ಮೈಸೂರು: ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಮತ್ತು ಕೋಮುವಾದಿ ಬಿಜೆಪಿ ಅಭ್ಯರ್ಥಿಗಳ ನಡುವೆ ಇಲ್ಲಿ ಉಪಚುನಾವಣೆ ನಡೆಯಲಿದೆಯೇ ಹೊರತು ನನ್ನ ಮತ್ತು ಶ್ರೀನಿವಾಸಪ್ರಸಾದ್ ನಡುವೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಂಜನಗೂಡು ನಗರದ ವಿದ್ಯಾವರ್ಧಕ ಶಾಲೆ ಮೈದಾನದಲ್ಲಿ ಭಾನುವಾರ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀನಿವಾಸ ಪ್ರಸಾದ್‌ರ ಪ್ರತಿಷ್ಠೆಯಿಂದಾಗಿ ನಂಜನ ಗೂಡು ಕ್ಷೇತ್ರದಲ್ಲಿ ಉಪ ಚುನಾವಣೆ ಎದು ರಾಗಿದೆ. ಬರಗಾಲದ ಈ ಸಂದರ್ಭದಲ್ಲಿ ಸರ್ಕಾರಕ್ಕೂ ಅನವಶ್ಯಕವಾಗಿ ಖರ್ಚು, ಕಾರ್ಯಕರ್ತರಿಗೂ ಶ್ರಮ. ಇಂತಹ ಸಂದರ್ಭದಲ್ಲಿ ಈ ಉಪ ಚುನಾವಣೆ ಬೇಕಿತ್ತಾ ಎಂಬುದಕ್ಕೆ ಶ್ರೀನಿವಾಸಪ್ರಸಾದ್ ಉತ್ತರ ಹೇಳಲಿ ಎಂದು ಪ್ರಶ್ನಿಸಿದರು.
ಶ್ರೀನಿವಾಸಪ್ರಸಾದ್ ಮಂತ್ರಿಯಾಗಿದ್ದಾಗ ನನ್ನ ವಿರುದ್ಧ ಒಂದೂ ಮಾತನಾಡಲಿಲ್ಲ. ಮಂತ್ರಿಯಾಗಿದ್ದಾಗ ಅವರಿಗೆ ಸ್ವಾಭಿಮಾನ ಇರಲಿಲ್ಲವೇ? ಮಂತ್ರಿ ಸ್ಥಾನ ಹೋದ ನಂತರ ಸ್ವಾಭಿಮಾನಿ ಸಮಾವೇಶ ಮಾಡಿದರೆ ಜನರಿಗೆ ಅರ್ಥ ಆಗುವುದಿಲ್ಲವೇ? ನಂಜನಗೂಡು ಕ್ಷೇತ್ರದ ಜನತೆ ನಿಮಗೆ ಐದು ವರ್ಷದ ಜನಾದೇಶ ನೀಡಿದ್ದರು, ಅದನ್ನು ಧಿಕ್ಕರಿಸಿ ಮತ್ತೆ ಜನರ ಬಳಿಗೆ ಬಂದಿದ್ದೀರಿ, ನಿಜವಾದ ಸ್ವಾಭಿಮಾನಿಗಳಾದ ಕ್ಷೇತ್ರದ ಜನರು ಪಾಠ ಕಲಿಸುತ್ತಾರೆ ಎಂದರು.
ಹತಾಶರಾಗಿರುವ ಶ್ರೀನಿವಾಸಪ್ರಸಾದ್, ನನ್ನ ಮೇಲೆ ಸಿಟ್ಟಿನಿಂದ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಅವರ ಉದ್ದೇಶ ಅರ್ಥ ಆಗಿರುವುದರಿಂದ ಅವರು ಎಷ್ಟೇ ಮಾತನಾಡಿದರೂ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಅಂಬೇಡ್ಕರ್‌ವಾದಿ ಎನ್ನುತ್ತಿದ್ದ ಶ್ರೀನಿವಾಸ ಪ್ರಸಾದ್ ಈಗ ತಮ್ಮ ಸ್ವಾರ್ಥ ಕ್ಕಾಗಿ ಮನುವಾದಿ ಪಕ್ಷಕ್ಕೆ ಹೋಗಿ, ಬಿಜೆಪಿ ಸರ್ಕಾರ ಮತ್ತು ಮೋದಿಯನ್ನು ಹೊಗಳು ತ್ತಿದ್ದಾರೆ. ದೇಶದಲ್ಲಿ ಒಗ್ಗಟ್ಟು, ಐಕ್ಯತೆ ಉಳಿಯ ಬೇಕಾದರೆ ಇಂಥವರಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದರು.
