Advertisement

ನೀರಿಲ್ಲದೇ ಜನರಿಗೆ ಸಂಕಟಟ್ಯಾಂಕರ್‌ನವರಿಗೆ ಚೆಲ್ಲಾಟ!

10:29 AM Apr 26, 2019 | Naveen |

ಔರಾದ: ಬೇಸಿಗೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಔರಾದ ಪಟ್ಟಣದಲ್ಲಿ ಕುಡಿಯುವ ನೀರಿನ ಮೂಲವಿಲ್ಲದಾಗಿ, ಟ್ಯಾಂಕರ್‌ ನೀರಿಗೂ ಕೂಡ ಬಂಗಾರದ ಬೆಲೆ ಬಂದಿದೆ. ಇದರಿಂದ ಪಟ್ಟಣದ ನಿವಾಸಿಗಳು ನಿತ್ಯ ನೀರಿಗಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

Advertisement

ಪಟ್ಟಣದಲ್ಲಿ ಪ್ರತಿನಿತ್ಯ ನಲ್ಲಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡದಿರುವುದರಿಂದ ಜನರು ಗೈರಾಣಾಗುತ್ತಿದ್ದಾರೆ. ಔರಾದ ಪಟ್ಟಣಕ್ಕೆ ಪ್ರತಿನಿತ್ಯ ತೇಗಂಪೂರ ಗ್ರಾಮದ ತೆರೆದ ಬಾವಿಯಿಂದ, ಬೋರಾಳ ಹಾಗೂ ಹಲ್ಲಳ್ಳಿ ಗ್ರಾಮದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಬೇಸಿಗೆ ಬಿಸಿಲು ಹೆಚ್ಚಾಗುತ್ತಿದಂತೆ ಜಲಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ನಾಲ್ಕು ವಾರಗಳಿಂದ ಪಟ್ಟಣದ ಜನತೆಗೆ ಟ್ಯಾಂಕರ್‌ ನೀರೆ ಗತಿಯಾಗಿದೆ.

ಪಟ್ಟಣದ ಜನತಾ ಬಡಾವಣೆ ಹಾಗೂ ಕನಕ ಬಡಾವಣೆಯ ಕೊಳವೆ ಬಾವಿಯಲ್ಲಿ ನಿತ್ಯ ಅಲ್ಪ ಸ್ವಲ್ಪ ನೀರು ಬರುತ್ತಿವೆ. ಹೀಗಾಗಿ ಪಟ್ಟಣದ ಬಹುತೇಕ ನಿವಾಸಿಗಳು ಎರಡು ಕಡೆಗೆ ಬೆಳಗ್ಗೆಯಿಂದಲೇ ಕೊಡಗಳನ್ನು ಸರತಿ ಸಾಲಿನಲ್ಲಿ ಇಟ್ಟು ನೀರು ತರುತ್ತಾರೆ.

ನೀರಿಗೆ ಬಂಗಾರದ ಬೇಲೆ: ಜಲಮೂಲಗಳು ಸಂಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತನಿಂದ ನಿತ್ಯ ಸರಬರಾಜು ಆಗುವ ನೀರು ಸ್ಥಗಿತವಾಗಿದೆ. ಇದರಿಂದ ಖಾಸಗಿ ಕೊಳವೆ ಬಾವಿಯ ಮಾಲೀಕರು ಹಾಗೂ ಟ್ಯಾಂಕರ್‌ ನೀರು ಸರಬರಾಜು ಮಾಡುವ ವ್ಯಾಪಾರಿಗಳು ಸೇರಿ ಜನರಿಂದ ಮನ ಬಂದಂತೆ ಹಣ ಪಡೆಯುತ್ತಿದ್ದಾರೆ. ವರ್ಷಪೂರ್ತಿ ಪ್ರತಿ ಟ್ಯಾಂಕ್‌ ನೀರಿಗೆ 200 ಪಡೆಯುವ ಟ್ಯಾಂಕರ್‌ ಮಾಲೀಕರು, ಸಿಕ್ಕ ಅವಕಾಶದ ಸದುಪಯೋಗ ಪಡೆಯುವ ಉದ್ದೇಶದಿಂದ ಪ್ರತಿ ಟ್ಯಾಂಕ್‌ ನೀರಿಗೆ 600 ರೂ. ಸುಲಿಗೆ ಮಾಡುತ್ತಿದ್ದಾರೆ. ಪಟ್ಟಣದ ನಿವಾಸಿಗಳು ಅನಿವಾರ್ಯವಾಗಿ ವ್ಯಾಪಾರಿಗಳು ಹೇಳಿದಷ್ಟು ಹಣ ನೀಡಿ ನಿತ್ಯ ನೀರು ಖರಿದಿಸುತ್ತಿದ್ದಾರೆ.

ತಾಲೂಕು ಆಡಳಿತ ಮೌನ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಖಾಸಗಿ ಟ್ಯಾಂಕರ್‌ ಮಾಲೀಕರು ಮಾತ್ರ ಜನರಿಂದ ಮನ ಬಂದಂತೆ ಹಣ ವಸೂಲು ಮಾಡುತ್ತಿದ್ದಾರೆ. ಆದರೂ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ ಬಗೆ ಹರಿಸಲು ಯತ್ನಿಸದಿರುವುದು ಸಾರ್ವಜನಿಕರಲ್ಲಿ ನೋವು ಉಂಟು ಮಾಡಿದೆ.

Advertisement

ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಸರ್ಕಾರ ಪ್ರತಿ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡಿದೆ ಜನನಾಯಕರು ಎಂದು ಸಭೆ ಸಮಾರಂಭದಲ್ಲಿ ಹೇಳುತ್ತಿದ್ದಾರೆ. ಆದರೆ ಪಟ್ಟಣದ ನಿವಾಸಿಗಳು ನಿತ್ಯ ನೀರಿಗಾಗಿ ಪರದಾಡುತ್ತಿದ್ದರೂ ಸಮಸ್ಯೆ ಬಗೆ ಹರಿಸಲು ಒಬ್ಬ ಅಧಿಕಾರಿಯೂ ಮುಂದೆ ಬಾರದಿರುವುದು ಹಲವು ಸಂಶಯಗಳಿಗೆ ಎಡೆ ಮಾಡುತ್ತಿದೆ.

ಪಟ್ಟಣದಲ್ಲಿನ ನೀರಿನ ಸಮಸ್ಯೆ ಬಗೆ ಹರಿಸಲು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ತಕ್ಷಣವೇ ತಿಳಿಸುತ್ತೇನೆ. ಖಾಸಗಿ ಟ್ಯಾಂಕರ್‌ ಮಾಲೀಕರು ಸಾರ್ವಜನಿಕರಿಂದ ಕಡಿಮೆ ಹಣ ಪಡೆಯುವಂತೆ ಸೂಚನೆ ನೀಡುತ್ತೇನೆ.
ಎಂ.ಚಂದ್ರಶೇಖರ,
ತಹಶೀಲ್ದಾರ್‌

ಕೊಡ ನೀರಿಗಾಗಿ ನಿತ್ಯ ನರಳುವ ಸ್ಥಿತಿ ಬಂದಿದೆ. ನೀರಿನ ಸಮಸ್ಯೆಯನ್ನು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಚಂದ್ರಶೇಖರ ಪಾಟೀಲ,
ಸ್ಥಳೀಯ ನಿವಾಸಿ

ರವೀಂದ್ರ ಮುಕ್ತೇದಾರ್‌

Advertisement

Udayavani is now on Telegram. Click here to join our channel and stay updated with the latest news.

Next