ಹೊಸದಿಲ್ಲಿ: “ನಮ್ಮ ಫ್ರಾಂಚೈಸಿ ಈ ಬಾರಿ ಗೆಲುವಿನ ಪಡೆಯೊಂದನ್ನು ಕಟ್ಟಿದೆ. ಪ್ರಶಸ್ತಿ ಗೆಲುವಿನ ಅವಕಾಶ ಉಜ್ವಲವಾಗಿದೆ’ ಎಂದು ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕ, ಕರ್ನಾಟಕದ ಮಾಯಾಂಕ್ ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಪ್ರಸಕ್ತ ಋತುವಿನಲ್ಲಿ ಶಿಖರ್ ಧವನ್, ಕಾಗಿಸೊ ರಬಾಡ, ಲಿಯಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೊ, ಒಡೀನ್ ಸ್ಮಿತ್ ಅವರಂಥ ಟಿ20 ಸ್ಪೆಷಲಿಸ್ಟ್‌ಗಳಿಗೆ ಬಲೆ ಬೀಸಿದೆ. ಜತೆಗೆ ಆರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಪವರ್-ಹಿಟ್ಟರ್ ಶಾರೂಖ್ ಖಾನ್ ಅವರನ್ನು ಮರಳಿ ಕರೆಸಿಕೊಂಡಿದೆ.
“ಎಲ್ಲರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ, ಒತ್ತಡವನ್ನು ನಿಭಾಯಿಸಿ ನಿಲ್ಲುವಲ್ಲಿ ಯಶಸ್ವಿಯಾದರೆ ನಾವು ಪ್ರಶಸ್ತಿ ಪೈಪೋಟಿ ರೇಸ್‌ನಲ್ಲಿ ಓಟ ಬೆಳೆಸಲಿದ್ದೇವೆ’ ಎಂದು ಅಗರ್ವಾಲ್ ಹೇಳಿದರು.
ಅಗರ್ವಾಲ್ ಕಳೆದ 4 ಋತುಗಳಿಂದ ಪಂಜಾಬ್ ಪರ ಆಡುತ್ತಿದ್ದಾರೆ. ಕಳೆದೆರಡು ಸೀಸನ್‌ಗಳಲ್ಲಿ 400 ರನ್ ಪೇರಿಸಿದ್ದಾರೆ. ಜತೆಗಾರ ಹಾಗೂ ನಾಯಕ ಕೆ.ಎಲ್. ರಾಹುಲ್ ನೂತನ ಲಕ್ನೋ ತಂಡಕ್ಕೆ ತೆರಳಿದ್ದರಿಂದ ಅಗರ್ವಾಲ್‌ಗೆ ನಾಯಕತ್ವದ ಜವಾಬ್ದಾರಿ ಲಭಿಸಿದೆ.