ಐದು ಬಾರಿ ಲೋಕಸಭಾ ಸದಸ್ಯರಾಗಿ, 9 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಹೇಳಿ? ನನಗೂ ಸಿದ್ದರಾಮಯ್ಯನಿಗೂ ಹೋರಾಟ ಎಂದರೆ ಈ ಕ್ಷೇತ್ರದ ಜನ ಮತ ನೀಡುವುದಿಲ್ಲ. ಸಿದ್ದರಾಮಯ್ಯನನ್ನು ನಾನೇ ಗೆಲ್ಲಿಸಿದ್ದು ಅನ್ನುವ ಪ್ರಸಾದ್, 1983ರ ಚುನಾವಣೆಯಲ್ಲಿ ನಾನು ಪಕ್ಷೇತರ ನಾಗಿ ಗೆದ್ದಾಗ ಎಲ್ಲಿದ್ದರು, ಕ್ಷೇತ್ರದ ಜನ ಮತ ನೀಡಿದ್ದರಿಂದ ನಾನು ಗೆಲುವು ಸಾಧಿಸಿ ದ್ದೇನೆಯೇ ಹೊರತು ಒಬ್ಬ ವ್ಯಕ್ತಿಯಿಂದ ಸೋಲು-ಗೆಲುವು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕನಿಷ್ಠ ಜಾnನ ಅವರಿಗಿದ್ದರೆ ಸಾಕು ಎಂದು ಶ್ರೀನಿವಾಸಪ್ರಸಾದ್ ವಿರುದ್ಧ ವಾಗ್ಧಾಳಿ ನಡೆಸಿದರು.
ಸಮಾಜ ಒಡೆಯುತ್ತೆ: ಹಿಂದೂ – ಮುಸ್ಲಿಂ – ಕ್ರೆ„ಸ್ತರ ಹೆಸರಲ್ಲಿ ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜಾತೀ-ಧರ್ಮದ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ಯಡಿಯೂರಪ್ಪ, ಈ ಕ್ಷೇತ್ರದ ಅಭ್ಯರ್ಥಿ ನಾನೇ ಎನ್ನುತ್ತಿದ್ದಾರೆ. ಅವರಿಗೆ ನಂಜನಗೂಡು ಕ್ಷೇತ್ರದ ಬಗ್ಗೆ ಗೊತ್ತಿಲ್ಲ. ಇಲ್ಲಿನ ಜನ ಯಾವತ್ತೂ ಕೋಮುವಾದಿ ಪಕ್ಷವನ್ನು ಗೆಲ್ಲಿಸಿಲ್ಲ. ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆದ್ದಿರುವುದು. ಈ ಚುನಾವಣೆಯಲ್ಲೂ ದುರಂಹಕಾರವಿಲ್ಲದ ಕಳಲೆ ಕೇಶವಮೂರ್ತಿ ಅಂಥವರನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಸಂಸದ ಆರ್. ಧ್ರುವ ನಾರಾಯಣ, ಸಚವಿರಾದ ಬಸವರಾಜ ರಾಯರೆಡ್ಡಿ, ತನ್ವೀರ್, ಶಾಸಕರಾದ ಪುಟ್ಟರಂಗ ಶೆಟ್ಟಿ, ಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಮಾತನಾಡಿದರು. ಸಚಿವ ಯು.ಟಿ. ಖಾದರ್, ಶಾಸಕರಾದ ಎಂ.ಕೆ. ಸೋಮಶೇಖರ್, ಜಯಣ್ಣ, ನರೇಂದ್ರ ಸ್ವಾಮಿ, ಅಭ್ಯರ್ಥಿಗಳಾದ ಕಳಲೆ ಕೇಶವಮೂರ್ತಿ, ಡಾ.ತಾ ಮಹದೇವ ಪ್ರಸಾದ್, ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್ ಉಪಸ್ಥಿತರಿದ್ದರು.