂಲಕ ಸಮರ್ಪಕ ರೀತಿಯಲ್ಲಿ ಸೇವೆ ಒದಗಿಸಲು ಬಿಎಸ್ಸೆನ್ನೆಲ್‌ ವಿಫಲವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಶೀಘ್ರ ಸಮಸ್ಯೆ ಬಗೆಹರಿಸಿ
ಕಾಣಿಯೂರಿನ ಬಿಎಸ್ಸೆನ್ನೆಲ್‌ ಟವರ್‌ ನೆಟ್‌ವರ್ಕ್‌ನ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆ ಇದರಿಂದ ಬೇಸತ್ತಿದ್ದಾರೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರಕಾರಿ ಕಚೇರಿಗಳಲ್ಲಿನ ಕೆಲಸ ಕಾರ್ಯಗಳು ಸಕಾಲದಲ್ಲಿ ಆಗುತ್ತಿಲ್ಲ. ಇನ್ನು ಮುಂದೆಯಾದರೂ ಇಂತಹ ಸಮಸ್ಯೆಯನ್ನು ಶೀಘ್ರದಲ್ಲಿ ನೀಗಿಸಬೇಕು.
ಚಂದ್ರಹಾಸ ಗೌಡ ಅಗಳಿ,
    ಬಿಎಸ್ಸೆನ್ನೆಲ್‌ ಬಳಕೆದಾರ

ಕೆಲಸಗಳೆಲ್ಲ ಬಾಕಿ ಉಳಿದಿವೆ
ಕಾಣಿಯೂರಿನ ಬಿಎಸ್ಸೆನ್ನೆಲ್‌ ಟವರ್‌ ನ ನೆಟ್‌ವರ್ಕ್‌ ಸಮಸ್ಯೆಯ ಕುರಿತು ಗ್ರಾ.ಪಂ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಲಾಗಿದೆ. ಅಲ್ಲದೇ ಸಮಸ್ಯೆ  ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ನಡೆದಿದೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಪಂಚಾಯತ್‌ನ ಕೆಲಸಗಳು ಪೆಂಡಿಂಗ್‌ ಆಗಿದೆ. ಈ ಬಗ್ಗೆ ಇನ್ನೊಮ್ಮೆ ನಿರ್ಣಯ ಮಾಡಲಾಗುವುದು.
– ಮಾಧವಿ ಕೋಡಂದೂರು,
ಅಧ್ಯಕ್ಷರು, ಗ್ರಾ.ಪಂ. ಕಾಣಿಯೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next